ಆ್ಯಶಸ್ ಮೂರನೆ ಟೆಸ್ಟ್ :ನಾಯಕ ಸ್ಮಿತ್ ದ್ವಿಶತಕ

Update: 2017-12-16 18:30 GMT

ಪರ್ತ್, ಡಿ.16: ಆಸ್ಟ್ರೇಲಿಯ ಕ್ರಿಕೆಟ್ ತಂಡದ ನಾಯಕ ಸ್ಟೀವ್ ಸ್ಮಿತ್ ಅವರು ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಸರಣಿಯ ಮೂರನೇ ಟೆಸ್ಟ್‌ನಲ್ಲಿ ದ್ವಿಶತಕ ದಾಖಲಿಸಿದ್ದಾರೆ.

ಡಬ್ಲುಎಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶನಿವಾರ ಸ್ಮಿತ್ ಅವರು ದ್ವಿಶತಕ ಸಿಡಿಸಿದರು.

ಸ್ಮಿತ್ ಅವರು 301 ಎಸೆತಗಳಲ್ಲಿ 26 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ ದ್ವಿಶತಕ ಪೂರೈಸಿದರು.

ಎರಡನೇ ದಿನದಾಟದಂತ್ಯಕ್ಕೆ ಸ್ಮಿತ್ 92 ರನ್ ಮತ್ತು ಶಾನ್ ಮಾರ್ಷ್ 7 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದರು. ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ 62 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 203 ರನ್ ಗಳಿಸಿತ್ತು. ಶಾನ್ ಮಾರ್ಷ್ (28) ಅವರು ತನ್ನ ವೈಯಕ್ತಿಕ ಮೊತ್ತಕ್ಕೆ 21 ರನ್ ಸೇರಿಸಿ ಪೆವಿಲಿಯನ್ ಹಾದಿ ಹಿಡಿದರು.

ಶಾನ್ ಮಾರ್ಷ್ ನಿರ್ಗಮಿಸಿದ ಬಳಿಕ ಅವರ ಸಹೋದರ ಮಿಚೆಲ್ ಮಾರ್ಷ್ ಅವರು ಸ್ಮಿತ್‌ಗೆ ಸಾಥ್ ನೀಡಿದರು. ಇವರು ನಾಲ್ಕನೇ ವಿಕೆಟ್‌ಗೆ ಜೊತೆಯಾಟದಲ್ಲಿ 301 ರನ್ ಸೇರಿಸಿದರು. ಸ್ಮಿತ್ ಮತ್ತು ಮಾರ್ಷ್ ಬ್ಯಾಟಿಂಗ್ ನೆರವಿನಲ್ಲಿ ಆಸ್ಟ್ರೇಲಿಯ ಮೂರನೇ ದಿನದಾಟದಂತ್ಯಕ್ಕೆ ಆಸ್ಟ್ರೇಲಿಯ 152 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 549 ರನ್ ಗಳಿಸಿದೆ. ಸ್ಮಿತ್ ಔಟಾಗದೆ 229 ರನ್ ಮತ್ತು ಮಿಚೆಲ್ ಮಾರ್ಷ್ ಔಟಾಗದೆ 181 ರನ್ ಗಳಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.

   ಸ್ಮಿತ್ ಶನಿವಾರ ಮಾರ್ಷ್ ಜೊತೆ ಬ್ಯಾಟಿಂಗ್ ಮುಂದುವರಿಸಿ 22ನೇ ಟೆಸ್ಟ್ ಶತಕ ಪೂರ್ಣಗೊಳಿಸಿದರು. 59ನೇ ಟೆಸ್ಟ್‌ನ 108ನೇ ಇನಿಂಗ್ಸ್‌ನಲ್ಲಿ ಸ್ಮಿತ್ ಶತಕ ಗಳಿಸಿದರು. 138 ಎಸೆತಗಳಲ್ಲಿ ಸ್ಮಿತ್ ಅವರು 16 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ ಅವರು ಶತಕ ಪೂರ್ಣಗೊಳಿಸಿದರು. ಮಿಚೆಲ್ ಮಾರ್ಷ್ ಇವರ ಜೊತೆ ಶತಕ ಪೂರೈಸಿದರು. ಮಾರ್ಷ್ 22ನೇ ಟೆಸ್ಟ್‌ನ 32ನೇ ಇನಿಂಗ್ಸ್‌ನಲ್ಲಿ ಮೊದಲ ಶತಕ ಪೂರ್ಣಗೊಳಿಸಿದರು. ಅವರು 130 ಎಸೆತಗಳಲ್ಲಿ 17 ಬೌಂಡರಿಗಳ ಸಹಾಯದಿಂದ ಶತಕ ತಲುಪಿದರು.

  ಚೊಚ್ಚಲ ಶತಕ ದಾಖಲಿಸಿರುವ ಮಾರ್ಷ್ ಅವರು ಇದೀಗ ದ್ವಿಶತಕದ ಹಾದಿಯಲ್ಲಿದ್ದಾರೆ. ಮಾರ್ಷ್ 234 ಎಸೆತಗಳಲ್ಲಿ 29 ಬೌಂಡರಿಗಳ ಸಹಾಯದಿಂದ 181 ರನ್ ಗಳಿಸಿದ್ದಾರೆ. ಸ್ಮಿತ್ 390 ಎಸೆತಗಳಲ್ಲಿ 28 ಬೌಂಡರಿ ಮತ್ತು 1ಸಿಕ್ಸರ್ ನೆರವಿನಲ್ಲಿ ಔಟಾಗದೆ 229 ರನ್ ಮಾಡಿದ್ದಾರೆ. ಸ್ಮಿತ್ ಪ್ರಸ್ತುತ ವರ್ಷ ಟೆಸ್ಟ್‌ನಲ್ಲಿ 1000 ರನ್ ಪೂರ್ಣಗೊಳಿಸಿದ್ದಾರೆ. ಆಸ್ಟ್ರೇಲಿಯ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದ್ದು, ಸರಣಿ ಗೆಲುವಿಗೆ ಪ್ರಯತ್ನ ಮುಂದುವರಿಸಿದೆ.

ಮಾರ್ಷ್ ಕುಟುಂಬದಿಂದ ಹ್ಯಾಟ್ರಿಕ್ ಶತಕ

ಆಸ್ಟ್ರೇಲಿಯ ತಂಡದಲ್ಲಿ ಮರಳಿ ಸ್ಥಾನ ಪಡೆದಿರುವ ಮಿಚೆೆಲ್ ಮಾರ್ಷ್ ಅವರು ಶತಕ ದಾಖಲಿಸುವ ಮೂಲಕ ಮಾರ್ಷ್ ಕುಟುಂಬದಿಂದ ಆ್ಯಶಸ್ ಸರಣಿಯಲ್ಲಿ ಹ್ಯಾಟ್ರಿಕ್ ದಾಖಲೆ ನಿರ್ಮಾಣವಾಗಿದೆ.

ಮಾರ್ಷ್ ಅವರು ತವರಿನ ನಗರದಲ್ಲಿ ಚೊಚ್ಚಲ ಶತಕ ದಾಖಲಿಸಿದ್ದಾರೆ. ದ್ವಿಶತಕ ದಾಖಲಿಸಲು ಇನ್ನು ಅವರು 19 ರನ್ ಗಳಿಸಬೇಕಾಗಿದೆ. ಮಾರ್ಷ್ ಅವರ ಶತಕ(ಔಟಾಗದೆ 181) ಮತ್ತು ನಾಯಕ ಸ್ಮಿತ್ ದ್ವಿಶತಕ(ಔಟಾಗದೆ 229) ನೆರವಿನಲ್ಲಿ ಆಸ್ಟ್ರೇಲಿಯ ದೊಡ್ಡ ಮೊತ್ತದ ಸ್ಕೋರ್ ದಾಖಲಿಸಿದ್ದು, ಇಂಗ್ಲೆಂಡ್ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯ 146 ರನ್‌ಗಳ ಮುನ್ನಡೆ ಸಾಧಿಸಿದೆ.

 ಹಿಂದೆ ಆ್ಯಡಿಲೆಡ್‌ನಲ್ಲಿ ಮಾರ್ಷ್ ಸಹೋದರ ಶಾನ್ ಮಾರ್ಷ್ ಅವರು ಆ್ಯಶಸ್‌ನಲ್ಲಿ ಮೊದಲ ಶತಕ (ಔಟಾಗದೆ 126) ದಾಖಲಿಸಿದ್ದರು. ಮಾರ್ಷ್ ಸಹೋದರರ ತಂದೆ ಜೆಪ್ ಮಾರ್ಷ್ 1989ರಲ್ಲಿ ಆ್ಯಲನ್ ಬಾರ್ಡರ್ ತಂಡದಲ್ಲಿ ನ್ಯಾಟಿಂಗ್‌ಹ್ಯಾಮ್ ಟೆಸ್ಟ್‌ನಲ್ಲಿ 138 ರನ್ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News