×
Ad

ಉತ್ತರ ಪ್ರದೇಶದಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ, ಬೆಂಕಿ ಹಚ್ಚಿ ಹತ್ಯೆ ಮಾಡಲು ಯತ್ನ

Update: 2017-12-16 18:44 IST

 ಮೈನ್‌ಪುರಿ, (ಉ.ಪ್ರ), ಡಿ.16: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಮೂರು ಜನರು ಸತತ ಎರಡು ತಿಂಗಳ ಕಾಲ ಅತ್ಯಾಚಾರ ನಡೆಸಿ ನಂತರ ಆಕೆ ಪೊಲೀಸರಿಗೆ ದೂರು ನೀಡುವ ಧೈರ್ಯ ತೋರಿದಾಗ ಆಕೆಯನ್ನು ಸಜೀವ ದಹಿಸಲು ಮುಂದಾದ ಘಟನೆ ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯಲ್ಲಿ ನಡೆದಿದೆ. ಸದ್ಯ ಶೇಕಡಾ 40 ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿರುವ ಬಾಲಕಿಯು ಆರೋಪಿಗಳು ತನ್ನ ಹೆತ್ತವರನ್ನು ಹತ್ಯೆ ಮಾಡುವುದಾಗಿ ಬೆದರಿಸಿ ಸತತ ಎರಡು ತಿಂಗಳ ಕಾಲ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವುದಾಗಿ ಶುಕ್ರವಾರ ಪೊಲೀಸರಿಗೆ ತಿಳಿಸಿದ್ದಾಳೆ. ತನ್ನ ಮೇಲಾಗುತ್ತಿರುವ ಅತ್ಯಾಚಾರದ ಬಗ್ಗೆ ಬಾಲಕಿಯು ಕೆಲವೇ ದಿನಗಳ ಹಿಂದೆ ತನ್ನ ಹೆತ್ತವರಿಗೆ ತಿಳಿಸಿದ್ದು ನಂತರ ಆಕೆಯ ಹೆತ್ತವರು ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದರು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಸಂತ್ರಸ್ತ ಬಾಲಕಿಯ ಹೆತ್ತವರು ದೂರು ನೀಡಿದ ಎರಡು ದಿನಗಳ ನಂತರವೂ ಪೊಲೀಸರು ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಮಾಧ್ಯಮ ವರದಿಯಲ್ಲಿ ತಿಳಿಸಲಾಗಿದೆ.

ಪೊಲೀಸರಿಗೆ ದೂರು ನೀಡಿದ್ದರಿಂದ ಕೋಪಗೊಂಡ ಆರೋಪಿಗಳು ಬುಧವಾರದಂದು ಬಾಲಕಿಯು ತನ್ನ ಮನೆಯಲ್ಲಿ ಒಬ್ಬಳೇ ಇದ್ದ ಸಂದರ್ಭದಲ್ಲಿ ಮನೆಯೊಳಗೆ ಪ್ರವೇಶಿಸಿ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಲು ಯತ್ನಿಸಿದ್ದಾರೆ. ಇದರಿಂದಾಗಿ ಬಾಲಕಿಯ ದೇಹ ಭಾಗಶಃ ಸುಟ್ಟು ಹೋಗಿದೆ. ಸದ್ಯ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು ಮುಂದಿನ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.

ಸದ್ಯ ಆರೋಪಿಗಳು ನಾಪತ್ತೆಯಾಗಿದ್ದು ದೂರು ದಾಖಲಿಸಿದರೂ ಆರೋಪಿಗಳ ವಿರುದ್ಧ ಎರಡು ದಿನಗಳ ಕಾಲ ಯಾವುದೇ ಕ್ರಮ ಕೈಗೊಳ್ಳದ ಸಬ್‌ಇನ್ಸ್‌ಪೆಕ್ಟರ್‌ನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಮೈನ್‌ಪುರಿಯ ಹಿರಿಯ ಪೊಲೀಸ್ ಅಧಿಕಾರಿ ಒ.ಪಿ ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News