ದಾಭೋಲ್ಕರ್, ಪನ್ಸಾರೆ ಹತ್ಯಾ ಪ್ರಕರಣ: ಕೋರ್ಟ್‌ನಿಂದ ಸಿಬಿಐಗೆ ಛೀಮಾರಿ

Update: 2017-12-11 18:57 GMT

93 ಪೊಲೀಸ್ ಠಾಣೆಗಳಲ್ಲೂ ಸೈಬರ್ ಸೆಲ್

ಮುಂಬೈಯಲ್ಲಿ ಸೈಬರ್ ಅಪರಾಧಗಳ ಘಟನೆಗಳು ಏರುತ್ತಿವೆ. ಇದನ್ನು ನಿಯಂತ್ರಿಸಲು ಕೊನೆಗೂ ಮುಂಬೈಯ ಎಲ್ಲಾ 93 ಪೊಲೀಸ್ ಠಾಣೆಗಳಲ್ಲೂ ಸೈಬರ್ ಸೆಲ್ ರಚಿಸಲು ಸರಕಾರ ನಿರ್ಧರಿಸಿದೆ. ಮುಂಬೈ ಪೊಲೀಸ್ ಕಮಿಶನರ್ ದತ್ತಾತ್ರೇಯ ಪಡ್‌ಸಲ್ಗೀಕರ್ ಈ ಮಾಹಿತಿ ನೀಡಿದರು. ಈ ವಿಷಯವಾಗಿ ಪೊಲೀಸರಿಗೆ ತರಬೇತಿ ನೀಡಲು ಆದೇಶ ನೀಡಿದ್ದಾರೆ. ಸೈಬರ್ ಸೆಲ್‌ನಲ್ಲಿ ಒಬ್ಬರು ನಿರೀಕ್ಷಕ, ಇಬ್ಬರು ಸಹಾಯಕ ನಿರೀಕ್ಷಕ, ಉಪನಿರೀಕ್ಷಕ ಮತ್ತು ಮೂರರಿಂದ ನಾಲ್ಕು ಪೊಲೀಸ್ ಸಿಪಾಯಿ ಇರುವರು. ಈ ಸೆಲ್ ಸೈಬರ್ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣಗಳ ಎಫ್‌ಐಆರ್ ಮಾತ್ರವಲ್ಲ, ತನಿಖೆ ನಡೆಸಿ ಚಾರ್ಜ್‌ಶೀಟ್ ಕೂಡಾ ಸಲ್ಲಿಸುತ್ತದೆ.

ಈ ತನಕ ಇಂತಹ ಕೆಲಸ ಸೈಬರ್ ಪೊಲೀಸ್ ಸ್ಟೇಷನ್ ಮಾತ್ರ ಮಾಡುತ್ತಿತ್ತು. ಸೈಬರ್ ಪೊಲೀಸ್ ಸ್ಟೇಷನ್ ಮುಂಬೈಯಲ್ಲಿ ಕೇವಲ ಒಂದು ಮಾತ್ರ ಇದೆ. ಅದು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ. ಹೀಗಾಗಿ ಸಾಮಾನ್ಯ ಜನಕ್ಕೆ ತಮ್ಮ ದೂರು ಹಿಡಿದು ಎಲ್ಲಿಗೆ ಹೋಗುವುದೆಂದು ತಿಳಿಯುತ್ತಿಲ್ಲ. ಇದೀಗ ಈ ಭ್ರಮೆ ದೂರವಾಗಿದೆ. ಜಾಯಿಂಟ್ ಸಿ.ಪಿ. ದೇವೆನ್ ಭಾರತಿ ಅನುಸಾರ ಜನಸಾಮಾನ್ಯರ ಹಿತ ದೃಷ್ಟಿಯಿಂದ ಎಲ್ಲಾ 93 ಪೊಲೀಸ್ ಠಾಣೆಗಳಲ್ಲಿ ಸೈಬರ್ ಸೆಲ್ ತೆರೆಯಲಾಗುತ್ತಿದೆ. ಈ ಸೆಲ್ ಈ ತನಕ ಆರ್ಥಿಕ ಅಪರಾಧ ಶಾಖೆಯ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದೆ. ಸೈಬರ್ ಪೊಲೀಸ್ ಸ್ಟೇಷನ್ ಕ್ರೈಂ ಬ್ರ್ಯಾಂಚ್‌ನ ಅಂಡರ್‌ನಲ್ಲಿ ಬರುತ್ತದೆ.

ಕಳೆದ ಕೆಲವು ವರ್ಷಗಳಿಂದ ಮುಂಬೈಯಲ್ಲಿ ಸೈಬರ್ ಅಪರಾಧ ಹಲವು ಪಟ್ಟು ವೃದ್ಧಿಯಾಗಿದೆ. ಹೀಗಾಗಿ ಇರುವ ಏಕೈಕ ಸೈಬರ್ ಪೊಲೀಸ್ ಠಾಣೆಗೆ ಕೆಲಸದ ಒತ್ತಡ ಹೆಚ್ಚಾಗಿದೆ. ಕೇಂದ್ರ ಸರಕಾರದ ಡಿಜಿಟಲ್ ಇಂಡಿಯಾ ಅಭಿಯಾನದ ಪ್ರಕಾರ ಕ್ಯಾಶ್‌ಲೆಸ್ ಇಂಡಿಯಾ ಮತ್ತು ಆನ್‌ಲೈನ್ ಬ್ಯಾಂಕಿಂಗ್ ಪದ್ಧತಿ ಹೆಚ್ಚಿದ ನಂತರ ಸೈಬರ್ ಕ್ರೈಮ್ ಗ್ರಾಫ್ ಕೂಡಾ ಏರಿದೆ. ಡಿಜಿಟಲ್ ಟ್ರಾಂಜೆಕ್ಷನ್ ಹೆಸರಲ್ಲಿ ವಂಚನೆಯ ದೂರುಗಳೂ ಹೆಚ್ಚುತ್ತಿವೆ. ಎಟಿಎಂ ಕಾರ್ಡ್‌ನಿಂದ ಹಣ ಪಡೆಯುವುದು, ಕ್ರೆಡಿಟ್ ಕಾರ್ಡ್‌ನಿಂದ ಖರೀದಿ ಮಾಡುವುದು, ಬ್ಯಾಂಕ್‌ನಿಂದ ಹಿಡಿದು ಆಧಾರ್ ಕಾರ್ಡ್ ಲಿಂಕ್ ಮಾಡುವುದು.... ಪ್ರತೀ ಸ್ಥಳದಲ್ಲೂ ಸೈಬರ್ ಕ್ರಿಮಿನಲ್ಸ್‌ಗಳಿಂದ ಜನ ವಂಚನೆಗೊಳಗಾಗುತ್ತಿದ್ದಾರೆ. ಈ ಸಂಗತಿಗಳನ್ನು ಮುಂದಿಟ್ಟು ಸೈಬರ್ ಜಾಗೃತಾ ಅಭಿಯಾನವನ್ನು (5 ದಿನಗಳ) ಮುಂಬೈ ಪೊಲೀಸ್‌ನ ನಾರ್ತ್ ರೀಜನ್ ಆಯೋಜಿಸಿದೆ.
* * *

ಕೋರ್ಟ್‌ನಿಂದ ಛೀಮಾರಿ
ಬಾಂಬೆ ಹೈಕೋರ್ಟ್ ನರೇಂದ್ರ ದಾಭೋಲ್ಕರ್ ಮತ್ತು ಗೋವಿಂದ ಪನ್ಸಾರೆ ಅವರ ಹತ್ಯಾ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ತೀವ್ರ ಬೇಸರ ವ್ಯಕ್ತಪಡಿಸುತ್ತಾ ಸಿಬಿಐ ಮತ್ತು ಎಸ್‌ಐಟಿಯನ್ನು ತರಾಟೆಗೆ ಎಳೆಯಿತು.
ಸಿಬಿಐ ಮತ್ತು ಎಸ್‌ಐಟಿ ಗುರುವಾರದಂದು ತನಿಖಾ ರಿಪೋರ್ಟ್ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದು ರಿಪೋರ್ಟ್‌ನಲ್ಲಿ ಹಂತಕರು ಉತ್ತರ ಸೀಮೆಯ ರಾಜ್ಯಗಳಿಂದ ದೇಶದಿಂದ ಹೊರಗೆ ಓಡಿ ಹೋಗಿದ್ದಾರೆ ಎಂದು ಹೇಳಿರುತ್ತದೆ. ಈ ರಿಪೋರ್ಟ್ ಬಗ್ಗೆ ತಮ್ಮ ಬೇಸರ ವ್ಯಕ್ತಪಡಿಸಿದ ನ್ಯಾಯಮೂರ್ತಿಯವರು ‘‘ನಾಲ್ಕು ವರ್ಷ ಕಳೆದರೂ ಸಿಬಿಐ ಮತ್ತು ಎಸ್‌ಐಟಿಗೆ ಈ ತನಕವೂ ಸರಿಯಾದ ಸಾಕ್ಷಿಗಳೂ ಸಿಕ್ಕಿಲ್ಲ. ಹಂತಕರನ್ನು ಬಂಧಿಸುವಲ್ಲೂ ಯಶಸ್ಸು ಪಡೆದಿಲ್ಲ. ತನಿಖೆ ಎಲ್ಲಿತ್ತೋ ಅಲ್ಲೇ ನಿಂತು ಹೋಗಿದೆ. ಹೀಗೇಕೆ ಆಯಿತು?’’ ಎಂದು ಪ್ರಶ್ನಿಸಿದರು.

ಆದರೆ ತನಿಖಾ ಏಜನ್ಸಿಗಳಿಗೆ ಈ ಬಗ್ಗೆ ಉತ್ತರ ನೀಡಲು ಸಾಧ್ಯವಾಗಲಿಲ್ಲ. ಹಾಗಾಗಿ ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 21ರ ತನಕ ಸ್ಥಗಿತಗೊಳಿಸಲಾಯಿತು. ನ್ಯಾಯಮೂರ್ತಿಯವರು ಕಠಿಣ ಕಾರ್ಯಾಚರಣೆಗೆ ಆದೇಶಿಸಿದ್ದಾರೆ. ಡಾ. ನರೇಂದ್ರ ದಾಭೋಲ್ಕರ್ ಮತ್ತು ಗೋವಿಂದ ಪಾನ್ಸರೆ ಅವರ ಹತ್ಯಾ ಪ್ರಕರಣದ ವಿಚಾರಣೆಯು ನ್ಯಾಯಮೂರ್ತಿ ಸತ್ಯ ರಂಜನ್ ಧರ್ಮಾಧಿಕಾರಿ ಮತ್ತು ನ್ಯಾರ್ಯಮೂರ್ತಿ ಭಾರತಿ ಡಾಂಗ್ರೆ ಅವರ ಪೀಠದ ಮುಂದೆ ನಡೆಯುತ್ತಿದೆ.

ಈ ಪ್ರಕರಣದ ವಿಚಾರಣೆಯ ನಡುವೆ ‘ಪದ್ಮಾವತಿ’ ಸಿನೆಮಾದ ವಿರೋಧವನ್ನು ಮುಂದಿಟ್ಟು ಅವರು ಬೇಸರ ವ್ಯಕ್ತಪಡಿಸಿದರು. ಕಲಾಕಾರರಿಗೆ ಬಹಿರಂಗ ಬೆದರಿಕೆ ಹಾಕುವುದು ಕೂಡಾ ತಪ್ಪುಎಂದು ನ್ಯಾಯಮೂರ್ತಿಗಳು ತೀವ್ರ ಬೇಸರದಿಂದ ನುಡಿದರು.

ನ್ಯಾಯಮೂರ್ತಿಗಳಾದ ಧರ್ಮಾಧಿಕಾರಿ ಅವರು ಸಿಬಿಐ ಮತ್ತು ಸಿಐಡಿ ತಂಡಗಳಿಗೆ ಇನ್ನೊಂದು ಮಹತ್ವದ ಸೂಚನೆ ನೀಡಿದ್ದಾರೆ. ಈ ಏಜನ್ಸಿಗಳು ತಮ್ಮ ಉನ್ನತ ಅಧಿಕಾರಿಗಳನ್ನು ಈ ತನಿಖೆಯಲ್ಲಿ ಸೇರಿಸಿಕೊಳ್ಳಬೇಕು. ಈ ಅಧಿಕಾರಿಗಳು ಒಂದು ವೇಳೆ ನ್ಯಾಯಾಲಯದಲ್ಲಿ ಹಾಜರಾಗಲು ಇಷ್ಟಪಡದಿದ್ದರೆ ಅವರಿಗೆ ಕೋರ್ಟ್‌ನಲ್ಲಿ ಈ ವಿಚಾರಣೆಯಲ್ಲಿ ವಾದ ಮಂಡಿಸುತ್ತಿರುವ ವಕೀಲರನ್ನು ಭೇಟಿ ಆಗಬಹುದು ಎಂದು ಸಲಹೆ ಇತ್ತರು. ಹಾಗೂ ಒಂದು ಬೈಠಕ್ ಕರೆದು ಅದರಲ್ಲಿ ಗೃಹ ವಿಭಾಗದ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕ ಮತ್ತು ಸಿಬಿಐಯ ಸಂಯುಕ್ತ ನಿರ್ದೇಶಕರ ಜೊತೆಗೆ ಹೆಚ್ಚುವರಿ ಮಹಾಧಿವಕ್ತಾ ಅನಿಲ್ ಸಿಂಗ್ ಮತ್ತು ಸಿಐಡಿಯ ವತಿಯಿಂದ ವಾದ ಮಂಡಿಸುತ್ತಿರುವ ಅನಿಲ್ ಮುಂದರ್ಗಿ ಅವರನ್ನೂ ಸೇರಿಸುವಂತೆ ಆದೇಶ ಕೂಡಾ ನೀಡಿದರು.

ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿಗಳ ಪೀಠವು ಮಹಾರಾಷ್ಟ್ರ ಮತ್ತು ಕರ್ನಾಟಕ ದೇಶದಲ್ಲೇ ತಮ್ಮ ಸಾಮಾಜಿಕ ಸುಧಾರಣೆ ಮತ್ತು ಬಹಿರಂಗ ವಿಚಾರಗಳಿಗಾಗಿ ಖ್ಯಾತಿ ಪಡೆದ ರಾಜ್ಯಗಳು. ಆದರೆ ಇಲ್ಲಿ ವಿಚಾರವಾದಿಗಳ ಹತ್ಯೆ ನಡೆದಿರುವುದು ಕಂಡಾಗ ಏನೆಂದೇ ಅರ್ಥವಾಗುತ್ತಿಲ್ಲ. ಅನ್ಯ ದೇಶಗಳಲ್ಲಿ ಯಾವುದಾದರೂ ದೊಡ್ಡ ಘಟನೆಗಳು ನಡೆದರೆ ದೋಷಿಗಳನ್ನು ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚುತ್ತಾರೆ. ಇಲ್ಲಿ ಯಾಕೆ ಸಾಧ್ಯವಾಗಿಲ್ಲ? ಎಂದು ಅಚ್ಚರಿ ವ್ಯಕ್ತ ಪಡಿಸಿದರು.

ದಾಭೋಲ್ಕರ್ ಹತ್ಯೆ 2013ರಲ್ಲಿ ಮತ್ತು ಪನ್ಸಾರೆ ಹತ್ಯೆ 2015ರಲ್ಲಿ ನಡೆದಿತ್ತು. ಆದರೆ ಆರೋಪಿಗಳನ್ನು ಬಂಧಿಸಲು ತನಿಖಾ ಏಜನ್ಸಿಗಳವರು ವಿಫಲರಾಗಿದ್ದಾರೆ. ನ್ಯಾಯಮೂರ್ತಿಗಳಾದ ಧರ್ಮಾಧಿಕಾರಿಯವರು ಇನ್ನೊಂದು ಮಾತೂ ಹೇಳಿದ್ದಾರೆ. ‘‘ನಮ್ಮ ಎರಡೂ ತನಿಖಾ ಏಜನ್ಸಿಗಳಿಗೆ ಈ ಎರಡು ಹತ್ಯೆಗಳಲ್ಲೂ ಯಾವುದೇ ಯಶಸ್ಸು ಸಿಕ್ಕಿಲ್ಲ. ಈ ಪ್ರಕರಣವನ್ನು ಇನ್ನಷ್ಟು ದೀರ್ಘ ಕಾಲ ಎಳೆಯಲು ಸಾಧ್ಯವಿಲ್ಲ. ಜನರ ಸಾಂವಿಧಾನಿಕ ಅಧಿಕಾರಗಳನ್ನು ಬಲಿ ನೀಡಲು ಸಾಧ್ಯವಿಲ್ಲ’’ ಎಂದು ಸ್ಪಷ್ಟವಾಗಿ ನುಡಿದರು. ದಾಭೋಲ್ಕರ್ ಪ್ರಕರಣದ ತನಿಖೆ ಸಿಬಿಐ ಮಾಡುತ್ತಿದೆ. ಪನ್ಸಾರೆ ಹತ್ಯಾಕಾಂಡದ ತನಿಖೆ ಸಿಐಡಿಯ ವಿಶೇಷ ತಂಡ ಮಾಡುತ್ತಿದೆ.
ಈ ಎರಡೂ ಏಜನ್ಸಿಗಳು ಯಾಕೆ ಇನ್ನೂ ವಿಫಲವಾಗಿವೆ ಎಂಬ ಬಗ್ಗೆ ಉಚ್ಚ ಅಧಿಕಾರಿಗಳು ವಿಚಾರ ಮಾಡಿದ್ದಾರೆಯೇ? ಎಂದೂ ಪೀಠ ಕೇಳಿದೆ.
* * *

ಫಡ್ನವೀಸರ ತಾಕತ್ತು ಶಿವಸೇನೆಗೆ ಗೊತ್ತಿದೆ!
ಮಹಾರಾಷ್ಟ್ರ ವಿಧಾನ ಪರಿಷತ್‌ನ ಒಂದು ಸೀಟ್‌ಗಾಗಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ- ಶಿವಸೇನೆ ಮೈತ್ರಿಯ ಅಭ್ಯರ್ಥಿ ಪ್ರಸಾದ್ ಲಾಡ್ 136 ಮತಗಳ ಅಂತರದಲ್ಲಿ ಗೆದ್ದರು. ಇವರಿಗೆ 209 ಶಾಸಕರ ಮತಗಳು ಸಿಕ್ಕಿತ್ತು. ಕಾಂಗ್ರೆಸ್‌ನ ಅಭ್ಯರ್ಥಿ ದಿಲೀಪ್ ಮಾನೆ ಅವರಿಗೆ ಕೇವಲ 73 ಮತಗಳು ಮಾತ್ರ ಸಿಕ್ಕಿತ್ತು.

ವಿಧಾನ ಸಭೆಯಲ್ಲಿ ಕಾಂಗ್ರೆಸ್ ಎನ್‌ಸಿಪಿ ಶಾಸಕರ ಸಂಖ್ಯೆ 83 ಇದೆ. ಹಾಗಿರುವಾಗ ಇವರಿಗೆ 10 ಮತಗಳು ಕಡಿಮೆ ಸಿಕ್ಕಿದಂತಾಗಿದೆ. ಎನ್‌ಸಿಪಿ ನಾಯಕ ಛಗನ್ ಭುಜಬಲ್ ಜೈಲಿನಲ್ಲಿದ್ದು ಮತ ಹಾಕಲಿಲ್ಲ. ಆದ್ದರಿಂದ 9 ಶಾಸಕರು ಕ್ರಾಸ್ ಓಟಿಂಗ್ ನಡೆಸಿದಂತಾಗಿದೆ. 288 ಸದಸ್ಯರ ವಿಧಾನ ಸಭೆಯಲ್ಲಿ 284 ಸದಸ್ಯರು ಮತ ಚಲಾಯಿಸಿದ್ದರು. 2 ಎಂಐಎಂ ಶಾಸಕರು ಗೈರು ಹಾಜರಿದ್ದರು. ಶಿವಸೇನೆಯ ಒಬ್ಬರು ಅನರ್ಹರಾಗಿದ್ದರು. ಈ ದೃಶ್ಯವನ್ನು ಗಮನಿಸಿದರೆ ಒಂದು ವೇಳೆ ಶಿವಸೇನೆಯು ಸರಕಾರದಿಂದ ತನ್ನ ಬೆಂಬಲ ಹಿಂಪಡೆದರೂ ಫಡ್ನವೀಸ್ ಸರಕಾರಕ್ಕೆ ಯಾವುದೇ ಭಯ ಇರಲಾರದು. ಲಾಡ್ ಅವರಿಗೆ ಸಿಕ್ಕಿದ 209 ಮತಗಳಲ್ಲಿ ಶಿವಸೇನೆಯ 62 ಮತಗಳಿದ್ದುವು. ಇದನ್ನು ತೆಗೆದರೂ ಬಿಜೆಪಿ ಬಳಿ 147 ಮತಗಳು ಇವೆ. ಅರ್ಥಾತ್ ಮ್ಯಾಜಿಕ್ ಫಿಗರ್‌ಗೆ ಬೇಕಾದ 145 ಮತಗಳು ಇವೆ ಎಂದಾಯ್ತು.

ಬಿಜೆಪಿಗೆ ತನ್ನ 122 ಶಾಸಕರ ಹೊರತಾಗಿಯೂ 25 ಅನ್ಯ ಶಾಸಕರು ಪ್ರಸಾದ್ ಲಾಡ್‌ಗೆ ಮತ ಹಾಕಿದ್ದಾರೆ. ಬಹುಶ: ಇದು ಗೊತ್ತಿದ್ದೇ ಶಿವಸೇನೆ ತನ್ನ ಬೆಂಬಲವನ್ನು ಹಿಂಪಡೆಯುವ ಸಾಹಸ ಮಾಡುತ್ತಿಲ್ಲವಂತೆ!
* * *

ಮಹಾನಗರದಲ್ಲಿ ಜಲ ಸಾರಿಗೆಯ ಮತ್ತೊಂದು ಪ್ರಯತ್ನ
ಮುಂಬೈ ಮಹಾನಗರದಲ್ಲಿ ಜಲಸಾರಿಗೆಯನ್ನು ಪ್ರೋತ್ಸಾಹಿಸಲು ಒಂದು ಹೊಸ ಪ್ಲ್ಯಾನ್ ಸಿದ್ಧಗೊಂಡಿದ್ದು ಶೀಘ್ರವೇ ಇದನ್ನು ಕ್ಯಾಬಿನೆಟ್‌ನ ಮಂಜೂರು ಪಡೆಯಲು ಕಳುಹಿಸಲಾಗುವುದು ಎಂದು ಮಹಾರಾಷ್ಟ್ರ ಮೆರಿಟೈಮ್ ಬೋರ್ಡ್ (ಎಂಎಂಬಿ)ನ ವರಿಷ್ಠ ಅಧಿಕಾರಿಗಳು ತಿಳಿಸಿ ದ್ದಾರೆ. ಮಹಾನಗರದಲ್ಲಿ ಜಲಸಾರಿಗೆಯ ಪ್ಲ್ಯಾನ್ ಅನೇಕ ವರ್ಷಗಳಿಂದ ನಿರಂತವಾಗಿ ಮಾಡುತ್ತಿದ್ದರೂ ಪ್ರಯಾಣಿಕರ ಪ್ರೋತ್ಸಾಹದ ಮಾತುಗಳು ಕೇಳಿ ಬರುತ್ತಿಲ್ಲ. ಹೀಗಾಗಿ ಈ ತನಕ ಮುಂದುವರಿಯಲಾಗಿಲ್ಲ. ಇದೀಗ ರಾಜ್ಯ ಸರಕಾರ ಮತ್ತು ಎಂಎಂಬಿ ಮಹಾನಗರವನ್ನು ಜಲ ಸಾರಿಗೆಯಲ್ಲಿ ಜೋಡಿಸಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ.

ಎಂಎಂಬಿಯ ಮುಖ್ಯ ಕಾರ್ಯಕಾರಿ ಅಧಿಕಾರಿ ಅತುಲ್ ಪಠ್ನೆ ತಿಳಿಸಿದಂತೆ ಮುಂಬೈ ಮಹಾನಗರದಲ್ಲಿ ಮೂರು ಕಡೆ ಸಮುದ್ರವಿದೆ. ಹೀಗಾಗಿ ಮಹಾನಗರದಲ್ಲಿ ಜಲಸಾರಿಗೆಯ ಭವಿಷ್ಯ ಉಜ್ವಲವಾಗಿದೆ. ಇದಕ್ಕಾಗಿ ನಾವು ಅನೇಕ ಮಾರ್ಗಗಳನ್ನು ಗುರುತಿಸಿದ್ದೇವೆ. ಇದರಲ್ಲಿ ಶೀಘ್ರವೇ ಜನರಿಗಾಗಿ ನಾವೆಯ ಸೇವೆ ಆರಂಭಿಸಲಾಗುವುದು. ಇದಲ್ಲದೆ ಮಹಾನಗರದ ಮೂರೂ ದಿಕ್ಕುಗಳನ್ನು ಜಲಸಾರಿಗೆಯ ಮೂಲಕ ಜೋಡಿಸುವ ಪ್ಲ್ಯಾನ್ ಕೂಡಾ ಕೈಗೊಳ್ಳಲಾಗುತ್ತಿದೆ. ಇದರಲ್ಲಿ ವಸಾ ಮೀರಾರೋಡ್ - ಭಾಯಂದರ್, ಮೀರಾರೋಡ್ ಘೋಡ್‌ಬಂದರ್ ಥಾಣೆ, ಥಾಣೆ - ನವಿಮುಂಬೈ, ನವಿಮುಂಬೈ - ನರೀಮನ್ ಪಾಯಿಂಟ್ ಕ್ಷೇತ್ರಗಳನ್ನು ಜಲಮಾರ್ಗದಲ್ಲಿ ಜೋಡಿಸಲಾಗುವುದು. ಇದಕ್ಕಾಗಿ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ ಎಂದಿದ್ದಾರೆ.

 ಈ ಜಲ ಸಾರಿಗೆಯ ಜೊತೆಗೆ ಮಹಾನಗರದಲ್ಲಿ ಕೇವಲ ಪ್ರಯಾಣಿಕರಿಗೆ ಮಾತ್ರವಲ್ಲ, ದೊಡ್ಡ ವಾಹನಗಳಿಗಾಗಿ ಇರುವ ರೋ ರೋ ಸೇವೆಯನ್ನೂ ಆರಂಭಿಸಲು ನಿರ್ಣಯಿಸಲಾಗಿದೆ. (ಈಗಾಗಲೇ ಕೊಂಕಣ ರೈಲ್ವೆಯಲ್ಲಿ ಲಾರಿಗಳ ಸಾಗಾಟಕ್ಕಾಗಿ ಈ ಸೇವೆ ಜಾರಿ ಇದೆ.) ಈ ಸೇವೆ ಆರಂಭಗೊಂಡ ನಂತರ 2019ರೊಳಗೆ ಮಹಾನಗರದ ರಸ್ತೆಯಿಂದ ದೊಡ್ಡ ವಾಹನಗಳು ಜಲಮಾರ್ಗದ ಮೂಲಕ ನವಿ ಮುಂಬೈಯಿಂದ ಥಾಣೆ ಮತ್ತು ಸೂರತ್ ಕಡೆಗೆ ತೆರಳಬಹುದಾಗಿದೆ. ಹಾಗೂ ಟ್ರಾಫಿಕ್ ಜಾಮ್‌ನಿಂದ ನಗರ ಬಿಡುಗಡೆ ಹೊಂದಲಿದೆ. ಪೆಟ್ರೋಲ್ ಡೀಸೆಲ್ ಉಳಿತಾಯವಾಗಲಿದೆ.

ಎಂಎಂಬಿ ಮೂಲಕ ದೊರೆತ ಮಾಹಿತಿಯಂತೆ ಮಹಾರಾಷ್ಟ್ರದಲ್ಲಿ ಈಗ 53 ಮಾರ್ಗಗಳಲ್ಲಿ ಜಲಸಾರಿಗೆ ಸೇವೆ ಲಭ್ಯವಿದೆ. ಆದರೆ ಎಂಎಂಬಿ 14 ಮಾರ್ಗಗಳನ್ನು ಎಂಎಂಆರ್ ವಲಯದಲ್ಲಿ ಗುರುತಿಸಿದೆ. ನರೀಮನ್ ಪಾಯಿಂಟ್ - ಬೋರಿವಲಿ ಮಾರ್ಗ ವಿಶೇಷವಾಗಿದೆ. ಮಹಾರಾಷ್ಟ್ರದಲ್ಲಿ ಈಗಿರುವ ಜಲ ಸಾರಿಗೆಯಿಂದ ಇಸವಿ 2017ರಲ್ಲಿ ಈ ತನಕ 2 ಕೋಟಿ ಜನರು ಪ್ರಯಾಣದ ಲಾಭ ಪಡೆದಿದ್ದಾರೆ. ಎಂಎಂಆರ್‌ನ್ನು ಜೋಡಿಸುವುದಕ್ಕೆ 400 ಕೋಟಿ ರೂ. ಯೋಜನೆ ಕೈಗೊಳ್ಳಲಾಗಿದೆ. ಒಂದು ವೇಳೆ ಜಲ ಸಾರಿಗೆ ಸೇವೆ ಸರಿಯಾದ ದಿಕ್ಕಿನಲ್ಲಿ ಸಾಗಿದರೆ ಮುಂಬೈಕರ್‌ಗೆ ಗಂಟೆಗಳ ಪಯಣ ನಿಮಿಷಗಳಲ್ಲಿ ಮುಗಿಯಬಹುದು.

Writer - ಶ್ರೀನಿವಾಸ್ ಜೋಕಟ್ಟೆ

contributor

Editor - ಶ್ರೀನಿವಾಸ್ ಜೋಕಟ್ಟೆ

contributor

Similar News