2014ರಿಂದ ದೇಶವು ಹಿಂದೆಂದೂ ಕಂಡಿರದ ಸವಾಲುಗಳನ್ನು ಎದುರಿಸುತ್ತಿದೆ,ಆದರೆ ನಾವು ಹೆದರುವುದಿಲ್ಲ:ಸೋನಿಯಾ

Update: 2017-12-16 14:12 GMT

ಹೊಸದಿಲ್ಲಿ,ಡಿ.16: ಶನಿವಾರ ಇಲ್ಲಿ ಪುತ್ರ ರಾಹುಲ್ ಗಾಂಧಿಯವರಿಗೆ ಪಕ್ಷದ ಪರಮೋಚ್ಚ ಹುದ್ದೆಯನ್ನು ಹಸ್ತಾಂತರಿಸುವ ಸಂದರ್ಭ ಕಾಂಗ್ರೆಸ್ ಅಧ್ಯಕ್ಷೆಯಾಗಿ ತನ್ನ ಅಂತಿಮ ಭಾಷಣವನ್ನು ಮಾಡಿದ ಸೋನಿಯಾ ಗಾಂಧಿ ಅವರು, 2014ರಿಂದಲೂ ದೇಶದಲ್ಲಿ ಭೀತಿಯ ವಾತಾವರಣವಿದೆ ಮತ್ತು ಸಾಂವಿಧಾನಿಕ ಮೌಲ್ಯಗಳ ಮೇಲೆ ದಾಳಿ ನಡೆಯುತ್ತಿದೆ ಎಂದು ಹೇಳುವ ಮೂಲಕ ಬಿಜೆಪಿಯನ್ನು ತೀವ್ರ ತರಾಟೆಗೆತ್ತಿಕೊಂಡರು. ತನ್ನ ಪಕ್ಷವು ಇಂತಹ ಒತ್ತಡಗಳಿಗೆ ಬಲಿಯಾಗುದಿಲ್ಲ ಮತ್ತು ಮರಳಿ ಪುಟಿದೇಳಲಿದೆ ಎಂದರು.

ಎಐಸಿಸಿ ಕೇಂದ್ರ ಕಚೇರಿಯಲ್ಲಿ ನಡೆದ ರಾಹುಲ್ ಪಟ್ಟಾಭಿಷೇಕ ಸಂದರ್ಭ ಅವರಿಗೆ ಶುಭ ಹಾರೈಸಲು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಪಕ್ಷದ ಕಚೇರಿಯಲ್ಲಿ ವೈಯಕ್ತಿಕ ಭಾಷಣವನ್ನು ಮಾಡಿದ ಸೋನಿಯಾ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ರಾಹುಲ್‌ರನ್ನು ಅಭಿನಂದಿಸಿದರು.

ಮಾಜಿ ಪ್ರಧಾನಿ ಹಾಗೂ ತನ್ನ ಅತ್ತೆ ಇಂದಿರಾ ಗಾಂಧಿಯವರು ತನ್ನನ್ನು ಸ್ವಂತ ಮಗಳಂತೆ ನೋಡಿಕೊಂಡಿದ್ದರು ಮತ್ತು ಅವರಿಂದ ಭಾರತದ ಬಗ್ಗೆ ತಾನು ಬಹಳಷ್ಟನ್ನು ಕಲಿತುಕೊಂಡಿದ್ದೇನೆ ಎಂದು ಹೇಳಿದ ಸೋನಿಯಾ, ಇದೊಂದು ನೈತಿಕ ಹೋರಾಟ ವಾಗಿದೆ. ಕಾಂಗ್ರೆಸ್ ಆತ್ಮಪರೀಕ್ಷೆ ಮಾಡಿಕೊಳ್ಳಬೇಕು ಮತ್ತು ದೇಶದ ಸಾಂವಿಧಾನಿಕ ಮೌಲ್ಯಗಳ ರಕ್ಷಣೆಗೆ ಅಗತ್ಯವಾದರೆ ತ್ಯಾಗಗಳನ್ನು ಮಾಡಬೇಕು ಎಂದರು.

ತನ್ನ ಭಾವನಾತ್ಮಕ ಮತ್ತು ವೈಯಕ್ತಿಕ ಭಾಷಣದಲ್ಲಿ ನೆಹರು-ಗಾಂಧಿ ಕುಟುಂಬದ ಇತಿಹಾಸವನ್ನು ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರೊಂದಿಗೆ ವಿವಾಹದ ಬಳಿಕ ತನ್ನ ಬಾಳಪಯಣವನ್ನು ಸ್ಮರಿಸಿಕೊಂಡ 71ರ ಹರೆಯದ ಸೋನಿಯಾ, ಈ ದೇಶಕ್ಕಾಗಿ ತಮ್ಮ ಬದುಕುಗಳನ್ನೇ ಮುಡಿಪಾಗಿಟ್ಟ ಕ್ರಾಂತಿಕಾರಿಗಳ ಕುಟುಂಬದೊಂದಿಗೆ ಬೆಸೆದುಕೊಂಡಿರುವದು ತನಗೆ ಹೆಮ್ಮೆಯನ್ನುಂಟು ಮಾಡಿದೆ ಎಂದು ಹೇಳಿದರು.

ಪುತ್ರ ರಾಹುಲ್ ಗಾಂಧಿಯವರಲ್ಲಿ ಭರವಸೆಯನ್ನು ವ್ಯಕ್ತಪಡಿಸಿದ ಸೋನಿಯಾ, ಅವರ ಮೇಲಿನ ‘ಖಾಸಗಿ ದಾಳಿಗಳು’ ಅವರನ್ನು ನಿರ್ಭೀತ ವ್ಯಕ್ತಿಯನ್ನಾಗಿಸಿವೆ. ಅವರು ಧೈರ್ಯದಿಂದ ದೇಶವನ್ನು ಮುನ್ನಡೆಸುತ್ತಾರೆ ಎಂಬ ವಿಶ್ವಾಸ ತನಗಿದೆ ಎಂದರು.

ತನ್ನ ಪತಿ ಮತ್ತು ಅತ್ತೆಯ ಬೆಂಬಲ ಮತ್ತು ಮಾರ್ಗದರ್ಶನವನ್ನು ಮೆಲುಕು ಹಾಕಿದ ಅವರು, ಇಂದಿರಾಜಿಯವರ ನಿಧನದ ಬಳಿಕ ರಾಜೀವಜಿಯವರೂ ನಿಧನರಾದರು. ತಾನು ಬೆಂಬಲವನ್ನು ಕಳೆದುಕೊಂಡಿದ್ದೆ ಮತ್ತು ಅವರ ಅಗಲಿಕೆಯ ನೋವಿನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ತನಗೆ ಸುದೀರ್ಘ ಅವಧಿ ಬೇಕಾಯಿತು ಎಂದರು.

ಆರಂಭದಲ್ಲಿ ತಾನು ಹಿಂಜರಿದಿದ್ದೆನಾದರೂ ದೇಶಕ್ಕೆ ಸೇವೆ ಸಲ್ಲಿಸುವ ಉದ್ದೇಶದಿಂದ ರಾಜಕೀಯವನ್ನು ಪ್ರವೇಶಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದೆ ಎಂದ ಅವರು, ಪಕ್ಷವು ದುರ್ಬಲಗೊಳ್ಳುತ್ತಿದೆ ಮತ್ತು ದೇಶವು ಕೋಮುವಾದಿಗಳ ಕೈವಶವಾಗುತ್ತಿದೆ ಎಂದು ತನಗೆ ಅನ್ನಿಸಿದಾಗ ತಾನು ಪಕ್ಷದ ಕಾರ್ಯಕರ್ತರ ಬೇಡಿಕೆಗಳನ್ನು ಆಲಿಸಬೇಕಾಗಿ ಬಂದಿತ್ತು. ಇಂದಿರಾ ಮತ್ತು ರಾಜೀವರ ತ್ಯಾಗಗಳನ್ನು ಗೌರವಿಸಲು ತಾನು ರಾಜಕೀಯವನ್ನು ಪ್ರವೇಶಿಸಿದೆ ಎಂದರು.

19 ವರ್ಷಗಳ ಕಾಲ ಅಧ್ಯಕ್ಷೆಯಾಗಿ ಅತ್ಯಂತ ಸುದೀರ್ಘ ಅವಧಿಗೆ ಪಕ್ಷದ ಚುಕ್ಕಾಣಿಯನ್ನು ಹಿಡಿದ ಹೆಗ್ಗಳಿಕೆಯೊಂದಿಗೆ ನಿರ್ಗಮಿಸುತ್ತಿರುವ ಸೋನಿಯಾ, ‘‘2014ರಿಂದಲೂ ನಾವು ಪ್ರತಿಪಕ್ಷದ ಪಾತ್ರವನ್ನು ನಿರ್ವಹಿಸುತ್ತಿದ್ದೇವೆ. ಇಂದು ನಾವು ಎದುರಿಸುತ್ತಿರುವ ಸವಾಲು ಅತ್ಯಂತ ಬೃಹತ್ ಸ್ವರೂಪದ್ದಾಗಿದೆ. ನಮ್ಮ ಸಾಂವಿಧಾನಿಕ ವೌಲ್ಯಗಳ ಮೇಲೆ ದಾಳಿ ನಡೆಯುತ್ತಿದೆ. ನಮ್ಮ ಪಕ್ಷವು ಹಲವಾರು ಚುನಾವಣೆಗಳಲ್ಲಿ ಸೋಲನ್ನು ಕಂಡಿದೆ, ಆದರೆ ನಮ್ಮ ಪಕ್ಷವು ಎಂದೂ ಮಣಿಯುವುದಿಲ್ಲ ’’ ಎಂದು ಹೇಳುವ ಮೂಲಕ ಹಾಲಿ ಆಡಳಿತದ ವಿರುದ್ಧ ತೀವ್ರ ದಾಳಿಯನ್ನು ನಡೆಸಿದರು. ನಮ್ಮ ದೇಶದ ಬುನಾದಿ ಮತ್ತು ನಾವು ಹಂಚಿಕೊಂಡಿರುವ ಸಂಸ್ಕೃತಿಗಳ ಮೇಲೆ ದಾಳಿಗಳು ನಡೆಯುತ್ತಿವೆ, ದೇಶದಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ ಎಂದರು.

ರಾಹುಲ್ ತನ್ನ ಮಗ, ಹೀಗಾಗಿ ತಾನು ಅವರನ್ನು ಹೊಗಳುವದು ಸರಿಯಲ್ಲ. ಆದರೆ ಅವರು ತನ್ನ ಬಾಲ್ಯದಿಂದಲೇ ಹಿಂಸೆಯ ನೋವನ್ನು ಸಹಿಸುವಂತಾಗಿತ್ತು, ರಾಜಕೀಯವನ್ನು ಸೇರಿದ ಬಳಿಕ ವೈಯಕ್ತಿಕ ದಾಳಿಗಳನ್ನು ಎದುರಿಸಿದ್ದಾರೆ ಮತ್ತು ಇವೆಲ್ಲವೂ ಅವರನ್ನು ಗಟ್ಟಿಗೊಳಿಸಿವೆ ಎಂದು ತಾನು ಹೇಳಬಲ್ಲೆ ಎಂದರು.

ಸೋನಿಯಾ ಭಾಷಣಕ್ಕೆ ಅಡ್ಡಿಯಾದ ಕಾರ್ಯಕರ್ತರ ಪಟಾಕಿ ಸಂಭ್ರಮ

ಪುತ್ರ ರಾಹುಲ್ ಗಾಂಧಿಯವರಿಗೆ ಅಧಿಕಾರ ಹಸ್ತಾಂತರ ಸಂದರ್ಭದಲ್ಲಿ ಭಾಷಣ ಮಾಡಲು ವೇದಿಕೆಯನ್ನೇರಿದ ಸೋನಿಯಾ ಅವರಿಗೆ ಕಾರ್ಯಕರ್ತರು ಸಿಡಿಸುತ್ತಿದ್ದ ಪಟಾಕಿಗಳ ಭಾರೀ ಶಬ್ದದಿಂದಾಗಿ ತನ್ನ ಮಾತುಗಳನ್ನು ಆರಂಭಿಸಲು ಸಾಧ್ಯವಾಗಲಿಲ್ಲ.

‘‘ನನ್ನ ಭಾಷಣಕ್ಕೆ ಮುನ್ನ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿರುವ ರಾಹುಲ್ ಗಾಂಧಿಯವರನ್ನು ಅಭಿನಂದಿಸಲು ಮತ್ತು ಆಶೀರ್ವದಿಸಲು ನಾನು ಬಯಸಿದ್ದೇನೆ ’’ಎಂದು ಸೋನಿಯಾ ಹೇಳಿದರಾದರೂ ಅದರ ಬೆನ್ನಿಗೇ ಎಐಸಿಸಿ ಕಚೇರಿಯ ಹೊರಗೆ ಪಟಾಕಿಗಳ ಕಿವಿ ಗಡಚಿಕ್ಕುವ ಶಬ್ದದಿಂದಾಗಿ ಅವರು ತನ್ನ ಭಾಷಣವನ್ನು ನಿಲ್ಲಿಸಬೇಕಾಯಿತು.

ಪಟಾಕಿಗಳ ಶಬ್ದವು ನಿಲ್ಲಲು ಅವರು ವೇದಿಕೆಯಲ್ಲಿ ಕೆಲ ಕಾಲ ಮೌನವಾಗಿ ನಿಂತಿದ್ದರು. ಪಟಾಕಿಗಳನ್ನು ಸಿಡಿಸದಂತೆ ಪಕ್ಷದ ನಾಯಕರು ಕಾರ್ಯಕರ್ತರಿಗೆ ಸೂಚಿಸಿದ್ದರೂ ಪಟಾಕಿಗಳ ಅಬ್ಬರ ಮುಂದುವರಿದಿತ್ತು. ಒಂದು ಹಂತದಲ್ಲಿ ಕೆರಳಿದ ಸೋನಿಯಾ,ತನಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದೂ ಹೇಳಿದರು.

ಪಟಾಕಿಗಳ ಸದ್ದು ನಿಂತ ನಂತರವೇ ಅವರು ತನ್ನ ಭಾಷಣವನ್ನು ಪುನರಾರಂಭಿಸಿ ಕಾಂಗ್ರೆಸ್ ಅಧ್ಯಕ್ಷೆಯಾಗಿ ತನ್ನ 19 ವರ್ಷಗಳ ಅಧಿಕಾರಾವಧಿಯನ್ನು ಮೆಲುಕು ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News