ಏಡ್ಸ್ ರೋಗಿಗಳಿಗೆ ಕನಿಷ್ಠ ಮಾಸಾಶನದ ಬೇಡಿಕೆ ಪರಿಶೀಲಿಸಲು ದಿಲ್ಲಿ ಸರಕಾರಕ್ಕೆ ಹೈಕೋರ್ಟ್ ಸೂಚನೆ
ಹೊಸದಿಲ್ಲಿ, ಡಿ.15: ಏಡ್ಸ್ ರೋಗದಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಕನಿಷ್ಠ ಮಾಸಾಶನ ಒದಗಿಸುವ ಬಗ್ಗೆ ಪರಿಶೀಲಿಸುವಂತೆ ದಿಲ್ಲಿ ಹೈಕೋರ್ಟ್ ದಿಲ್ಲಿ ಸರಕಾರಕ್ಕೆ ತಿಳಿಸಿದೆ.
ಏಡ್ಸ್ ರೋಗದಿಂದ ಬಳಲುತ್ತಿರುವ ವ್ಯಕ್ತಿಯೋರ್ವ ತನಗೆ ದೊರೆಯುತ್ತಿರುವ ಮಾಸಿಕ ಪಿಂಚಣಿಯನ್ನು 1,000 ರೂ.ನಿಂದ 3,000 ರೂ.ಗೆ ಹೆಚ್ಚಿಸಬೇಕೆಂದು ಕೋರಿ ಬರೆದಿರುವ ಪತ್ರದ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆ ಸಂದರ್ಭ ಪ್ರಭಾರ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಹಾಗೂ ನ್ಯಾಯಮೂರ್ತಿ ಹರಿಶಂಕರ್ ಅವರನ್ನೊಳಗೊಂಡಿರುವ ನ್ಯಾಯಪೀಠವು , ಇಂತಹ ರೋಗದಿಂದ ಬಾಧಿತರಾಗಿರುವ ವ್ಯಕ್ತಿಗಳು ತಮ್ಮ ಕುಟುಂಬದ ನಿರ್ವಹಣೆಯನ್ನೂ ಮಾಡಬೇಕಿದೆ ಎಂದು ತಿಳಿಸಿತು. ಅಲ್ಲದೆ ಏಡ್ಸ್ ಬಾಧಿತರಿಗೆ ನೀಡಲಾಗುತ್ತಿರುವ ಆರ್ಥಿಕ ನೆರವನ್ನು ಹೆಚ್ಚಿಸುವ ಬಗ್ಗೆಯೂ ಪರಿಶೀಲಿಸುವಂತೆ ದಿಲ್ಲಿ ಸರಕಾರಕ್ಕೆ ಸೂಚಿಸಿತು. ಈ ವಿಷಯದ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿ ದಿಲ್ಲಿ ಸರಕಾರ, ರಾಷ್ಟ್ರೀಯ ಏಡ್ಸ್ ನಿಯಂತ್ರಣಾ ಸಂಸ್ಥೆ ಮತ್ತು ದಿಲ್ಲಿ ಸರಕಾರದ ಏಡ್ಸ್ ನಿಯಂತ್ರಣ ಸಂಸ್ಥೆಗೆ ನೋಟಿಸ್ ಜಾರಿ ಮಾಡಲಾಗಿದೆ.