ಔಷಧಿಗಳ ದರ ನಿಯಂತ್ರಣ: ವಾಸ್ತವವೇನು?

Update: 2017-12-14 18:49 GMT

ದರ ನಿಯಂತ್ರಣದ ವ್ಯಾಪ್ತಿಗೆ ಸಂಯೋಜಿತ ಔಷಧಿಗಳು ಒಳಪಡುವುದಿಲ್ಲ ಎಂದಾದ ಮೇಲೆ ಅನೇಕ ಕಂಪೆನಿಗಳು ಏಕ ಔಷಧಿಗಳನ್ನು ಸಾಧ್ಯವಾದಷ್ಟು ಸಂಯೋಜನೆಗೊಳಿಸಿಬಿಟ್ಟಿದೆ. ಸರಕಾರಕ್ಕೆ ನಿಜಕ್ಕೂ ಜನಾರೋಗ್ಯದ ಬಗ್ಗೆ ಕಾಳಜಿಯಿದ್ದರೆ ದರ ನಿಯಂತ್ರಣದ ವ್ಯಾಪ್ತಿಗೆ ಸಂಯೋಜಿತ ಔಷಧಿಗಳನ್ನೂ ತರಬೇಕು.


ನಮ್ಮ ಪ್ರಭುತ್ವ ತನ್ನನ್ನು ತಾನು ಅತ್ಯಂತ ಜನಪರ ಎಂದು ತೋರಿಸಲು ಆಡುವ ಅತಿದೊಡ್ಡ ನಾಟಕಗಳಲ್ಲಿ ಔಷಧಿಗಳ ದರ ನಿಯಂತ್ರಣ ಎಂಬುದು ಪ್ರಮುಖವಾಗಿದೆ. ಇದು ಜನರನ್ನು ನಂಬಿಸಲು ಇರುವ ಒಳ್ಳೆಯ ಮಾರ್ಗವೂ ಹೌದು. ಈ ವರೆಗೆ ಯಾವುದೇ ಸರಕಾರವು ರೂಪಿಸಿದ ಔಷಧಿಗಳ ದರ ನಿಯಂತ್ರಣ ನೀತಿಯಲ್ಲಿ ಉದ್ದೇಶಪೂರ್ವಕವಾಗಿಯೇ ಕಾರ್ಪೊರೇಟ್ ಕಳ್ಳರಿಗೆ ತಪ್ಪಿಸಿಕೊಳ್ಳಲು ಕಳ್ಳಹಾದಿಯನ್ನು ತೆರೆದಿಟ್ಟೇ ನೀತಿ ನಿರೂಪಿಸುತ್ತಾ ಬಂದಿದೆ. ಇಡೀ ದರ ನಿಯಂತ್ರಣ ನೀತಿಯ ಅತೀ ದೊಡ್ಡ ಲೂಪ್ ಹೋಲ್ ಸಂಯುಕ್ತ ಔಷಧಿಗಳು (combined drugs) ದರ ನಿಯಂತ್ರಣ ವ್ಯಾಪ್ತಿಗೆ ಒಳಪಡುವುದಿಲ್ಲ. ಕಾರ್ಪೊರೇಟ್ ಕಳ್ಳರಿಗೆ ಇದಕ್ಕಿಂತ ದೊಡ್ಡ ಅನುಕೂಲ ಇನ್ನೇನು ಬೇಕು? ಪ್ರಭುತ್ವಕ್ಕೆ ಜನತೆಯ ಮುಂದೆ ಸಾಚಾ ಎಂದು ತೋರಿಸಿದಂತೆಯೂ ಆಯಿತು, ಕಾರ್ಪೊರೇಟ್ ಉದ್ಯಮಪತಿಗಳನ್ನು ಸಮಾಧಾನಪಡಿಸಿದಂತೆಯೂ ಆಯಿತು.

ಇಂದು ಔಷಧಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯವಶ್ಯಕ ಔಷಧಿಗಳಲ್ಲಿ ಶೇ. 75 ಸಂಯುಕ್ತ ಔಷಧಿಗಳೇ ಆಗಿವೆ. ಸಂಯುಕ್ತ ಔಷಧಿಗಳೆಂದರೆ ಒಂದಕ್ಕಿಂತ ಹೆಚ್ಚು ಔಷಧಿ ಒಂದೇ ಮಾತ್ರೆ, ಸಿರಪ್, ಮುಲಾಮು ಇತ್ಯಾದಿಗಳಲ್ಲಿ ಅಡಕವಾಗಿರುವುದು. ಹೆಚ್ಚಿನ ಸೋಂಕು ನಿವಾರಕಗಳು, ಜ್ವರ ನಿವಾರಕಗಳು, ಸಾಮಾನ್ಯ ನೋವು ನಿವಾರಕಗಳು, ನೆಗಡಿ ನಿವಾರಕಗಳು ಸಂಯುಕ್ತ ಔಷಧಿಗಳಾಗಿರುವುದಿಲ್ಲ. ಇವುಗಳ ದರ ನಿಯಂತ್ರಣದಿಂದ ಜನತೆಗೆ ಅಂತಹ ದೊಡ್ಡ ಪ್ರಯೋಜನವೇನೂ ಇಲ್ಲ. ಯಾಕೆಂದರೆ ಇವ್ಯಾವುವೂ ಮನುಷ್ಯರು ಜೀವನಪರ್ಯಂತ ಬಳಸುತ್ತಲೇ ಇರಬೇಕಾದ ಔಷಧಿಗಳಲ್ಲ.

ನಾವು ಮಧುಮೇಹ, ರಕ್ತದೊತ್ತಡ, ಹೃದ್ರೋಗ ಇವುಗಳ ಔಷಧಿಗಳನ್ನೇ ಚರ್ಚೆಗೆ ತೆಗೆದುಕೊಳ್ಳೋಣ. ಯಾಕೆಂದರೆ ಇವು ಅತೀ ಸಾಮಾನ್ಯವಾಗಿ ಜೀವನಪರ್ಯಂತ ಔಷಧಿ ಸೇವನೆ ಮಾಡಲೇಬೇಕಾದ ಕಾಯಿಲೆಗಳು.ಇಂದು ‘ಮಧುಮೇಹದ ರಾಜಧಾನಿ’ ಎಂದೇ ನಮ್ಮ ದೇಶವನ್ನು ಗುರುತಿಸಲಾಗುತ್ತದೆ. ಸಾಮಾನ್ಯವಾಗಿ ಮಧುಮೇಹದ ಹೆಚ್ಚಿನೆಲ್ಲಾ ಅಡ್ವಾನ್ಸ್ ಡ್ ಔಷಧಿಗಳು ಸಂಯುಕ್ತ ಔಷಧಿಗಳೇ ಆಗಿವೆ. ಒಂದೇ molecule ಇರುವ ಮಧುಮೇಹದ ಔಷಧಿಗಳು ಪರಿಣಾಮಕಾರಿಯಲ್ಲ ಎಂದು ಹೆಚ್ಚಿನ ವೈದ್ಯರು multi molecule ಔಷಧಿಗಳನ್ನೇ ರೋಗಿಗಳಿಗೆ ಬರೆಯುತ್ತಾರೆ. ಮಧುಮೇಹ ರೋಗಿಯೊಬ್ಬ ತಿಂಗಳೊಂದಕ್ಕೆ ಔಷಧಿಗೆ ಕನಿಷ್ಠ ಒಂದು ಸಾವಿರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ.

ಮಧುಮೇಹಿಗಳಿಗೆ ಕಾಲಾನುಕ್ರಮದಲ್ಲಿ ರಕ್ತದೊತ್ತಡ ಮೂತ್ರಪಿಂಡದ ಕಾಯಿಲೆ ಇತ್ಯಾದಿಗಳು ಬಾಧಿಸುವ ಸಾಧ್ಯತೆ ಇತರರಿಗೆ ಹೋಲಿಸಿದಾಗ ತುಸು ಹೆಚ್ಚೇ ಆಗಿದೆ. ಇತ್ತೀಚಿನ ದಿನಗಳಲ್ಲಿ ಮಧುಮೇಹಿಗಳಲ್ಲಿ ರಕ್ತದೊತ್ತಡವಂತೂ ಸಾಮಾನ್ಯವಾಗಿ ಬಿಟ್ಟಿದೆ. ಇವೆಲ್ಲಾ ಜೀವನಪರ್ಯಂತ ಔಷಧಿ ಸೇವಿಸುತ್ತಿರಬೇಕಾದ ಕಾಯಿಲೆಗಳು. ಇಂತಹ ಕಾಯಿಲೆಗಳಿರುವ ರೋಗಿಗಳು ತಿಂಗಳೊಂದಕ್ಕೆ ಔಷಧಿಗೆಂದು ಎಷ್ಟು ದುಡ್ಡು ಖರ್ಚು ಮಾಡಬೇಕಾಗಬಹುದು ಊಹಿಸಿ. ನೀವು ಕೇಳಬಹುದು ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿಗಳು ಲಭ್ಯವಿದೆಯಲ್ವಾ ಎಂದು.. ಆದರೆ ಸರಕಾರಿ ಆಸ್ಪತ್ರೆಯಲ್ಲಿ ಅಡ್ವಾನ್ಸ್‌ಡ್ ಔಷಧಿಗಳು ಲಭ್ಯವಿರುವುದಿಲ್ಲ. ಮಧುಮೇಹ ರಕ್ತದೊತ್ತಡ ಹೃದ್ರೋಗದಂತಹ ಕಾಯಿಲೆಗಳ ಚಿಕಿತ್ಸೆಗೆ ಬೇಕಾಗುವ ಒಂದೋ ಎರಡೋ ವಿಧದ ಔಷಧಗಳಷ್ಟೇ ಲಭ್ಯವಿರುತ್ತದೆ.

 ಔಷಧಿ ಕಂಪೆನಿಗಳು ಹಿಂದಿನಿಂದಲೂ ಅಧಿಕ ದರ ನಿಗದಿಪಡಿಸಲು ಸಾಧ್ಯವಾಗದ ಔಷಧಿಗಳನ್ನು ಬೇರೆ ಔಷಧಿಯ ಜೊತೆ ಸಂಯೋಜಿಸಿ ದರವನ್ನು ಮನಬಂದಂತೆ ಹಾಕುತ್ತಾ ಬಂದಿವೆ. ಉದಾಹರಣೆಗೆ: Domperidone ಎಂಬ ಹೊಟ್ಟೆ ನೋವಿನ ಚಿಕಿತ್ಸೆಗೆ ಬಳಸಲಾಗುವ ಔಷಧಿಯ ಉತ್ಪಾದನಾ ವೆಚ್ಚ ಹತ್ತು ಪೈಸೆಗಿಂತಲೂ ಕಡಿಮೆಯಿದೆ.ಅದಕ್ಕೆ ಹೆಚ್ಚೆಂದರೆ ಒಂದು ರೂಪಾಯಿ ಗರಿಷ್ಠ ಚಿಲ್ಲರೆ ಮಾರಾಟ ದರ ನಿಗದಿಪಡಿಸಬಹುದು. ಅದಕ್ಕಾಗಿ ಅದನ್ನು Pantaorazole, Rabeprazole, omeprazole ಮುಂತಾದ ವಾಯುಕ್ಷೋಭೆಯ ಚಿಕಿತ್ಸೆಗೆ ಬಳಸುವ ಔಷಧಿಯೊಂದಿಗೆ ಸಂಯೋಜನೆ ಮಾಡಿ ಮಾರುಕಟ್ಟೆಗೆ ಬಿಡಲಾಗುತ್ತದೆ. ಇದರಿಂದ ಕಂಪೆನಿಗಳಿಗೆ ಭರಪೂರ ಲಾಭ ದೊರೆಯುತ್ತದೆ. Pantaprazole ಎಂಬ ಏಕ ಔಷಧಿಯ ಗರಿಷ್ಠ ಚಿಲ್ಲರೆ ಮಾರಾಟ ದರ ನಾಲ್ಕು ರೂಪಾಯಿಯಿದೆ. ಅದರೊಂದಿಗೆ Domperidone ಎಂಬ ಔಷಧಿಯನ್ನು ಸಂಯೋಜಿಸಿ ಮಾರುಕಟ್ಟೆಗೆ ಹಾಕುವಾಗ ಅದಕ್ಕೆ ಎಂಟರಿಂದ ಹತ್ತು ರೂಪಾಯಿವರೆಗೆ ಗರಿಷ್ಠ ಚಿಲ್ಲರೆ ಮಾರಾಟ ದರ ನಿಗದಿಪಡಿಸುತ್ತಾರೆ. ಇಲ್ಲಿ ಕಂಪೆನಿಗಳು ಬೇಕಾಬಿಟ್ಟಿಯಾಗಿ ಹಾಕುವ ದರವನ್ನು ನಿಯಂತ್ರಣಕ್ಕೆ ತರಲು ಚಾಲ್ತಿಯಲ್ಲಿರುವ ದರ ನಿಯಂತ್ರಣ ನೀತಿಯಲ್ಲಿ ಅವಕಾಶವೇ ಇಲ್ಲ. ಇದು ಸರಕಾರವೇ ಕಾರ್ಪೊರೇಟ್ ಉದ್ಯಮಪತಿಗಳಿಗೆ ದರನಿಯಂತ್ರಣ ಎಂಬ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಮಾಡಿಕೊಟ್ಟಿರುವ ಅನುಕೂಲ.

ನೀವು ಹೇಳಬಹುದು, ಬಡವರಿಗಾಗಿಯೇ ಸರಕಾರದ ಜನರಿಕ್ ಔಷಧಿಗಳ ಫಾರ್ಮಸಿಗಳನ್ನು ದೇಶದಾದ್ಯಂತ ತೆರೆಯಲಾಗಿದೆ. ಆದರೆ ಇದು ಎಲ್ಲೆಡೆಯೂ ಲಭ್ಯವಿಲ್ಲ. ಎಲ್ಲೋ ಕೆಲವು ಜಿಲ್ಲಾ ಕೇಂದ್ರಗಳಲ್ಲಿ ಮತ್ತು ತಾಲೂಕು ಕೇಂದ್ರಗಳಲ್ಲಷ್ಟೇ ಲಭ್ಯ. ಗ್ರಾಮೀಣ ಜನತೆ ಔಷಧಿ ಖರೀದಿಗಾಗಿ ಕೆಲವೆಡೆ ಎರಡು ತಾಸು, ಮೂರು ತಾಸು ಪ್ರಯಾಣ ಮಾಡಬೇಕಾಗುತ್ತದೆ. ಪ್ರಾಯೋಗಿಕವಾಗಿ ಯೋಚಿಸುವಾಗ ಇದನ್ನೂ ಪರಿಗಣಿಸಬೇಕಾಗುತ್ತದೆ.

ಲಭ್ಯವಿದ್ದೆಡೆ ಎಲ್ಲಾ ಔಷಧಿಗಳಿಗೂ ಪರ್ಯಾಯವಾಗಿ ಜನರಿಕ್ ಔಷಧಿಗಳು ಲಭ್ಯವಿಲ್ಲ ಮತ್ತು ಜನರಿಕ್ ಔಷಧಿಗಳನ್ನೂ ಅವೇ ಕಂಪೆನಿಗಳೇ ತಯಾರಿಸುವುದರಿಂದ ಅವು ಸ್ವತಃ ತಮಗೆ ಅನನುಕೂಲವಾಗುವಂತೆ ಎಲ್ಲ ಔಷಧಿಗಳಿಗೂ ಪರ್ಯಾಯವಾಗಿ ಜನರಿಕ್ ಔಷಧಿಗಳನ್ನು ತಯಾರಿಸದು.

ದರ ನಿಯಂತ್ರಣದ ವ್ಯಾಪ್ತಿಗೆ ಸಂಯೋಜಿತ ಔಷಧಿಗಳು ಒಳಪಡುವುದಿಲ್ಲ ಎಂದಾದ ಮೇಲೆ ಅನೇಕ ಕಂಪೆನಿಗಳು ಏಕ ಔಷಧಿಗಳನ್ನು ಸಾಧ್ಯವಾದಷ್ಟು ಸಂಯೋಜನೆಗೊಳಿಸಿ ಬಿಟ್ಟಿವೆ. ಸರಕಾರಕ್ಕೆ ನಿಜಕ್ಕೂ ಜನಾರೋಗ್ಯದ ಬಗ್ಗೆ ಕಾಳಜಿಯಿದ್ದರೆ ದರ ನಿಯಂತ್ರಣದ ವ್ಯಾಪ್ತಿಗೆ ಸಂಯೋಜಿತ ಔಷಧಿಗಳನ್ನೂ ತರಬೇಕು.

Writer - ಇಸ್ಮತ್ ಪಜೀರ್

contributor

Editor - ಇಸ್ಮತ್ ಪಜೀರ್

contributor

Similar News