×
Ad

ಲೆಟರ್‌ಹೆಡ್‌ನಲ್ಲಿ ದೀನದಯಾಳ್ ಉಪಾಧ್ಯಾಯ ಫೋಟೊ ಕಡ್ಡಾಯಗೊಳಿಸಿದ ರಾಜಸ್ತಾನ ಸರಕಾರ

Update: 2017-12-15 19:22 IST

ಜೈಪುರ, ಡಿ.15: ಸರಕಾರದ ಲೆಟರ್‌ಹೆಡ್‌ನಲ್ಲಿ ಜನಸಂಘದ ಸಂಸ್ಥಾಪಕ ದೀನದಯಾಳ್ ಉಪಾಧ್ಯಾಯರ ಭಾವಚಿತ್ರವನ್ನು ರಾಷ್ಟ್ರಲಾಂಛನದ ಜೊತೆ ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ರಾಜಸ್ತಾನ ಸರಕಾರ ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಿದೆ.

ಇದರೊಂದಿಗೆ ಜನಸಂಘದ ಸ್ಥಾಪಕರ ಭಾವಚಿತ್ರವನ್ನು ಸರಕಾರದ ಲೆಟರ್‌ಹೆಡ್‌ನಲ್ಲಿ ಅಳವಡಿಸಿಕೊಂಡ ಪ್ರಪ್ರಥಮ ರಾಜ್ಯವಾಗಿ ರಾಜಸ್ತಾನ ಸರಕಾರ ಗುರುತಿಸಿಕೊಂಡಿದೆ. ಎಲ್ಲಾ ಇಲಾಖೆಗಳು, ನಗರಪಾಲಿಕೆ, ನಿಗಮಮಂಡಳಿಗಳು ಹಾಗೂ ಸ್ವಾಯತ್ತ ಇಲಾಖೆಗಳು ದೀನದಯಾಳ್ ಉಪಾಧ್ಯಾಯರ ಭಾವಚಿತ್ರವನ್ನು ಒಳಗೊಂಡಿರುವ ಹೊಸ ಲೆಟರ್‌ಹೆಡ್ ಕಡ್ಡಾಯವಾಗಿ ಬಳಸಬೇಕು ಎಂದು 2017ರ ಡಿ.12ರಂದು ರಾಜಸ್ತಾನ ಸರಕಾರದ ಪ್ರಧಾನ ಕಾರ್ಯದರ್ಶಿ ಪಿ.ಕೆ.ಗೋಯಲ್ ಸಹಿ ಹಾಕಿದ ಆದೇಶದಲ್ಲಿ ತಿಳಿಸಲಾಗಿದೆ. ಅಲ್ಲದೆ ಹೊಸ ಲೆಟರ್‌ಹೆಡ್ ಮುದ್ರಣವಾಗಿ ಬರುವವರೆಗೆ ಈಗಿನ ಲೆಟರ್‌ಹೆಡ್‌ಗೆ ದೀನದಯಾಳ್ ಭಾವಚಿತ್ರದ ಸ್ಟಿಕ್ಕರ್ ಅಂಟಿಸಿ ಬಳಸುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಈ ಬಗ್ಗೆ ತೀವ್ರ ಆಕ್ಷೇಪ ಸೂಚಿಸಿರುವ ವಿಪಕ್ಷ ಕಾಂಗ್ರೆಸ್, ಹಿಂದುತ್ವದ ಸಿದ್ದಾಂತವನ್ನು ಪ್ರಸಾರಗೊಳಿಸುವ ಪ್ರಯತ್ನದ ಭಾಗ ಇದಾಗಿದೆ ಎಂದು ಟೀಕಿಸಿದೆ. ಸರಕಾರದ ಈ ನಿರ್ಧಾರವನ್ನು ಒಪ್ಪಲಾಗದು. ದೀನದಯಾಳ್ ಉಪಾಧ್ಯಾಯರು ಮಾಜಿ ಪ್ರಧಾನಿ ಅಥವಾ ಮಾಜಿ ರಾಷ್ಟ್ರಪತಿಗಳಲ್ಲ, ಕೇವಲ ಬಿಜೆಪಿ ಪಕ್ಷದ ಮುಖಂಡರು. ಅವರ ಭಾವಚಿತ್ರವನ್ನು ಸರಕಾರದ ಲೆಟರ್‌ಹೆಡ್‌ನಲ್ಲಿ ಬಳಸುವುದು ಸರಿಯಲ್ಲ ಎಂದು ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ಹೇಳಿದ್ದಾರೆ. ಈ ಹಿಂದೆ, ಸರಕಾರದ ಜಾಹೀರಾತುಗಳಲ್ಲಿ ದೀನದಯಾಳ್ ಉಪಾಧ್ಯಾಯರ ಲೋಗೋ ಬಳಸುವುದನ್ನು ರಾಜಸ್ತಾನ ಸರಕಾರ ಕಡ್ಡಾಯಗೊಳಿಸಿತ್ತು. ಜೊತೆಗೆ, ಎಲ್ಲಾ ಬಿಜೆಪಿ ಶಾಸಕರೂ ತಮ್ಮ ಅಧಿಕೃತ ಲೆಟರ್‌ಹೆಡ್‌ನಲ್ಲಿ ಉಪಾಧ್ಯಾಯರ ಲೋಗೋ ಬಳಸಬೇಕು ಎಂದು ಸರಕಾರ ಸೂಚಿಸಿತ್ತು. ಅಲ್ಲದೆ ಎಲ್ಲಾ ಸರಕಾರಿ ಶಾಲೆಗಳ ಲೈಬ್ರೆರಿಯಲ್ಲಿ ದೀನದಯಾಳ್ ಉಪಾಧ್ಯಾಯರ ಎಲ್ಲಾ ಕೃತಿಗಳು ಹಾಗೂ ಜೀವನಚರಿತ್ರೆಯ ಸಂಪುಟವನ್ನು ಖರೀದಿಸಬೇಕೆಂದು ಸರಕಾರ ಆದೇಶಿಸಿದೆ. ಈ ಕೃತಿಸಂಪುಟದ ಬೆಲೆ 6,000 ರೂ. ಆಗಿದ್ದು, ಈ ಮೊತ್ತ ಶಾಲೆಗಳಿಗೆ ನೀಡಿರುವ ವಾರ್ಷಿಕ ಅನುದಾನಕ್ಕಿಂತ ನಾಲ್ಕು ಪಟ್ಟು ಅಧಿಕವಾಗಿದೆ. ಈ ಬಗ್ಗೆಯೂ ತೀವ್ರ ಟೀಕೆ ಎದುರಾಗಿದ್ದು ಇದೊಂದು ಬಹುಕೋಟಿ ಮೊತ್ತದ ಹಗರಣ ಎಂದು ವಿಪಕ್ಷಗಳು ಟೀಕಿಸಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News