ಗುಜರಾತ್ ಚುನಾವಣೆ: ಅಹ್ಮದಾಬಾದ್‌ನ 16 ಸ್ಥಾನಗಳಿಗೆ ಪೈಪೋಟಿ

Update: 2017-12-12 16:09 GMT

ಅಹ್ಮದಾಬಾದ್, ಡಿ.12: ಗುಜರಾತ್‌ನಲ್ಲಿ ಎರಡನೇ ಹಂತದ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು 90ರ ದಶಕದಿಂದಲು ಬಿಜೆಪಿಯ ಭದ್ರಕೋಟೆಯೆಂದೇ ಪರಿಗಣಿಸಲಾಗಿರುವ ಅಹ್ಮದಾಬಾದ್‌ನಲ್ಲಿ 16 ಕ್ಷೇತ್ರಗಳಲ್ಲಿರುವ 39 ಲಕ್ಷ ಮತದಾರರ ಮೇಲೆ ರಾಜಕೀಯ ಪಕ್ಷಗಳು ಕಣ್ಣಿಟ್ಟಿವೆ. 2012ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗಟ್ಲೋಡಿಯಾ, ಜಮಲ್‌ಪುರ, ಖಾದಿಯಾ, ವೆಜಲ್ಪುರ್, ಎಲ್ಲಿಸ್‌ಬ್ರಿಡ್ಜ್, ನರಂಪುರ, ನಿಕೊಲ್, ನರೋಡ, ಟಕ್ಕರ್‌ಬಪಾ ನಗರ್, ಬಾಪೂನಗರ್, ಅಮ್ರೈವಾಡಿ, ಮಣಿನಗರ್, ಸಬರ್ಮತಿ ಮತ್ತು ಅಸರ್ವ ಸೇರಿದಂತೆ 14 ಸ್ಥಾನಗಳಲ್ಲಿ ಜಯಗಳಿಸಿತ್ತು. ಕಾಂಗ್ರೆಸ್ ದರಿಯಾಪುರ್ ಮತ್ತು ದನಿಲಿಮಡಾ ಕ್ಷೇತ್ರಗಳನ್ನು ತನ್ನದಾಗಿಸಿತ್ತು. ಗುಜರಾತ್‌ನ ಇತರ ನಗರಗಳಂತೆ ಅಹ್ಮದಾಬಾದ್‌ನ ನಗರಪ್ರದೇಶದ ಮತದಾರರು ಕೂಡಾ 90ರ ದಶಕದಿಂದಲೂ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಇಲ್ಲಿ ಗಟ್ಲೋಡಿಯಾ, ನಿಕೊಲ್, ಮಣಿನಗರ್, ಸಬರ್ಮತಿ ಮತ್ತು ಟಕ್ಕರ್‌ಬಪಾ ನಗರ್ ಸೇರಿದಂತೆ ಕನಿಷ್ಟ ಐದು ಕ್ಷೇತ್ರಗಳಲ್ಲಿ ಪಾಟಿದಾರ ಸಮುದಾಯವೇ ಮೇಲುಗೈ ಸಾಧಿಸಿದೆ. ಎರಡು ವರ್ಷಗಳ ಹಿಂದೆ ಹಾರ್ದಿಕ್ ಪಟೇಲ್ ನೇತೃತ್ವದಲ್ಲಿ ನಡೆದ ಮೀಸಲಾತಿ ಪ್ರತಿಭಟನೆಯ ಸಂದರ್ಭದಲ್ಲಿ ಈ ಪ್ರದೇಶಗಳಲ್ಲಿ ವ್ಯಾಪಕ ಹಿಂಸಾಚಾರ ನಡೆದಿತ್ತು. ಇನ್ನು ಜಲಮ್‌ಪುರ-ಕಾಡಿಯಾ, ದರಿಯಾಪುರ್, ದಮಿಲಿಮಡಾ ಮತ್ತು ವೆಜಲ್ಪುರ್‌ನಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗಿದೆ. 2002ರಿಂದ 2014ರವರೆಗೆ ಅಂದಿನ ಶಾಸಕರಾಗಿ ಮತ್ತು ಗುಜರಾತ್ ಮುಖ್ಯಮಂತ್ರಿಯಾಗಿ ಮಣಿನಗರ್ ಕ್ಷೇತ್ರವನ್ನು ಮೋದಿ ಮೂರು ಬಾರಿ ಪ್ರತಿನಿಧಿಸಿದ್ದಾರೆ. ಹಾಗಾಗಿ ಈ ಕ್ಷೇತ್ರ ಬಿಜೆಪಿಗೆ ಅತ್ಯಂತ ಹೆಚ್ಚು ಪ್ರತಿಷ್ಠೆಯ ಕಣವಾಗಿದೆ. 2012ರಲ್ಲಿ ಮೋದಿ ಈ ಕ್ಷೇತ್ರದಿಂದ 86,000 ಮತಗಳ ಅಂತರದಿಂದ ಜಯ ಸಾಧಿಸಿದ್ದರು.

ಮೋದಿ ಪ್ರಧಾನಿಯಾದ ನಂತರ ಮಣಿನಗರ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಸುರೇಶ್ ಪಟೇಲ್ 49,000 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಕ್ಷೇತ್ರದಲ್ಲಿ ಆ ಸಮಯದಲ್ಲಿ 52,000 ಪಾಟಿದಾರ್ ಮತದಾರರಿದ್ದರು. ಈ ಬಾರಿ ಸುರೇಶ್ ಪಟೇಲ್ ಕಾಂಗ್ರೆಸ್‌ನ ಯುವಮುಖ ಐಐಎಂ ಪದವೀಧರೆ ಶ್ವೇತಾ ಬ್ರಹ್ಮಭಟ್‌ರನ್ನು ಎದುರಿಸಲಿದ್ದಾರೆ.

 ಬಿಜೆಪಿಯ ಪಾಲಿಗೆ ಇನ್ನೊಂದು ಬಹುಮುಖ್ಯ ಕ್ಷೇತ್ರವೆಂದರೆ ಗಾಟ್ಲೋಡಿಯಾ. ಈ ಕ್ಷೇತ್ರವನ್ನು ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪ್ರತಿನಿಧಿಸುತ್ತಿದ್ದರು. ರಾಜ್ಯದಲ್ಲಿ ಭುಗಿಲೆದ್ದ ಮೀಸಲಾತಿ ಪ್ರತಿಭಟನೆಗಳ ಕಾರಣದಿಂದ ಆನಂದಿಬೆನ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಗಾಟ್ಲೋಡಿಯಾದಲ್ಲಿ ಪಾಟಿದಾರ್ ಸಮುದಾಯದ ಪ್ರತಿಭಟನಾಕಾರರು ವ್ಯಾಪಕ ಹಿಂಸಾಚಾರ ನಡೆಸಿದ್ದರು. ಈ ಬಾರಿ ಆನಂದಿಬೆನ್ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿರುವ ಕಾರಣ ಆ ಸ್ಥಾನದಲ್ಲಿ ಹಿರಿಯ ನಾಯಕ ಭುಪೇಂದ್ರ ಪಟೇಲ್‌ರನ್ನು ಬಿಜೆಪಿ ಕಣಕ್ಕಿಳಿಸಿದೆ.

ಇನ್ನು ಅಮಿತ್ ಶಾ ಪ್ರತಿನಿಧಿಸುತ್ತಿದ್ದ ನರಂಪುರ್ ಕ್ಷೇತ್ರದಲ್ಲೂ 40,000 ಪಾಟಿದಾರ್ ಮತದಾರರಿದ್ದಾರೆ. ಈ ವರ್ಷ ಆಗಸ್ಟ್‌ನಲ್ಲಿ ರಾಜ್ಯಸಭೆಗೆ ಆಯ್ಕೆಯಾಗುವ ಮೂಲಕ ಅಮಿತ್ ಶಾ  ಕ್ಷೇತ್ರವನ್ನು ತೊರೆದಿದ್ದರು. ಈ ಬಾರಿ ಪಕ್ಷವು ಈ ಕ್ಷೇತ್ರದಿಂದ ಶಾ ಆಪ್ತರೆಂದು ಹೇಳಲಾಗುವ ಮಾಜಿ ಸಚಿವ ಕೌಶಿಕ್ ಪಟೇಲ್‌ರಿಗೆ ಟಿಕೆಟ್ ನೀಡಿದೆ. ಕಳೆದ ಎರಡು ದಶಕಗಳಿಂದ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿರುವ ಪಾಟಿದಾರ್ ಸಮುದಾಯದ ಮತದಾರರು ಮೀಸಲಾತಿ ಪ್ರತಿಭಟನೆ ಮತ್ತು ಬಿಜೆಪಿಯನ್ನು ಮೂಲೊತ್ಪಾಟನೆ ಮಾಡಬೇಕೆಂಬ ಹಾರ್ದಿಕ್ ಪಟೇಲ್‌ರ ಮನವಿಯಿಂದಾಗಿ ಈ ಬಾರಿ ತಮ್ಮ ನಿಲುವನ್ನು ಬದಲಿಸಿದಂತೆ ಕಾಣುತ್ತಿದೆ.

 ಇನ್ನು ಟಕ್ಕರ್‌ಬಪಾ ನಗರ್, ಬಾಪೂನಗರ್, ನಿಕೊಲ್, ನರೋಡ ಮತ್ತು ಸಬರ್ಮತಿ ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಪಾಟಿದಾರ್ ಸಮುದಾಯದ ಆಕ್ರೋಶಕ್ಕೆ ಬಲಿಯಾಗುವ ಸಾಧ್ಯತೆಯಿದೆ. ಪಾಟಿದಾರ್ ಮತದಾರರ ಪಕ್ಷ ಬದಲಾವಣೆಯಿಂದ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿರುವ ಜೊತೆಗೆ ಜಮಲ್‌ಪುರ್-ಕಾಡಿಯಾ ಕೂಡಾ ವಿಭಿನ್ನ ಕಾರಣಕ್ಕಾಗಿ ಗಮನ ಸೆಳೆದಿದೆ. 1.98 ಲಕ್ಷ ಮತದಾರರಿರುವ ಈ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಲಕ್ಷಕ್ಕಿಂತ ಸ್ವಲ್ಪ ಹೆಚ್ಚೇ ಇದೆ. ಹಾಗಾಗಿ ಇಲ್ಲಿ ಬಿಜೆಪಿ ಅಭ್ಯರ್ಥಿ ಭೂಷಣ್ ಭಟ್‌ರ ಭವಿಷ್ಯ ಸಂಕಷ್ಟದಲ್ಲಿದೆ. 2012ರಲ್ಲಿ ಮುಸ್ಲಿಂ ಮತಗಳು ಸ್ವಾತಂತ್ರ ಅಭ್ಯರ್ಥಿ ಸಬಿರ್ ಕಬ್ಲಿವಾಲಾ ಮತ್ತು ಕಾಂಗ್ರೆಸ್‌ನ ಸಮಿರ್‌ಖಾನ್ ಪಠಾಣ್ ಮಧ್ಯೆ ಹಂಚಿಹೋದ ಕಾರಣ ಭೂಷಣ್ ಭಟ್ ಜಯ ಸಾಧಿಸಿದ್ದರು. ಈ ಬಾರಿಯೂ ಕಬ್ಲಿವಾಲಾ ಕಾಂಗ್ರೆಸ್‌ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಪಕ್ಷ ಮಾತ್ರ ಸ್ಥಳೀಯ ಕೌನ್ಸಿಲರ್ ಇಮ್ರಾನ್ ಖಡೆವಾಲಾಗೆ ಟಿಕೆಟ್ ನೀಡಿದ್ದರಿಂದ ಆಕ್ರೋಶಗೊಂಡು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಈ ಇಬ್ಬರು ಕೂಡಾ ಚಿಪಾ ಸಮುದಾಯಕ್ಕೆ ಸೇರಿದವರಾಗಿದ್ದು ಈ ಕ್ಷೇತ್ರದಲ್ಲಿ 25,000-30,000 ಚಿಪಾ ಮತದಾರರಿದ್ದಾರೆ. ಆದರೆ ಅನಿರೀಕ್ಷಿತ ಬೆಳವಣಿಗೆಯಲ್ಲಿ ಕಬ್ಲಿವಾಲಾ ತಮ್ಮ ನಾಮಪತ್ರವನ್ನು ಹಿಂಪಡೆದಿರುವುದರಿಂದ ಬಿಜೆಪಿ ಸಂಕಷ್ಟಕ್ಕೆ ಸಿಲುಕಿದೆ.

ದರಿಯಾಪುರ್ ಕ್ಷೇತ್ರದಲ್ಲಿ ಪ್ರಗತಿಪರ ನಾಯಕ ಎಂದು ಕರೆಸಿಕೊಳ್ಳುವ ಕಾಂಗ್ರೆಸ್ ಶಾಸಕ ಗಯಾಸುದ್ದೀನ್ ಶೇಖ್ ಗೆ ಮುಸ್ಲಿಮರ ಜೊತೆಗೆ ಕೆಲವು ಹಿಂದುಗಳ ಬೆಂಬಲವೂ ಇದೆ. ಈ ಕ್ಷೇತ್ರದ 1.97 ಲಕ್ಷ ಮತದಾರರ ಪೈಕಿ 85,000 ಸಾವಿರ ಮುಸ್ಲಿಂ ಮತದಾರರಿದ್ದಾರೆ. 2012ರಲ್ಲಿ ಶೇಖ್ ಬಿಜೆಪಿಯ ಭರತ್ ಬರೊಡ್‌ರನ್ನು 2,600 ಅತ್ಯಲ್ಪ ಮತಗಳಿಂದ ಸೋಲಿಸಿದ್ದರು. ಈ ಬಾರಿಯೂ ಶೇಖ್ ಮತ್ತು ಬರೊಡ್ ಈ ಕ್ಷೇತ್ರದಲ್ಲಿ ಮುಖಾಮುಖಿಯಾಗಲಿದ್ದಾರೆ.

ಗುಜರಾತ್ ವಿಧಾನಸಭೆಗೆ ಎರಡನೆ ಹಂತದ ಚುನಾವಣೆ ಡಿಸೆಂಬರ್ 14ರಂದು ನಡೆಯಲಿದ್ದು ಡಿಸೆಂಬರ್ 18ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News