ಮೆಟ್ರೋದಲ್ಲಿ ಹಗಲು ದರೋಡೆ..!

Update: 2017-12-08 18:37 GMT

ಮಾನ್ಯರೆ,

‘ನಮ್ಮ ಮೆಟ್ರೋ’ ರೈಲು ಬಂದ ನಂತರ ಬೆಂಗಳೂರಿಗರು ಸಂತಸ ಪಟ್ಟಿದ್ದರು. ಕೈಗೆಟಕುವ ಬೆಲೆಯಲ್ಲಿ ಆರಾಮದಾಯಕ ಪ್ರಯಾಣವನ್ನು ಜನತೆ ನಿರೀಕ್ಷಿಸಿದ್ದರು. ಆದರೆ ಇದೀಗ ಈ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡುವುದು ದುಬಾರಿ ಅನ್ನಿಸುವಂತಿದೆ. ಯಾಕೆಂದರೆ ಪ್ರಯಾಣ ಮಾಡುವುದಕ್ಕೆ ಟಿಕೆಟ್ ಪಡೆದುಕೊಂಡರೂ ನಾವು ಕೊಂಡೊಯ್ಯುವ ಬ್ಯಾಗ್‌ಗೂ ಪ್ರತ್ಯೇಕ ಟಿಕೆಟ್ ಹಣ ಕೊಡಬೇಕಾಗಿದೆ. ಇದು ಯಾವ ನಿಯಮ?
 
ಇದೀಗ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡುವಾಗ ನಮ್ಮ ಜೊತೆ ಬ್ಯಾಗ್ ಇದ್ದರೆ ಇದಕ್ಕೆ ಪ್ರತ್ಯೇಕ ಟಿಕೆಟ್ ದರವನ್ನು ಬಿಎಂಆರ್‌ಸಿಎಲ್ ನಿಗದಿ ಮಾಡಿದೆ. ಅಂದರೆ ಪ್ರತೀ ಬ್ಯಾಗ್‌ಗೆ ರೂ. 30ರ ಟಿಕೆಟ್ ಪಡೆದುಕೊಳ್ಳಬೇಕು. ಮೊನ್ನೆ ಗುರುವಾರದಿಂದಲೇ ಕೆಲ ನಿಲ್ದಾಣಗಳಲ್ಲಿ ಈ ಹೊಸ ನಿಯಮ ಜಾರಿಯಾಗಿದೆ. ಇದು ಪಕ್ಕಾ ದರೋಡೆಯಾಗಿದ್ದು ಹೀಗಾಗಿ ಮೆಟ್ರೋ ರೈಲು ಹತ್ತಲು ಹಿಂದೆ ಮುಂದೆ ನೋಡುವಂತಾಗಿದೆ. ಇಂತಹ ನಿಯಮಗಳನ್ನು ಹೇರುವಾಗ ಯಾವುದೇ ಮುನ್ಸೂಚನೆ ನೀಡಿಲ್ಲ. ಚಿಕ್ಕದಾಗಿರಲಿ ಅಥವಾ ದೊಡ್ಡದಿರಲಿ ಇದ್ಯಾವುದನ್ನೂ ಪರಿಗಣನೆ ಮಾಡದೆ ಎಲ್ಲಾ ಬ್ಯಾಗ್‌ಗಳಿಗೂ ಟಿಕೆಟ್ ಪಡೆಯಬೇಕೆನ್ನುವುದು ಹಗಲು ದರೋಡೆ ಅಲ್ಲವೇ..? ಈ ಕುರಿತು ಎಲ್ಲಿಯೂ ಸೂಚನಾ ಫಲಕ ಅಳವಡಿಸಿಲ್ಲ. ರೈಲು, ಕೆಎಸ್ಸಾರ್ಟಿಸಿ ಹಾಗೂ ಬಿಎಂಟಿಸಿಯಲ್ಲಿ ಬ್ಯಾಗ್‌ಗಳಿಗೆ ಪ್ರತ್ಯೇಕ ಟಿಕೆಟ್ ಇಲ್ಲ. ವಿಮಾನದಲ್ಲಿ 19 ಕೆ.ಜಿ ಗಿಂತ ಹೆಚ್ಚಿದ್ದರೆ ಮಾತ್ರ ರೂ. 20 ಸಂಗ್ರಹಿಸುತ್ತಾರೆ. ದಿಲ್ಲಿ ಮೆಟ್ರೋದಲ್ಲಿ ಇಂತಹ ನಿಯಮ ಇಲ್ಲ. ಆದರೆ ‘ನಮ್ಮ ಮೆಟ್ರೋ’ದಲ್ಲಿ ರೂ. 30 ಪಾವತಿ ಮಾಡದಿದ್ದರೆ ನಿಲ್ದಾಣದ ಒಳಗೆ ಬಿಡುವುದಿಲ್ಲ. ಆದ್ದರಿಂದ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಈ ಅಲಿಖಿತ ನಿಯಮ ರೂಪಿಸಿದ ನಿಲ್ದಾಣಗಳ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಜೊತೆಗೆ ಮೆಟ್ರೋ ರೈಲು ಪ್ರಯಾಣದ ವೇಳೆ ಬ್ಯಾಗ್‌ಗಳಿಗೆ ವಿಧಿಸಿರುವ ಟಿಕೆಟ್ ನಿಯಮವನ್ನು ಕೂಡಲೇ ರದ್ದು ಪಡಿಸಬೇಕು.

Writer - -ಶಂಶೀರ್ ಬುಡೋಳಿ, ಬೆಂಗಳೂರು

contributor

Editor - -ಶಂಶೀರ್ ಬುಡೋಳಿ, ಬೆಂಗಳೂರು

contributor

Similar News