ಉತ್ತರಕಾಶಿ - ಚೀನಾ ಗಡಿ ಸಂಪರ್ಕ ಸೇತುವೆ ಕುಸಿತ
ಉತ್ತರಕಾಶಿ, ಡಿ.14: ಉತ್ತರಕಾಶಿಯನ್ನು ಚೀನಾದ ಗಡಿಯೊಂದಿಗೆ ಸಂಪರ್ಕಿಸುತ್ತಿದ್ದ ಏಕೈಕ ಸೇತುವೆ ಗುರುವಾರದಂದು ಕುಸಿದಿರುವ ಕಾರಣ ಹಲವು ಗ್ರಾಮಗಳು ಪರಸ್ಪರ ಸಂಪರ್ಕವನ್ನು ಕಳೆದುಕೊಂಡಿದೆ. ಶಾಲಾ ಮಕ್ಕಳು ಮತ್ತು ಶಿಕ್ಷಕರು ಸೇರಿದಂತೆ ದಿನನಿತ್ಯ ಈ ಮಾರ್ಗವಾಗಿ ಸಾಗುವ ಜನರು ತೊಂದರೆಗೀಡಾದರು.
ಗುರುವಾರ ಮುಂಜಾನೆ ಆರು ಗಂಟೆಯ ಸುಮಾರಿಗೆ ಎರಡು ಟ್ರಕ್‌ಗಳು ತಾತ್ಕಾಲಿಕ ಗಂಗೋತ್ರಿ ಸೇತುವೆಯನ್ನು ದಾಟುತ್ತಿದ್ದ ವೇಳೆ ಸೇತುವೆಯು ಕುಸಿದಿದೆ ಎಂದು ಉತ್ತರಕಾಶಿ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಆಶೀಶ್ ಚೌಹಾಣ್ ತಿಳಿಸಿದ್ದಾರೆ.
ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಸ್ಪಷ್ಟಪಡಿಸಿರುವ ಚೌಹಾಣ್ ಈ ಸೇತುವೆ ಮೇಲೆ ಒಂದು ಸಮಯದಲ್ಲಿ ಒಂದೇ ಟ್ರಕ್ ಚಲಿಸುವ ನಿಯಮವಿದೆ ಎಂದು ತಿಳಿಸಿದರು.
ಘಟನೆಯ ಬಗ್ಗೆ ತನಿಖೆಯನ್ನು ನಡೆಸಲು ಆದೇಶಿಸಲಾಗಿದ್ದು ಸಾಧ್ಯವಾದಷ್ಟು ಬೇಗ ಪರ್ಯಾಯ ದಾರಿಯನ್ನು ನಿರ್ಮಿಸುವಂತೆ ಗಡಿ ಮಾರ್ಗ ಸಂಸ್ಥೆ ಮತ್ತು ಸಾರ್ವಜನಿಕ ಕಾರ್ಯ ಇಲಾಖೆಗೆ ಸೂಚಿಸಲಾಗಿದೆ ಎಂದು ಚೌಹಾಣ್ ತಿಳಿಸಿದ್ದಾರೆ.