ಆಧಾರ್: ಸುಪ್ರೀಂ ಆದೇಶದ ಉಲ್ಲಂಘನೆ; ಡಿ. 15ರಂದು ಮಧ್ಯಂತರ ಆದೇಶ
ಹೊಸದಿಲ್ಲಿ,ಡಿ.14: ಆಧಾರ್‌ನ ಸಿಂಧುತ್ವ ಮತ್ತು ಅದನ್ನು ಕಡ್ಡಾಯಗೊಳಿಸುವ ಸರಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ನಡೆಸುತ್ತಿರುವ ಪಂಚ ನ್ಯಾಯಾಧೀಶರ ಪೀಠವು, ತಾನು ಈ ವಿಷಯದಲ್ಲಿ ಶುಕ್ರವಾರ ಮಧ್ಯಂತರ ಆದೇಶವೊಂದನ್ನು ಹೊರಡಿಸುವುದಾಗಿ ತಿಳಿಸಿದೆ.
ಆಧಾರ್ ಐಚ್ಛಿಕವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ತನ್ನ ಹಿಂದಿನ ಆದೇಶದಲ್ಲಿ ಸ್ಪಷ್ಟಪಡಿಸಿದ್ದರೂ ಸರಕಾರವು ಅದನ್ನು ಉಲ್ಲಂಘಿಸಿ ಬ್ಯಾಂಕ್ ಖಾತೆಗಳು ಮತ್ತು ಸಮಾಜ ಕಲ್ಯಾಣ ಯೋಜನೆಗಳಿಗೆ ಆಧಾರ್‌ನ್ನು ಕಡ್ಡಾಯಗೊಳಿಸಿದೆ ಎಂದು ಅರ್ಜಿದಾರರ ಪರ ವಕೀಲ ಶ್ಯಾಮ ದಿವಾನ್ ಅವರು ನ್ಯಾಯಪೀಠಕ್ಕೆ ತಿಳಿಸಿದರು. ನ್ಯಾಯಾಲಯದ ಆದೇಶದಂತೆ ಆಧಾರ್‌ನ್ನು ಆರು ಯೋಜನೆಗಳಿಗೆ ಕಡ್ಡಾಯಗೊಳಿಸುವ ಬದಲು ಸರಕಾರವು ಅದನ್ನು 139 ಯೋಜನೆಗಳಿಗೆ ವಿಸ್ತರಿಸಿದೆ ಎಂದು ಅವರು ಬೆಟ್ಟು ಮಾಡಿದರು.
ಸಂಸತ್ತು ಕಳೆದ ವರ್ಷ ಅಂಗೀಕರಿಸಿರುವ ಕಾನೂನು ರೈಲು ಮತ್ತು ಬಸ್ ಪ್ರಯಾಣ ಸೇರಿದಂತೆ ಯಾವುದೇ ಸೇವೆಯನ್ನು ಪಡೆಯಲು ಆಧಾರ್‌ನ್ನು ಕಡ್ಡಾಯಗೊಳಿಸುವುದಕ್ಕೆ ಸರಕಾರಕ್ಕೆ ಅಧಿಕಾರ ನೀಡಿದೆ.
ಮಂಡಳಿ ಪರೀಕ್ಷೆಗಳು, ಶಿಕ್ಷಣ ಮಂಡಳಿಗಳು ಮತ್ತು ಯುಜಿಸಿಯಿಂದ ವಿದ್ಯಾರ್ಥಿ ವೇತನಗಳು ಹಾಗೂ ಉನ್ನತ ಶಿಕ್ಷಣಗಳಿಗೆ ಆಧಾರ್‌ನ್ನು ಕಡ್ಡಾಯಗೊಳಿಸಲಾಗಿದೆ. ಅಷ್ಟೇ ಏಕೆ, ಎಚ್‌ಐವಿ ಪಾಸಿಟಿವ್ ರೋಗಿಗಳಿಗೂ ಆಧಾರ್ ಇಲ್ಲದಿದ್ದರೆ ಚಿಕಿತ್ಸೆಯನ್ನು ನಿರಾಕರಿಸಲಾಗುತ್ತಿದೆ ಎಂದು ದಿವಾನ್ ನ್ಯಾಯಾಲಯಕ್ಕೆ ತಿಳಿಸಿದರು.