ಎಸ್ಸೆಮ್ಮೆಸ್, ಮಿಸ್ಡ್ ಕಾಲ್ ಹೆಲ್ಪ್‌ಲೈನ್ ಆರಂಭಿಸಿದ ಆರ್‌ಬಿಐ

Update: 2017-12-10 16:13 GMT

ಹೊಸದಿಲ್ಲಿ, ಡಿ.10: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ದೊಡ್ಡ ಮೊತ್ತ ಉಡುಗೊರೆಯಾಗಿ ಲಭಿಸುತ್ತಿದೆ ಎಂದು ಮುಗ್ಧ ಜನರನ್ನು ನಂಬಿಸಿ ಅವರಿಂದ ಹಣ ಪಡೆದು ವಂಚಿಸುವ ಜಾಲಗಳ ವಿರುದ್ಧ ಅವರದ್ದೇ ರೀತಿಯಲ್ಲಿ ಹೋರಾಡಲು ಆರ್‌ಬಿಐ ಮುಂದಾಗಿದೆ.

ಈ ರೀತಿ ಮುಗ್ಧ ಜನರನ್ನು ವಂಚಿಸುವ ಜಾಲಗಳು ಕರೆ ಮಾಡುವ, ಮೊಬೈಲ್ ಮೆಸೇಜ್ ಕಳುಹಿಸುವ ಅಥವಾ ಇಮೇಲ್ ಕಳುಹಿಸುವ ಮೂಲಕ ಜನರಿಗೆ ದೊಡ್ಡ ಮೊತ್ತದ ಲಾಟರಿ ಹೊಡೆದಿದೆ ಅಥವಾ ಆರ್‌ಬಿಐಯ ಯೋಜನೆಯಲ್ಲಿ ಉಡುಗೊರೆ ರೂಪದಲ್ಲಿ ಹಣ ಲಭಿಸಿದೆ ಎಂದು ಆಮಿಷವೊಡ್ಡಿ ಶುಲ್ಕ ಹಾಗೂ ಇತರ ವೆಚ್ಚಕ್ಕೆಂದು ಅವರಿಂದ ಲಕ್ಷಾಂತರ ಹಣವನ್ನು ಲಪಟಾಯಿಸುತ್ತಾರೆ. ಈಗ ಆರ್‌ಬಿಐ ಕೂಡಾ ಈ ವಂಚಕರಿಗೆ ಸೆಡ್ಡು ಹೊಡೆಯುವ ಸಲುವಾಗಿ ಎಸ್‌ಎಂಎಸ್ ಮತ್ತು ಮಿಸ್ಡ್ ಕಾಲ್ ಹೆಲ್ಪ್‌ಲೈನ್‌ಗಳನ್ನು ಆರಂಭಿಸಿದ್ದು ಆಮೂಲಕ ಜನರಿಗೆ ಇಂತಹ ವಂಚನಾ ಜಾಲಗಳಿಂದ ದೂರವಿರುವಂತೆ ಜಾಗೃತಿ ಮೂಡಿಸುತ್ತಿದೆ.

ಇಂತಹ ವಂಚನಾ ಜಾಲಗಳ ಬಗ್ಗೆ ಆರ್‌ಬಿಐ ಪದೇಪದೇ ತಮ್ಮ ಗ್ರಾಹಕರನ್ನು ಎಚ್ಚರಿಸುತ್ತಿದ್ದರೂ ಇದೀಗ ಮೊಬೈಲ್ ಮೆಸೇಜ್‌ಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದೆ. ಇನ್ನು ಮಿಸ್ಡ್ ಕಾಲ್ ಹೆಲ್ಪ್‌ಲೈನನ್ನು ಆರಂಭಿಸಿರುವ ಆರ್‌ಬಿಐ ಆಮೂಲಕ ಸಾರ್ವಜನಿಕರಿಗೆ ಎಲ್ಲಾ ರೀತಿಯ ಮಾಹಿತಿಯನ್ನು ಒದಗಿಸುತ್ತದೆ ಜೊತೆಗೆ ದೂರುಗಳನ್ನು ದಾಖಲಿಸುವ ಬಗ್ಗೆಯೂ ಮಾಹಿತಿ ನೀಡುತ್ತದೆ.

ಆರ್‌ಬಿಐ/ಆರ್‌ಬಿಐ ಗವರ್ನರ್/ಸರಕಾರ ಯಾವತ್ತೂ ಈ ರೀತಿ ಇಮೇಲ್/ ಎಸ್ಸೆಮ್ಮೆಸ್ /ಕರೆಗಳನ್ನು ಮಾಡುವುದಿಲ್ಲ ಎಂದು ಆರ್‌ಬಿಐ ತನ್ನ ಮೊಬೈಲ್ ಸಂದೇಶದಲ್ಲಿ ತಿಳಿಸುತ್ತದೆ. ಜೊತೆಗೆ ಯಾವುದೇ ಅನುಮಾನಗಳು ಇದ್ದಲ್ಲಿ 8691960000 ಈ ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವಂತೆ ಸೂಚಿಸುತ್ತದೆ. ಆರ್‌ಬಿಐಯಲ್ಲಿ ಖಾತೆಯಿದೆ ಎಂದು ಹೇಳಿ ಖಾತೆ ಸಂಖ್ಯೆಯನ್ನು ನೀಡಿ ಅದಕ್ಕೆ ಹಣವನ್ನು ರವಾನಿಸುವಂತೆ ಸೂಚಿಸುವ ಯಾವ ಮೊಬೈಲ್ ಸಂದೇಶ ಅಥವಾ ಕರೆಯನ್ನೂ ನಂಬಬೇಡಿ. ಆರ್‌ಬಿಐ ಯಾವುದೇ ವೈಯಕ್ತಿಕ ಖಾತೆಯನ್ನು ತೆರೆಯುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News