'ಚಮಕ್' ಧ್ವನಿಸಾಂದ್ರಿಕೆಯ ಲೋಕಾರ್ಪಣೆ

Update: 2017-12-09 04:47 GMT

ಅದ್ದೂರಿಯಾಗಿ ನಡೆದ 'ಚಮಕ್' ಧ್ವನಿಸಾಂದ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ಜನಪದ ಗಾಯಕ ಪದ್ಮಶ್ರೀ ಸುಕ್ರಿ ಬೊಮ್ಮಗೌಡ ಮತ್ತು ತೆಲುಗಿನ ' ಅರ್ಜುನ್ ರೆಡ್ಡಿ ' ಖ್ಯಾತಿಯ ನಟ ವಿಜಯ ದೇವರಕೊಂಡ ವಿಶೇಷ  ಅತಿಥಿಗಳಾಗಿ ಪಾಲ್ಗೊಂಡಿದ್ದರು. 

"ಚಿತ್ರದಲ್ಲಿ ನಾಯಕ ಗೋಲ್ಡನ್ ಸ್ಟಾರ್ ಗಣೇಶ್ ಪ್ರಸೂತಿ ತಜ್ಞನ ನಿರ್ವಹಿಸಿದ್ದಾರೆ" ಎಂದು ನಿರ್ದೇಶಕ ಸುನಿ ತಿಳಿಸಿದರು. ಚಿತ್ರಕ್ಕೆ ' ಖುಷ್ ಖುಷಿ' ಎಂಬ ಶೀರ್ಷಿಕೆ ನೀಡುವ ಪ್ರಯತ್ನಕ್ಕೆ ಈ ಬಾರಿಯೂ ಸೋಲಾಯಿತು ಎಂದ ಸುನಿ, ಈ ಹಿಂದೆಯೂ ಎರಡು ಬಾರಿ ಇದೇ ಶೀರ್ಷಿಕೆಗಾಗಿ ಪ್ರಯತ್ನಿಸಿದ್ದಾಗಿ ತಿಳಿಸಿದರು.  ಕಾರ್ಯಕ್ರಮದ ನಾಯಕ ಸಂಗೀತ ನಿರ್ದೇಶಕ ಜೂಡ ಸ್ಯಾಂಡಿ ಚಿತ್ರದಲ್ಲಿ ಹಾಡಿದ ಅಭಿನಂದನ್,  ಸುಪ್ರಿಯಾ ಲೋಹಿತ್,  ಚೇತನ, ಶ್ರೇಯಾ ಮತ್ತು ಸಂಗೀತಜ್ಞ ನಾರಾಯಣ್ ರನ್ನು ವೇದಿಕೆಯಲ್ಲಿ ಪರಿಚಯಿಸಿದರು. ಚಮಕ್ ಚಿತ್ರದ ಮೂಲಕ 'ಕರ್ನಾಟಕದ ಕ್ರಶ್' ಎಂದು ಬಿರುದಾಂಕಿತೆಯಾಗಿರುವ ನಾಯಕಿ ರಶ್ಮಿಕಾ ಮಂದಣ್ಣ ತಮಗೆ ಚಿತ್ರದ ಭಾಗವಾಗಲು ಸಾಧ್ಯವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.  ಗಣೇಶನ ಜೋಡಿಯಾಗಿ ಜೊತೆಗೆ ಗೃಹಿಣಿಯಾಗಿ ಕಾಣಿಸಿಕೊಳ್ಳುತ್ತಿರುವುದಾಗಿ ಅವರು ತಿಳಿಸಿದರು. ನಾಯಕ ಗಣೇಶ್ ಮಾತನಾಡಿ ಜೂಡ ಸ್ಯಾಂಡಿಯ ಸಂಗೀತದ ಹಾಡುಗಳನ್ನು ಪ್ರಶಂಸಿಸಿದರು. "ಅರೆ ಅರೇ.." ಎಂಬ ಹಾಡು ನನ್ನ ಫೇವರಿಟ್ ಗೀತೆಯಾಗಿದೆ. ಈಗಾಗಲೇ ಚಿತ್ರದ ಟೀಸರ್ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬಂದಿವೆ. ಇದು ಒಂದು ಮನರಂಜನಾತ್ಮಕ ಹಾಸ್ಯ ಚಿತ್ರ. ನನ್ನ ಕಾಮಿಡಿ ಟೈಮ್ಸ್ ಸಮಯದಲ್ಲಿ ಇಂತಹ ಚಮಕ್ ತುಂಬಿದ ಸಾವಿರ ಸಂಚಿಕೆಯನ್ನು ನಿರ್ವಹಿಸಿದ್ದೆ. ಅಂಥ ಚಮಕ್ ಗಳಿರುವ ಚಿತ್ರ ಇದು ಎಂದರು. ವಿಜಯ್ ದೇವರಕೊಂಡ ಮೈಕ್ ಕೈಗೆತ್ತಿಕೊಂಡಾಗ ಕೇಳಿ ಬಂದ ಅಪಾರ ಕರತಾಡನದ ಶಬ್ದಕ್ಕೆ ಪ್ರತಿಕ್ರಿಯಿಸುತ್ತಾ,  "ಈ ಅಭಿಮಾನವನ್ನು ಕಂಡಾಗ ನಾನು ಆಂಧ್ರ ಪ್ರದೇಶದಲ್ಲೇ ಇರುವಂತಹ ಅನುಭವವಾಗುತ್ತದೆ ''ಎನ್ನುತ್ತಾ ಚಿತ್ರತಂಡಕ್ಕೆ ಶುಭ ಹಾರೈಸಿದರು. ಅವರು ಅಭಿಮಾನಿಗಳಿಗಾಗಿ ತಮ್ಮ ಚಿತ್ರದ ಸಂಭಾಷಣೆಯನ್ನು ಹೇಳಿದ್ದು ಅಲ್ಲದೆ, 'ಕಿರಿಕ್ ಪಾರ್ಟಿ' ಚಿತ್ರದ "ಬೆಳಗ್ಗೆದ್ದು ಯಾರ ಮುಖವಾ.." ಹಾಡಿನ ನಾಲ್ಕು ಸಾಲುಗಳನ್ನು ಗುನುಗಿದ್ದು ವಿಶೇಷವಾಗಿತ್ತು. "ನನ್ನ ಚಿತ್ರ ನೂರು ದಿನ ಓಡಿರಬಹುದು; ಆದರೆ ಗಣೇಶ್ ಸಿನಿಮಾ 860 ದಿನ ಓಡಿದ್ದು ಮರೆಯಲಾಗದು" ಎಂದು ವಿಜಯ್ ದೇವರಕೊಂಡ ಹೇಳಿದಾಗ ಚಪ್ಪಾಳೆ ಮತ್ತೊಮ್ಮೆ ಜೋರಾಗಿ ಕೇಳಿ‌ಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News