×
Ad

ಆದಿತ್ಯನಾಥ್ ಪ್ರಭಾವ: ಐಎಎಸ್ ಸಪ್ತಾಹದ ಮೆನುವಿನಲ್ಲಿ ಮಾಂಸಾಹಾರಕ್ಕೆ ಸ್ಥಾನವಿಲ್ಲ

Update: 2017-12-15 19:36 IST

ಲಕ್ನೊ, ಡಿ.15: ಉತ್ತರಪ್ರದೇಶದಲ್ಲಿ ಪ್ರತೀ ವರ್ಷ ಡಿಸೆಂಬರ್‌ನಲ್ಲಿ ಐಎಎಸ್ (ಭಾರತೀಯ ಆಡಳಿತಾತ್ಮಕ ಸೇವೆ) ಸಪ್ತಾಹ ಆಚರಿಸಲಾಗುತ್ತದೆ. ಆದರೆ ಈ ವರ್ಷ ನಡೆಯುವ ಸಪ್ತಾಹ ಆಚರಣೆ ಮಾತ್ರ ವಿಭಿನ್ನವಾಗಿರುತ್ತದೆ. ಈ ವರ್ಷದ ಆಹಾರದ ಪಟ್ಟಿ(ಮೆನು)ಯಲ್ಲಿ ಕೇವಲ ಸಸ್ಯಾಹಾರವನ್ನು ಮಾತ್ರ ಸೇರಿಸಲಾಗಿದೆ.

  ರಾಜಕಾರಣಿಯಾಗಿ ಪರಿವರ್ತನೆಗೊಂಡ ಸನ್ಯಾಸಿ ಆದಿತ್ಯನಾಥ್ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡ ಪ್ರಭಾವ ಇದು ಎನ್ನಲಾಗಿದೆ. ಡಿ.14ರಂದು ಆರಂಭಗೊಂಡಿರುವ ಐಎಎಸ್ ಸಪ್ತಾಹದ ಮೆನುವಿನಲ್ಲಿ ಈ ಬಾರಿ ಮಾಂಸ, ಕೋಳಿ, ಮೀನಿನ ಖಾದ್ಯಗಳು ಕಾಣಿಸಿಕೊಂಡಿಲ್ಲ. ಕೇವಲ ಸಸ್ಯಾಹಾರ ಮಾತ್ರ ಸರಬರಾಜು ಮಾಡಲಾಗಿದೆ. ಸಸ್ಯಾಹಾರಿಯಾಗಿರುವ ಮುಖ್ಯಮಂತ್ರಿಯವರ ‘ಇಷ್ಟಾನಿಷ್ಟ’ಗಳನ್ನು ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.

   2016ರಲ್ಲಿ ರಾಜ್ಯಪಾಲ ರಾಮ್‌ನಾಕ್ ಆತಿಥೇಯತ್ವದಲ್ಲಿ ರಾಜಭವನದಲ್ಲಿ ನಡೆದ ಐಎಎಸ್ ಸಪ್ತಾಹ ಕಾರ್ಯಕ್ರಮದಲ್ಲಿ ಅವಧ್ ಶೈಲಿಯ ಮಾಂಸಾಹಾರದ ಖಾದ್ಯಗಳನ್ನು ಬಡಿಸಲಾಗಿತ್ತು. ಈ ಹಿಂದಿನ ಎಲ್ಲಾ ಸಪ್ತಾಹ ಕಾರ್ಯಕ್ರಮದಲ್ಲೂ ಮಾಂಸಾಹಾರಿ ಖಾದ್ಯಗಳನ್ನು ಬಡಿಸಲಾಗಿದೆ. ಆದರೆ ಇದೇ ಮೊದಲ ಬಾರಿಗೆ ಅಧಿಕಾರಿ ವರ್ಗದವರು ಇದರಿಂದ ವಂಚಿತರಾಗಿದ್ದಾರೆ ಎಂದು ಅಧಿಕಾರಿಯೋರ್ವರು ನಿರಾಶೆ ವ್ಯಕ್ತಪಡಿಸಿದ್ದಾರೆ. ಈ ಬಾರಿಯ ಮೆನುವಿನಲ್ಲಿ ಶಾಹಿ ಕೋಫ್ತ, ದಾಲ್ ಮಖಾನಿ, ಪನೀರ್ ಟಿಕ್ಕ, ಫ್ರೈಡ್ ರೈಸ್, ಹಂಡಿ ಪನೀರ್, ಗುಲಾಬ್ ಜಾಮೂನ್ ಮತ್ತು ಗಾಜರ್ ಕ ಹಲ್ವ ಸೇರಿದ್ದವು.

ಐಎಎಸ್ ಸಪ್ತಾಹ ಕಾರ್ಯಕ್ರಮದಲ್ಲಿ ನೃತ್ಯ, ಗಾಯನ, ನಾಟಕ ಇತ್ಯಾದಿ ಮನರಂಜನೆ ಕಾರ್ಯಕ್ರಮಗಳಲ್ಲಿ ಯುಪಿ ಪದವೃಂದದ ಐಎಎಸ್ ಅಧಿಕಾರಿಗಳು ತಮ್ಮ ಕುಟುಂಬವರ್ಗದ ಸಹಿತ ಪಾಲ್ಗೊಳ್ಳುತ್ತಾರೆ.

ಈ ಹಿಂದಿನ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಆಡಳಿತಾವಧಿಯಲ್ಲಿ ಐಎಎಸ್ ತಂಡ ಹಾಗೂ ರಾಜಕಾರಣಿಗಳ ತಂಡದ ಮಧ್ಯೆ ನಡೆಯುತ್ತಿದ್ದ ಕ್ರಿಕೆಟ್ ಟೂರ್ನಿಯನ್ನು ರಾಷ್ಟ್ರೀಯ ಚಾನೆಲ್‌ಗಳು ಪ್ರಸಾರ ಮಾಡುತ್ತಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News