ಪ್ರಧಾನಿಯ 'ಚಾಯ್ ಪೆ ಚರ್ಚಾ'ದಲ್ಲಿ ಭಾಗವಹಿಸಿದ್ದ ರೈತ ಆತ್ಮಹತ್ಯೆಗೆ ಶರಣು

Update: 2017-12-13 09:20 GMT

ನಾಗ್ಪುರ, ಡಿ.13: ಕಳೆದ ಲೋಕಸಭಾ ಚುನಾವಣೆಯ ಪ್ರಚಾರೋಂದಲನದ ಸಂದರ್ಭ ಪ್ರಧಾನಿ ನರೇಂದ್ರ ಮೋದಿಯ 'ಚಾಯ್ ಪೆ ಚರ್ಚಾ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವ ರೈತನೊಬ್ಬ ಸಾಲದ ಹೊರೆ ತಾಳಲಾರದೆ ಹಾಗೂ ನಿರೀಕ್ಷಿತ ಬೆಳೆ ಇಳುವರಿ ಸಿಗದೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಯಾವತ್ಮಾಲ್ ಜಿಲ್ಲೆಯಿಂದ ವರದಿಯಾಗಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಕೈಲಾಶ್ ಕಿಸಾನ್ ಮಂಕರ್ (28) ಎಂದು ಗುರುತಿಸಲಾಗಿದೆ. ಅವರು ಸೋಮವಾರ ಸಂಜೆ ಅರ್ನಿ ತೆಹ್ಸಿಲ್ ನಲ್ಲಿನ ದಭದಿ ಎಂಬ ಗ್ರಾಮದಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

2012ರಲ್ಲಿ ತಂದೆ ಮೃತಪಟ್ಟ ನಂತರ ಕೈಲಾಶ್ ಕುಟುಂಬದ ಏಕೈಕ ಆಧಾರಸ್ಥಂಭವಾಗಿದ್ದರು. ಅವರ ಹತ್ತಿ ಬೆಳೆ ಕೀಟದ ಬಾಧೆಯಿಂದ ನಾಶವಾದಂದಿನಿಂದ ಕೈಲಾಶ್ ಭಾರೀ ಚಿಂತಿತನಾಗಿದ್ದರೆಂದು ತಿಳಿದು ಬಂದಿದೆ. ಜಿಲ್ಲಾ ಸಹಕಾರಿ ಬ್ಯಾಂಕಿನಿಂದ 30,000  ರೂ. ಸಾಲ ಪಡೆದಿದ್ದರೆ, ಖಾಸಗಿ ವ್ಯಕ್ತಿಯೊಬ್ಬನಿಂದ ಒಂದು ಲಕ್ಷ ರೂ. ಸಾಲವನ್ನು ಭಾರೀ ಬಡ್ಡಿಗೆ ಪಡೆದಿದ್ದರು. ಆದರೆ ಇದನ್ನು ಮರುಪಾವತಿಸಲು ಸಾಧ್ಯವಾಗಿರಲಿಲ್ಲ ಎಂದು ಅವರ ಸಹೋದರ ದ್ಯಾನೇಶ್ವರ್ ಹೇಳಿದ್ದಾರೆ. ಸಹೋದರಿ ಸೋನುಳ ವಿವಾಹ ಕೂಡ ಇದೇ ಬೇಸಿಗೆ ಸಮಯದಲ್ಲಿ ನಡೆಯಲಿದ್ದುದರಿಂದ ಹಣ ಹೊಂದಿಸಲಾಗದೆ ಕಂಗಾಲಾಗಿದ್ದರೆಂದು ತಿಳಿದು ಬಂದಿದೆ.

2014ರ ಮಾರ್ಚ್ 20ರಂದು ಪ್ರಧಾನಿಯ ಜೊತೆ ಚಾಯ್ ಪೆ ಚರ್ಚಾದಲ್ಲಿ ಕೈಲಾಶ್ ಭಾಗವಹಿಸಿದ್ದರು. ಈ ಸಂದರ್ಭ ಪ್ರಧಾನಿ ರೈತರಿಗೆ ಹಲವು ಸವಲತ್ತುಗಳ ಭರವಸೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೆ ಕೈಲಾಶ್ ಆತ್ಮಹತ್ಯೆಗೆ ಸಾಲದ ಬಾಧೆ ಕಾರಣವಲ್ಲ, ಬದಲಾಗಿ ಹೊಲದ ಪಕ್ಕದಲ್ಲಿಯೇ ಜಮೀನು ಹೊಂದಿದ್ದ ಮಂಕಾರ್ ಎಂಬ ವ್ಯಕ್ತಿಯ ಜತೆ ಉಂಟಾದ ಜಗಳದ ನಂತರ ಕೈಲಾಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು  ಜಿಲ್ಲಾಡಳಿತ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News