ಮುಝಫರ್‌ನಗರ ದಂಗೆ: ಸುರೇಶ್ ರಾಣಾ, ಬಿಜೆಪಿ ಶಾಸಕರ ವಿರುದ್ಧ ಜಾಮೀನುರಹಿತ ವಾರಂಟ್

Update: 2017-12-16 13:48 GMT

ಮುಝಫರ್‌ನಗರ, ಡಿ.16: 2013ರ ಮುಝಫರ್‌ನಗರದಲ್ಲಿ ನಡೆದ ದಂಗೆಗಳಿಗೆ ಸಂಬಂಧಪಟ್ಟಂತೆ ಉತ್ತರ ಪ್ರದೇಶದ ಸಚಿವ ಸುರೇಶ್ ರಾಣಾ, ಮಾಜಿ ಕೇಂದ್ರ ಸಚಿವ ಸಂಜೀವ್ ಬಲ್ಯನ್, ಬಿಜೆಪಿ ಶಾಸಕರಾದ ಸಂಗೀತ್ ಸೋಮ್ ಮತ್ತು ಉಮೇಶ್ ಮಲಿಕ್ ಹಾಗೂ ಇತರರ ವಿರುದ್ಧ ಸ್ಥಳೀಯ ನ್ಯಾಯಾಲಯವು ಜಾಮೀನುರಹಿತ ವಾರಂಟ್ ಹೊರಡಿಸಿದೆ.

ಹೆಚ್ಚುವರಿ ಮುಖ್ಯ ನ್ಯಾಯಾಧೀಶರಾದ ಮಧು ಗುಪ್ತಾ ಅವರು ಶುಕ್ರವಾರ ಜಾಮೀನುರಹಿತ ವಾರಂಟ್ ಹೊರಡಿಸಿದ್ದು 2018ರ ಜನವರಿ 19ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಆರೋಪಿಗಳಿಗೆ ಸೂಚಿಸಿರುವುದಾಗಿ ವಿಶೇಷ ತನಿಖಾ ತಂಡದ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 153ಎ ಅಡಿ ತನಿಖೆ ನಡೆಸಲು ಅನುಮತಿ ಕೋರಿ ವಿಶೇಷ ತನಿಖಾ ತಂಡವು ಉತ್ತರ ಪ್ರದೇಶ ಸರಕಾರಕ್ಕೆ ಮನವಿ ಮಾಡಿತ್ತು. ಸರಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಎಸ್‌ಐಟಿ ತನಿಖೆ ಆರಂಭಿಸಿತ್ತು. 2013ರ ಆಗಸ್ಟ್‌ನ ಕೊನೆಯ ವಾರದಲ್ಲಿ ನಡೆದ ಮಹಾಪಂಚಾಯತ್‌ನಲ್ಲಿ ಭಾಗವಹಿಸಿದ್ದ ಆರೋಪಿಗಳು ತಮ್ಮ ಭಾಷಣದ ಮೂಲಕ ಹಿಂಸೆಗೆ ಪ್ರಚೋದನೆ ನೀಡಿದ್ದರು ಎಂದು ಆರೋಪಿಸಲಾಗಿದೆ.

ನಿಷೇಧಾಜ್ಞೆಯನ್ನು ಉಲ್ಲಂಘಿಸಿದ, ಸಾರ್ವಜನಿಕ ಸೇವಕರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ಇತರ ಕಾರಣಗಳಿಗಾಗಿ ಆರೋಪಿಗಳು ವಿವಿಧ ಸೆಕ್ಷನ್‌ಗಳಡಿಯಲ್ಲಿ ಆರೋಪವನ್ನು ಎದುರಿಸುತ್ತಿದ್ದಾರೆ.

2013ರ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಮುಝಫರ್‌ನಗರ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ನಡೆದ ದಂಗೆಗಳಲ್ಲಿ 60 ಜನರು ಸಾವನ್ನಪ್ಪಿದ್ದರೆ 40,000ಕ್ಕೂ ಅಧಿಕ ಜನರು ನಿರಾಶ್ರಿತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News