×
Ad

ಫೇಸ್‌ಬುಕ್‌ನ ಫ್ರೀ ಬೇಸಿಕ್ಸ್ ಪ್ರಸ್ತಾವಕ್ಕೆ ನಾನು ಅನುಮತಿ ನಿರಾಕರಿಸಿದ್ದೆ: ರವಿಶಂಕರ ಪ್ರಸಾದ್

Update: 2017-12-16 23:14 IST

ಹೊಸದಿಲ್ಲಿ,ಡಿ.16: ತಾನು ದೂರಸಂಪರ್ಕ ಸಚಿವಾಲಯದ ಹೊಣೆಯನ್ನು ಹೊತ್ತಿದ್ದಾಗ ಫೇಸ್‌ಬುಕ್‌ನ ಫ್ರೀ ಬೇಸಿಕ್ಸ್ ವೇದಿಕೆಗೆ ಅನುಮತಿಯನ್ನು ನಿರಾಕರಿಸಿದ್ದೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ್ ಅವರು ಶನಿವಾರ ಇಲ್ಲಿ ಹೇಳಿದರು.

ಡಿಜಿಟಲ್ ಇಂಡಿಯಾ ಶೃಂಗಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಅಂತರ್ಜಾಲ ಸೌಲಭ್ಯವನ್ನು ಪಡೆಯುವ ಹಕ್ಕನ್ನು ನಿರಾಕರಿಸಲು ಸಾಧ್ಯವಿಲ್ಲ. ಹೀಗಾಗಿ ಫೇಸ್‌ಬುಕ್ ತನ್ನ ಫ್ರೀ ಬೇಸಿಕ್ಸ್ ಪ್ರಸ್ತಾವದೊಂದಿಗೆ ಭಾರತಕ್ಕೆ ಬಂದಾಗ ತಾನು ಅದನ್ನು ಪರಿಶೀಲಿಸಿದ್ದೆ. ಫೇಸ್‌ಬುಕ್ ಗೇಟ್‌ನ ಮೂಲಕ ಅಂತರ್ಜಾಲವನ್ನು ಪ್ರವೇಶಿಸಿದಾಗ ಮಾತ್ರ ಅದು ಉಚಿತವಾಗಿರುತ್ತದೆ ಎನ್ನುವುದು ತನ್ನ ಗಮನಕ್ಕೆ ಬಂದಿತ್ತು. ಭಾರತವು ಒಂದು ದ್ವಾರದಲ್ಲಿ ನಂಬಿಕೆಯಿಟ್ಟಿಲ್ಲ, ಹೀಗಾಗಿ ತಾನು ಅದಕ್ಕೆ ಅನುಮತಿಯನ್ನು ನಿರಾಕರಿಸಿದ್ದೆ ಎಂದು ಹೇಳಿದರು.

ನೆಟ್ ನ್ಯೂಟ್ರಾಲಿಟಿ ಅಥವಾ ಜಾಲ ತಟಸ್ಥತೆಯ ತನ್ನ ನಿಲುವನ್ನು ನಿರ್ಧರಿಸುವುದು ಅಮೆರಿಕಕ್ಕೆ ಬಿಟ್ಟ ವಿಷಯವಾಗಿದೆ, ಆದರೆ ನಮ್ಮ ನಿಲುವು ಆರಂಭದಿಂದಲೂ ಸ್ಪಷ್ಟವಾಗಿದೆ. ಯಾವುದೇ ತಾರತಮ್ಯವಿಲ್ಲದೆ ಅಂತಜಾಲ ಲಭ್ಯತೆಯ ಹಕ್ಕಿನೊಂದಿಗೆ ರಾಜಿ ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಅವರು ತಿಳಿಸಿದರು.

ಅಂತರ್ಜಾಲ ಸೌಲಭ್ಯವನ್ನು ಪಡೆಯುವಲ್ಲಿ ಭೇದಭಾವಪೂರ್ಣ ಬೆಲೆ ನಿಗದಿ ಕುರಿತಂತೆ ಟ್ರಾಯ್ 2016,ಫೆಬ್ರವರಿಯಲ್ಲಿ ಆದೇಶವೊಂದನ್ನು ಹೊರಡಿಸಿದ್ದು, ಇದು ಫ್ರೀ ಬೇಸಿಕ್ಸ್ ಮತ್ತು ಏರ್‌ಟೆಲ್ ಝೀರೊದಂತಹ ವೇದಿಕೆಗಳ ನಿಷೇಧಕ್ಕೆ ಕಾರಣ ವಾಗಿತ್ತು.

ಫೇಸ್‌ಬುಕ್ ತನ್ನ ಫ್ರೀ ಬೇಸಿಕ್ಸ್ ವೇದಿಕೆಯಲ್ಲಿ ಲಭ್ಯವಿದ್ದ ಕೆಲವು ಜಾಲತಾಣಗಳಿಗೆ ಉಚಿತ ಅಂತರ್ಜಾಲ ಸೌಲಭ್ಯದ ಕೊಡುಗೆಯನ್ನು ಮುಂದಿರಿಸಿತ್ತು. ಜಾಲ ತಟಸ್ಥತೆ ಕುರಿತು ಚರ್ಚೆಗಳ ನಂತರ ಆಗ ದೂರಸಂಪರ್ಕ ಸಚಿವರಾಗಿದ್ದ ಪ್ರಸಾದ್ ವಿಷಯವನ್ನು ಪರಿಶೀಲಿಸಲು ಮತ್ತು ಶಿಫಾರಸುಗಳನ್ನು ಸಲ್ಲಿಸಲು ದೂರಸಂಪರ್ಕ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸಿದ್ದರು.

ಫ್ರೀ ಬೇಸಿಕ್ಸ್‌ನಂತಹ ವೇದಿಕೆಗಳು ಅಂತರ್ಜಾಲಕ್ಕೆ ಗೇಟ್‌ಕೀಪರ್‌ನಂತೆ ಕೆಲಸ ಮಾಡಲಿವೆ ಮತ್ತು ಇದು ಅಂತರ್ಜಾಲದ ಮುಕ್ತ ಲಭ್ಯತೆಗೆ ತೊಡಕನ್ನು ಸೃಷ್ಟಿಸುತ್ತದೆ ಎಂದು ಸಮಿತಿಯು ತನ್ನ ವರದಿಯಲ್ಲಿ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News