ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ವಿರುದ್ಧ 5,000 ಕೋ.ರೂ.ಮಾನನಷ್ಟ ಮೊಕದ್ದಮೆ
ಅಹ್ಮದಾಬಾದ್.ಡಿ.15: ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಅವರು ಸುಳ್ಳು, ಮಾನಹಾನಿಕರ ಮತ್ತು ಅವಮಾನಕಾರಿ ಹೇಳಿಕೆಗಳನ್ನು ನೀಡಿದ್ದಾರೆಂದು ಆರೋಪಿಸಿರುವ ರಿಲಯನ್ಸ್ ಅನಿಲ್ ಧೀರುಭಾಯಿ ಅಂಬಾನಿ ಸಮೂಹವು ಅವರ ವಿರುದ್ಧ ಗುಜರಾತ್ ಉಚ್ಚ ನ್ಯಾಯಾಲಯದಲ್ಲಿ 5,000 ಕೋ.ರೂ.ಗಳ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದೆ.
ನ.30ರಂದು ವಿತ್ತಸಚಿವ ಅರುಣ್ ಜೇಟ್ಲಿಯವರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದ ಸಿಂಘ್ವಿ, ಸರಕಾರವು ದೊಡ್ಡ ಸುಸ್ತಿದಾರರ ಸಾಲಗಳನ್ನು ಮನ್ನಾ ಮಾಡಿಲ್ಲ ಎಂದು ಹೇಳುವ ಮೂಲಕ ಅವರು ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಎಂದು ಹೇಳಿದ್ದರು.
ಸರಕಾರವು ಉದ್ದೇಶಪೂರ್ವಕ ಸುಸ್ತಿದಾರರ 1.88 ಲ.ಕೋ.ರೂ.ಗಳ ಸಾಲವನ್ನು ಮನ್ನಾ ಮಾಡಿದೆ ಎಂದು ಆರೋಪಿಸಿದ್ದ ಸಿಂಘ್ವಿ, 50 ಪ್ರಮುಖ ಕಾರ್ಪೊರೇಟ್ ಸಂಸ್ಥೆಗಳು ಬ್ಯಾಂಕುಗಳಿಗೆ 8.35 ಲ.ಕೋ.ರೂ.ಗಳನ್ನು ಬಾಕಿಯಿರಿಸಿವೆ ಎನ್ನುವುದು ಎಲ್ಲರಿಗೂ ಗೊತ್ತು ಮತ್ತು ಈ ಪೈಕಿ ಗುಜರಾತ್ ಮೂಲದ ಕಂಪನಿಗಳಾದ ರಿಲಯನ್ಸ್(ಅನಿಲ್ ಅಂಬಾನಿ ಸಮೂಹ), ಅದಾನಿ ಮತ್ತು ಎಸ್ಸಾರ್ 3 ಲ.ಕೋ.ರೂ. ಗಳ ಸಾಲಬಾಕಿ ಹೊಂದಿವೆ ಎಂದಿದ್ದರು. ವಿತ್ತ ಸಚಿವರು ಈ ಸಾಲಗಳನ್ನು ಅನುತ್ಪಾದಕ ಆಸ್ತಿಗಳೆಂದು ಘೋಷಿಸುವ ಬದಲು ರಫೇಲ್ ವ್ಯವಹಾರದಂತಹ ಇನ್ನಷ್ಟು ರಕ್ಷಣಾ ಗುತ್ತಿಗೆಗಳನ್ನು ನೀಡುವ ಮೂಲಕ ಸುಸ್ತಿದಾರ ಕಂಪನಿಗೆ ನೆರವಾಗಲು ಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.
ರಿಲಯನ್ಸ್ ಎರೋಸ್ಟ್ರಕ್ಚರ್‌ಲಿ. ಮತ್ತು ದಸಾಲ್ಟ್ ಏವಿಯೇಷನ್ ನಡುವಿನ ಜಂಟಿ ಉದ್ಯಮವು ಎರಡು ಖಾಸಗಿ ಕಂಪನಿಗಳ ನಡುವಿನ ದ್ವಿಪಕ್ಷೀಯ ಒಪ್ಪಂದವಾಗಿದೆ ಮತ್ತು ಇದಕ್ಕೂ ಸರಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ರಿಲಯನ್ಸ್ ಡಿಫೆನ್ಸ್ ಈ ಮೊದಲು ಹೇಳಿಕೆಯೊಂದರಲ್ಲಿ ತಿಳಿಸಿತ್ತು.