ಚುನಾವಣೆ ಬಂದಾಗ ಹಿಂದುಳಿದ ವರ್ಗದ ಕಾರ್ಡ್ ಬಳಸುವ ಮೋದಿ: ಬಿಜೆಪಿ ಬಂಡಾಯ ನಾಯಕ ಪಟೋಲೆ

Update: 2017-12-09 16:07 GMT

ನಾಗ್ಪುರ, ಡಿ.9: ಪ್ರಧಾನಿ ನರೇಂದ್ರ ಮೋದಿ ಕೇವಲ ಚುನಾವಣೆಯ ಸಮಯದಲ್ಲಿ ಮಾತ್ರ ತಾನು ಹಿಂದುಳಿದ ವರ್ಗಕ್ಕೆ ಸೇರಿದ ವ್ಯಕ್ತಿ ಎಂದು ಹೇಳುತ್ತಾರೆ. ಆಮೂಲಕ ತಮ್ಮ ಹಿಂದುಳಿದ ಕಾರ್ಡನ್ನು ಚುನಾವಣೆಯ ವೇಳೆ ಬಳಸುತ್ತಾರೆ ಎಂದು ಬಿಜೆಪಿಯ ಬಂಡಾಯ ನಾಯಕ ನಾನಾ ಪಟೋಲೆ ಕಿಡಿಕಾರಿದ್ದಾರೆ.

ಶುಕ್ರವಾರದಂದು ಬಿಜೆಪಿಗೆ ರಾಜೀನಾಮೆ ನೀಡಿದ ಮಹಾರಾಷ್ಟ್ರದ ಗೊಂಡ್ಯಾ-ಭಂಡಾರಾ ಕ್ಷೇತ್ರದ ಸಂಸದರಾದ ನಾನಾ ಪಟೋಲೆ, “ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ತಾನು ನೀಚ ಜಾತಿಗೆ ಸೇರಿದವನು ಎಂದು ಹೇಳುವಾಗ ನಾನು ಆಕ್ರೋಶಿತನಾದೆ. ನಾನು ಇತರ ಹಿಂದುಳಿದ ವರ್ಗಕ್ಕಾಗಿ ಪ್ರತ್ಯೇಕ ಸಚಿವಾಲಯಕ್ಕೆ ಆಗ್ರಹಿಸಿದಾಗ ಇದೇ ಮೋದಿ ನನ್ನ ಮೇಲೆ ಮುನಿಸಿಕೊಂಡಿದ್ದರು ಮಾತ್ರವಲ್ಲ ಅಂತಹ ಸಚಿವಾಲಯದ ಅಗತ್ಯವಿಲ್ಲ ಎಂದು ಹೇಳಿದ್ದರು” ಎಂದು ಆಂಗ್ಲ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಪ್ರಧಾನಿ ಹಿಂದುಳಿದ ವರ್ಗದ ಜನರ ಮತಕ್ಕಾಗಿ ತಮ್ಮನ್ನು ಒಬಿಸಿಗೆ ಸೇರಿದವ ಎಂದು ಹೇಳುವುದನ್ನು ಹೊರತುಪಡಿಸಿ ಇತರ ಹಿಂದುಳಿದ ವರ್ಗದ ಜನರ ಒಳಿತಿಗಾಗಿ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಪಟೋಲೆ ಕಿಡಿಕಾರಿದ್ದಾರೆ.

2014ರ ಲೋಕಸಭಾ ಚುನಾವಣೆಯ ವೇಳೆ ಅಧಿಕಾರಕ್ಕೆ ಬಂದರೆ ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೆ ತರುತ್ತೇವೆ ಮತ್ತು ರೈತರ ಬೆಲೆಗೆ ಸದ್ಯ ಇರುವುದಕ್ಕಿಂತ ಒಂದೂವರೆ ಪಟ್ಟು ಹೆಚ್ಚು ಬೆಲೆಯನ್ನು ನೀಡುತ್ತೇವೆ ಎಂದು ಪ್ರಧಾನಿ ಮೋದಿ ಆಶ್ವಾಸನೆ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದ ಕೂಡಲೇ ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೆ ತರುವುದಿಲ್ಲ ಎಂದು ಹೇಳಿ ಸರ್ವೋಚ್ಛ ನ್ಯಾಯಾಲಯದಲ್ಲಿ ಅಫಿದಾವಿತ್ ಸಲ್ಲಿಸುವ ಮೂಲಕ ರೈತರನ್ನು ವಂಚಿಸಿದ್ದರು ಎಂದು ಪಟೋಲೆ ಆಂಗ್ಲ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಆರೋಪಿಸಿದ್ದಾರೆ.

“ನಾನು ರೈತರ ಸಮಸ್ಯೆ ಬಗ್ಗೆ ಸಭೆಯಲ್ಲಿ ಮಾತನಾಡಿದರೆ ಪ್ರಧಾನಿಗೆ ಕೋಪ ಬರುತ್ತಿತ್ತು. ಇನ್ನು ಹಿಂದುಳಿದ ವರ್ಗಗಳ ಜನರ ಶೈಕ್ಷಣಿಕ ಮತ್ತು ಸಾಮಾಜಿಕ-ಆರ್ಥಿಕ ಸಮಸ್ಯೆಗಳನ್ನು ಪ್ರಸ್ತಾಪಿಸಿದಾಗಲೂ ಅವರು ಕೋಪಗೊಳ್ಳುತ್ತಿದ್ದರು. ಇದರಿಂದಾಗಿ ಪಕ್ಷವನ್ನು ತೊರೆಯುವ ನಿರ್ಧಾರ ಕೈಗೊಂಡೆ” ಎಂದು ತಿಳಿಸಿದ ಪಟೋಲೆ, “ನೋಟು ಅಮಾನ್ಯ ಮತ್ತು ಜಿಎಸ್‌ಟಿಯಿಂದ ಉಂಟಾಗಲಿರುವ ಅಡ್ಡ ಪರಿಣಾಮದ ಬಗ್ಗೆಯೂ ನಾನು ಮನವರಿಕೆ ಮಾಡಿದ್ದೆ, ಆದರೆ ಸರಕಾರ ನನ್ನ ಮಾತುಗಳನ್ನು ಕೇಳಲಿಲ್ಲ” ಎಂದು ಅವರು ಪತ್ರಿಕೆಗೆ ತಿಳಿಸಿದರು. ಕಳೆದ ಒಂದು ತಿಂಗಳಿನಿಂದ ನಾನು ಬಿಜೆಪಿ ಮತ್ತು ಪ್ರಧಾನಿ ವಿರುದ್ಧ ಟೀಕೆ ಮಾಡುತ್ತಲೇ ಬಂದಿದ್ದೇನೆ. ಆದರೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬಹುದು ಎಂಬ ಆಶಾವಾದದಿಂದ ಪ್ರಧಾನಿಯನ್ನು ಭೇಟಿಯಾಗಿ ಮಾತುಕತೆ ನಡೆಸಲು ಸಮಯ ಕೋರಿ ಹಲವು ಪತ್ರಗಳನ್ನೂ ಬರೆದೆ. ಆದರೆ ಅವರು ನನ್ನ ಪತ್ರಗಳಿಗೆ ಸ್ಪಂದಿಸಲಿಲ್ಲ. ಆದರೆ ಎರಡು ದಿನಗಳ ಹಿಂದೆ ಪ್ರಧಾನಿ ಮೋದಿ ತಾನು ಕೀಳು ಜಾತಿಗೆ ಸೇರಿದವ ಎಂದು ಭಾಷಣವೊಂದರಲ್ಲಿ ಹೇಳಿದಾಗ ನನಗೆ ಕೋಪ ಉಕ್ಕೇರಿತ್ತು. ಹಿಂದುಳಿದ ವರ್ಗದ ಒಳಿತಿಗೆ ಏನೂ ಮಾಡದ ಮೋದಿ ಚುನಾವಣೆಯ ಸಮಯದಲ್ಲಿ ತಾನೂ ಹಿಂದುಳಿದ ವರ್ಗಕ್ಕೆ ಸೇರಿದವ ಎಂದು ಹೇಳುವುದನ್ನು ಕೇಳಿ ಇನ್ನು ಪಕ್ಷದಲ್ಲಿ ಉಳಿಯಲಾರೆ ಎಂಬ ನಿರ್ಧಾರಕ್ಕೆ ಬಂದೆ ಎಂದು ನಾನಾ ಪಟೋಲೆ ವಿವರಿಸುತ್ತಾರೆ.

ಕಳೆದ ಮೂರು ವರ್ಷಗಳಿಂದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗಿಲ್ಲ. ಅವರಿನ್ನೂ ಸಾಮಾಜಿಕ-ಸಾಂಸ್ಕೃತಿಕ ಮತ್ತು ಶೈಕ್ಷಣಿಕವಾಗಿ ಬಹಳ ಹಿಂದುಳಿದಿದ್ದಾರೆ. ದೊಡ್ಡ ಉದ್ಯಮಪತಿಗಳಿಗೆ ಸಕಲ ಸೌಲಭ್ಯಗಳನ್ನು ನೀಡುವ ಸರಕಾರ ರೈತರು ಮಾತ್ರ ಸಾಲಮನ್ನಾಕ್ಕಾಗಿ ಸರತಿ ಸಾಲಿನಲ್ಲಿ ನಿಲ್ಲುವಂತೆ ಮಾಡುತ್ತಿದೆ ಎಂದು ಪಟೋಲೆ ಆಂಗ್ಲ ಪತ್ರಿಕೆಗೆ ತಿಳಿಸಿದ್ದಾರೆ. “ನಿಮಗೆ ಶೀವಸೇನೆಯ ಉದ್ಧವ್ ಠಾಕ್ರೆ ಹಾಗೂ ಕೆಲವು ಕಾಂಗ್ರೆಸ್ ನಾಯಕರ ಜೊತೆ ಸಂಪರ್ಕವಿದೆ” ಎಂಬ ಸುದ್ದಿಯಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಪಟೋಲೆ, “ನಾನು ಉದ್ಧವ್ ಠಾಕ್ರೆ ಮತ್ತು ಕಾಂಗ್ರೆಸ್‌ನ ಅಶೋಕ್ ಚವಾಣ್ ಜೊತೆ ಸಂಪರ್ಕದಲ್ಲಿದ್ದೇನೆ. ನಾನು ರಾಹುಲ್ ಗಾಂಧಿಯವರೊಂದಿಗೂ ಫೋನ್‌ನಲ್ಲಿ ಮಾತನಾಡಿ ಮಹಾರಾಷ್ಟ್ರದಲ್ಲಿ ಎಷ್ಟು ರೈತರು ಕೀಟನಾಶಕದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದೆ. ಆದರೆ ಸರಕಾರ ಮಾತ್ರ ಈ ರೈತರು ಮದ್ಯಪಾನ ಮಾಡಿ ಸಾವನ್ನಪ್ಪಿದ್ದಾರೆ ಎಂದು ಹೇಳುವ ಮೂಲಕ ರೈತರ ಕುಟುಂಬದ ಗಾಯದ ಮೇಲೆ ಉಪ್ಪು ಸವರುವ ಕೆಲಸ ಮಾಡಿದೆ” ಎಂದು ಹೇಳಿದರು.

“ರೈತರ ಸಮಸ್ಯೆಯನ್ನು ಪರಿಹರಿಸಲು ನನ್ನೊಬ್ಬನಿಂದ ಸಾಧ್ಯವಿಲ್ಲ ಎಂದರಿತ ನಾನು ಅದಕ್ಕಾಗಿ ಸಮಾನಮನಸ್ಕ ರಾಜಕಾರಣಿಗಳ ತಂಡವನ್ನು ರಚಿಸುವ ಸಲುವಾಗಿ ಉದ್ಧವ್ ಠಾಕ್ರೆ, ಅಶೋಕ್ ಚವಾಣ್ ಮತ್ತು ರಾಹುಲ್ ಗಾಂಧಿ ಜೊತೆ ಮಾತನಾಡಿದ್ದೇನೆಯೇ ಹೊರತು ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ” ಎಂದು ತಿಳಿಸಿರುವ ಪಟೋಲೆ, ಬಿಟಿ ಹತ್ತಿಯ ಬೀಜ ಉತ್ಪಾದಿಸುವ ಕಂಪೆನಿಗಳು ಬಿಟಿ ಹತ್ತಿ ಕೀಟ ಪ್ರತಿರೋಧಕವಾಗಿರುತ್ತವೆ ಎಂದು ಹೇಳುತ್ತವೆ ಆದರೆ ಅದು ಸುಳ್ಳೆಂಬುದು ಈಗಾಗಲೇ ಸಾಬೀತಾಗಿದೆ. ಇಡೀ ದೇಶದಲ್ಲಿ ದೊಷಪೂರಿತ ಬೀಜಗಳನ್ನು ಮತ್ತು ನಿಷೇಧಿತ ಕೀಟನಾಶಕಗಳನ್ನು ಮಾರಲಾಗುತ್ತಿದೆ. ರೈತರನ್ನು ರಕ್ಷಿಸುವ ಕಾನೂನನ್ನು ಜಾರಿಗೆ ತರಲು ನಾನು ಆಗ್ರಹಿಸುತ್ತೇನೆ ಎಂದು ಪಟೋಲೆ ಆಂಗ್ಲ ಪತ್ರಿಕೆಗೆ ತಿಳಿಸಿದ್ದಾರೆ.

“ನಾನು ಡಿಸೆಂಬರ್ 11ರಂದು ಅಹ್ಮದಾಬಾದ್‌ಗೆ ತೆರಳಲಿದ್ದೇನೆ. ಅಲ್ಲಿ ಜನರ ಜೊತೆ ಮಾತನಾಡಿದ ನಂತರ ಬೇರೆ ಪಕ್ಷವನ್ನು ಸೇರಬೇಕೇ ಅಥವಾ ಸ್ವಂತ ಪಕ್ಷವನ್ನು ರಚಿಸಬೇಕೇ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ. ನನ್ನ ಕಾರ್ಯಕರ್ತರ ಮತ್ತು ಸಾಮಾನ್ಯ ಜನರ ಬೆಂಬಲ ನನ್ನ ಜೊತೆಗಿದೆ” ಎಂದು ನಾನಾ ಪಟೋಲೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News