×
Ad

ವಿಜಯ್ ಹಝಾರೆ ಟ್ರೋಫಿ ಟೂರ್ನಿ| ಮುಂಬೈ ಪರ ಸೂರ್ಯಕುಮಾರ್, ಶಿವಂ ದುಬೆ ಆಡುವ ಸಾಧ್ಯತೆ

Update: 2025-12-22 23:17 IST

 ಸೂರ್ಯಕುಮಾರ್, ಶಿವಂ ದುಬೆ | Photo Credit : PTI 

ಮುಂಬೈ, ಡಿ.22: ಭಾರತದ ಟಿ-20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್‌ ಯಾದವ್ ಹಾಗೂ ಆಲ್‌ರೌಂಡರ್ ಶಿವಂ ದುಬೆ ಜನವರಿಯಲ್ಲಿ ಮುಂಬೈ ತಂಡದ ಪರ ಎರಡು ವಿಜಯ್ ಹಝಾರೆ ಟ್ರೋಫಿ(ವಿಎಚ್‌ಟಿ) ಪಂದ್ಯಗಳನ್ನು ಆಡುವ ಸಾಧ್ಯತೆ ಇದೆ.

ಇತ್ತೀಚೆಗೆ ಕೊನೆಗೊಂಡಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಯಲ್ಲಿ ಭಾಗವಹಿಸಿದ್ದ ಭಾರತದ ಎಲ್ಲಾ ಆಟಗಾರರು ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಎರಡು ಪಂದ್ಯಗಳನ್ನು ಆಡಲೇಬೇಕು ಎಂದು ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಸೂಚಿಸಿದ್ದಾರೆ. ಜನವರಿ 6 ಹಾಗೂ 8ರಂದು ನಡೆಯಲಿರುವ ವಿಎಚ್‌ಟಿ ಟೂರ್ನಿಯಲ್ಲಿ ಎರಡು ಪಂದ್ಯಗಳನ್ನು ಸೂರ್ಯಕುಮಾರ್ ಹಾಗೂ ಶಿವಂ ದುಬೆ ಆಡಲಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಟೀಮ್ ಇಂಡಿಯಾದ ಮುಂದಿನ ಟಿ20 ಸರಣಿಯು ಜನವರಿ 21ರಂದು ಸ್ವದೇಶದಲ್ಲಿ ನ್ಯೂಝಿಲ್ಯಾಂಡ್ ತಂಡದ ವಿರುದ್ಧ ಆರಂಭವಾಗಲಿದೆ.

ವಿಎಚ್‌ಟಿಯ ಮೊದಲೆರಡು ಪಂದ್ಯಗಳನ್ನು ಆಡಲಿರುವ ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ಮುಂಬೈ ತಂಡದ ನಾಯಕ ಶಾರ್ದುಲ್ ಠಾಕೂರ್ ಜೊತೆಗೆ ಸೋಮವಾರ ರಾತ್ರಿ ಜೈಪುರ ತಲುಪಿದ್ದಾರೆ. ಈ ಇಬ್ಬರು ಮಂಗಳವಾರ ಮುಂಬೈ ತಂಡಕ್ಕಾಗಿ ಅಭ್ಯಾಸ ನಡೆಸಲಿದ್ದಾರೆ.

ಮುಂಬೈ ತಂಡವು ಡಿಸೆಂಬರ್ 24ರಿಂದ ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ತನ್ನ ಲೀಗ್ ಹಂತದ ಪಂದ್ಯಗಳನ್ನು ಆಡಲಿದೆ. ಬುಧವಾರ ಸಿಕ್ಕಿಂ ತಂಡದ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ.

ಪುಣೆಯಲ್ಲಿ ನಡೆದಿದ್ದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಪಂದ್ಯದ ವೇಳೆ ತೀವ್ರ ಹೊಟ್ಟೆ ನೋವಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ದೇಶೀಯ ಏಕದಿನ ಟೂರ್ನಮೆಂಟ್‌ನಲ್ಲಿ ಮುಂಬೈ ಪರ ಆಡಲಿದ್ದಾರೆ.

‘‘ಯಶಸ್ವಿ ಜೈಸ್ವಾಲ್ ಸಂಪೂರ್ಣ ಚೇತರಿಸಿಕೊಂಡಿದ್ದು, ವಿಎಚ್‌ಟಿಯ ಯಾವುದೇ ಹಂತದಲ್ಲಿ ಆಡುವುದು ನಿಶ್ಚಿತ’’ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News