×
Ad

ಮನಮೋಹನ್ ಸಿಂಗ್ ಬಗ್ಗೆ ಪ್ರಧಾನಿ ಹೇಳಿಕೆ: ಕ್ಷಮೆ ಯಾಚನೆಗೆ ಕಾಂಗ್ರೆಸ್ ಪಟ್ಟು

Update: 2017-12-15 19:04 IST

ಹೊಸದಿಲ್ಲಿ, ಡಿ.15: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪಾಕಿಸ್ತಾನದೊಂದಿಗೆ ಸೇರಿಕೊಂಡು ಒಳಸಂಚು ಮಾಡಿದ್ದಾರೆ ಎಂಬ ಹೇಳಿಕೆಗೆ ಪ್ರಧಾನಿ ಮೋದಿ ಕ್ಷಮೆ ಯಾಚಿಸಬೇಕೆಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಪಟ್ಟುಹಿಡಿದ ಘಟನೆ ನಡೆದಿದೆ. ಸಂಸತ್ತಿನ ಚಳಿಗಾಲದ ಅಧಿವೇಶನದ ಆರಂಭದ ದಿನವೇ ರಾಜ್ಯಸಭೆಯಲ್ಲಿ ಭಾರೀ ಗದ್ದಲದ ವಾತಾವರಣ ನೆಲೆಸಿದ ಕಾರಣ ಕಲಾಪವನ್ನು ಎರಡು ಬಾರಿ ಮುಂದೂಡಲಾಯಿತು. ಆರಂಭದಲ್ಲಿ ಜೆಡಿಯು ಬಂಡಾಯ ಮುಖಂಡರಾದ ಶರದ್ ಯಾದವ್ ಹಾಗೂ ಆಲಿ ಅನ್ವರ್ ಅನ್ಸಾರಿಯವರನ್ನು ರಾಜ್ಯಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದ ಕ್ರಮದ ಬಗ್ಗೆ ವಿಪಕ್ಷ ಸದಸ್ಯರು ವಿರೋಧ ಸೂಚಿಸಿ ಘೋಷಣೆ ಕೂಗಿದರು. ಈ ಹಂತದಲ್ಲಿ ಸಭಾಧ್ಯಕ್ಷ ವೆಂಕಯ್ಯ ನಾಯ್ಡು ಕಲಾಪವನ್ನು 20 ನಿಮಿಷ ಮುಂದೂಡಿದರು.

  ಮಧ್ಯಾಹ್ನ ಸದನ ಮತ್ತೆ ಸಮಾವೇಶಗೊಂಡಾಗ ಪ್ರಶ್ನೋತ್ತರ ಅವಧಿಯನ್ನು ಕೈಗೆತ್ತಿಕೊಳ್ಳಲಾಯಿತು. ಈ ಹಂತದಲ್ಲಿ ವಿಪಕ್ಷ ನಾಯಕ, ಹಿರಿಯ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಝಾದ್ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಬಗ್ಗೆ ಪ್ರಧಾನಿ ಮೋದಿ ನೀಡಿರುವ ಹೇಳಿಕೆಯನ್ನು ಪ್ರಸ್ತಾವಿಸಿದರು. ಮಾಜಿ ಪ್ರಧಾನಿ, ಸೇನಾಪಡೆಯ ಮಾಜಿ ಮುಖ್ಯಸ್ಥ ಹಾಗೂ ಮಾಜಿ ರಾಜತಾಂತ್ರಿಕನ ವಿರುದ್ಧ ಗಂಭೀರ ಆರೋಪವನ್ನು ಮಾಡಲಾಗಿದೆ . ಇದೊಂದು ಗಂಭೀರ ವಿಷಯವಾಗಿರುವ ಕಾರಣ ಇತರ ವಿಷಯಗಳನ್ನು ಬದಿಗಿರಿಸಿ, ಇದರ ಕುರಿತು ಚರ್ಚೆ ನಡೆಸಬೇಕು ಎಂದು ಕೋರಿ ಪಕ್ಷವು ನಿಯಮ 267ರಡಿ ನೋಟಿಸ್ ನೀಡಿದೆ ಎಂದವರು ಹೇಳಿದರು. ಆದರೆ ನಿಲುವಳಿ ನೋಟಿಸ್ ಸ್ವೀಕಾರಾರ್ಹವಲ್ಲ ಎಂದ ಸಭಾಧ್ಯಕ್ಷ ವೆಂಕಯ್ಯ ನಾಯ್ಡು, ಸದನವು ಪ್ರಶ್ನೋತ್ತರ ಅವಧಿಯನ್ನು ಕೈಗೆತ್ತಿಕೊಳ್ಳಲಿದೆ ಎಂದು ಹೇಳಿದರು.

ಇದನ್ನು ಒಪ್ಪದ ಕಾಂಗ್ರೆಸ್ ಸದಸ್ಯರು ಘೋಷಣೆ ಕೂಗತೊಡಗಿದಾಗ ಕಲಾಪವನ್ನು ಅಪರಾಹ್ನ 2:30ರವರೆಗೆ ಮುಂದೂಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News