ದಿಲ್ಲಿ ದರ್ಬಾರ್

Update: 2017-12-16 18:47 GMT

ರಾಹುಲ್‌ಗೆ ಶಾ ಮೆಚ್ಚುಗೆ
ಚುನಾವಣೆಯಲ್ಲಿ ಜಯಗಳಿಸಲು ಅಮಿತ್‌ಶಾ ಯಾವುದೇ ಮಟ್ಟದವರೆಗೂ ತಲುಪಬಲ್ಲರು. ನಿಯಮಗಳನ್ನು ಅವರು ಸಡಿಲಿಸಬಲ್ಲರು. ವಿಭಿನ್ನವಾಗಿ ಯೋಚಿಸ ಬಲ್ಲರು ಹಾಗೂ ತನ್ನದೇ ಪಕ್ಷವನ್ನು ಕೂಡಾ ತಬ್ಬಿಬ್ಬುಗೊಳಿಸುವಂತಹ ನಿರ್ಧಾರಗಳನ್ನು ಕೈಗೊಳ್ಳಬಲ್ಲರು. ಗುಜರಾತ್ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಲು ಅಮಿತ್ ಶಾ, ಇವೆಲ್ಲವನ್ನೂ ಪ್ರಯೋಗಿಸಿದ್ದಾರೆ ಹಾಗೂ ಅವುಗಳನ್ನು ಮೀರಿದ ಪ್ರಯತ್ನಗಳನ್ನು ನಡೆಸಿದ್ದಾರೆ. ಬಿಜೆಪಿಯ ಭದ್ರಕೋಟೆಗಳ ಹೃದಯಭಾಗವೆನಿಸಿರುವ ಗುಜರಾತ್‌ನಲ್ಲಿ ತನ್ನ ಪಕ್ಷಕ್ಕೆ ಬಿಸಿಮುಟ್ಟುವಂತೆ ಮಾಡಿರುವ ರಾಹುಲ್ ಗಾಂಧಿಯವರನ್ನು ಅವರು ಮೆಚ್ಚಿಕೊಂಡಿದ್ದಾರಂತೆ.

ಚುನಾವಣೆಗಳಲ್ಲಿ ರಾಹುಲ್ ಕಾರ್ಯತಂತ್ರಗಳನ್ನು ತಾನು ಮೆಚ್ಚಿಕೊಂಡಿರುವುದಾಗಿ ಅಮಿತ್‌ಶಾ ಪತ್ರಕರ್ತರ ತಂಡವೊಂದರ ಮುಂದೆ ‘ಆಫ್ ದಿ ರೆಕಾರ್ಡ್’ ಆಗಿ ಹೇಳಿಕೊಂಡಿದ್ದರು. ಆದಾಗ್ಯೂ, ರಾಹುಲ್ ಯಾವುದೇ ರೀತಿಯಲ್ಲಿ ನರೇಂದ್ರ ಮೋದಿಗೆ ಬೆದರಿಕೆಯಾಗಬಹುದೆಂದು ಶಾ ಈಗಲೂ ಭಾವಿಸಿಲ್ಲವಂತೆ. ಆದರೆ, ಈ ಚುನಾವಣೆಯನ್ನು ಬಿಜೆಪಿ ಗೆಲ್ಲುವುದು ಸ್ವಲ್ಪ ಮಟ್ಟಿಗೆ ಕಷ್ಟಕರವಾಗುವಂತೆ ರಾಹುಲ್ ಮಾಡಿದ್ದಾರೆಂಬುದನ್ನು ಅವರು ಒಪ್ಪಿಕೊಳ್ಳುತ್ತಾರೆ. ತನ್ನಿಂದ ಬಿಜೆಪಿಗೆ ಹೆಚ್ಚಾಗಿ ಅನುಕೂಲವೇ ಆಗುತ್ತಿದೆಯೆಂದು ಕೆಲವರು ಅಂದುಕೊಳ್ಳುತ್ತಿರುವ ಈ ಸಮಯದಲ್ಲಿ ರಾಹುಲ್ ಗಾಂಧಿಯವರ ಮಟ್ಟಿಗೆ ಇದೊಂದು ಶುಭಸುದ್ದಿಯೇ ಸರಿ.


ಮಣಿಯ ತಲೆನೋವು
ಕಾಂಗ್ರೆಸ್‌ನಿಂದ ಮಣಿಶಂಕರ್ ಅಯ್ಯರ್ ಅಮಾನತುಗೊಳ್ಳುವ ತನಕ ಅವರೊಬ್ಬ ಅತ್ಯುನ್ನತ ಆತ್ಮವಿಶ್ವಾಸದ ಪ್ರತೀಕವೆನಿಸಿದ್ದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಅವರ ಪ್ರಥಮ ಹೆಸರಿನಿಂದ (‘ಸೋನಿಯಾ’) ಕರೆಯಬಹುದಾದ ಕೆಲವೇ ಕೆಲವು ಮಂದಿ ಆಪ್ತರಲ್ಲಿ ತಾನೂ ಒಬ್ಬ ಎಂದು ಅವರು ತನ್ನ ಗೆಳೆಯರೊಂದಿಗೆ ಹೇಳಿಕೊಳ್ಳುತ್ತಿದ್ದರು. ಡೆಹ್ರಾಡೂನ್‌ನ ಡೂನ್ ಸ್ಕೂಲ್ ಹಾಗೂ ಕೆಂಬ್ರಿಜ್ ವಿಶ್ವವಿದ್ಯಾನಿಲಯದ ಟ್ರಿನಿಟಿ ಹಾಲ್ ಕಾಲೇಜ್‌ನಲ್ಲಿ ರಾಜೀವ್ ಗಾಂಧಿಯವರ ಸೀನಿಯರ್ ಆಗಿದ್ದ ಅಯ್ಯರ್, ತಾನು ಟ್ರಿನಿಟಿ ಕಾಲೇಜ್‌ನ ಚರ್ಚಾಕೂಟದ ಕಾರ್ಯದರ್ಶಿ ಸ್ಥಾನಕ್ಕೆ ಚುನಾವಣೆಗೆ ನಿಂತಿದ್ದಾಗ, ರಾಜೀವ್ ತನ್ನ ಪರವಾಗಿ ಮತಹಾಕಿದ್ದನ್ನು ನೆನಪಿಸಿಕೊಳ್ಳುತ್ತಿರುತ್ತಾರೆ.

ಕಾಂಗ್ರೆಸ್‌ನಿಂದ ತನ್ನನ್ನು ಅಮಾನತುಗೊಳಿಸುವ ರಾಹುಲ್ ಗಾಂಧಿಯ ನಿರ್ಧಾರವು ಅವರಿಗೆ ಒಂದಿಷ್ಟು ಆಘಾತವುಂಟು ಮಾಡಿದೆ. ಆದರೆ ಪಕ್ಷದ ನಿಷ್ಠಾವಂತ ಯೋಧನಾಗಿರುವ ಅವರು ಗುಜರಾತ್ ಚುನಾವಣೆ ಕೊನೆಗೊಳ್ಳುವುದನ್ನೇ ಕಾಯುತ್ತಿದ್ದಾರೆ. ಒಂದು ವೇಳೆ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ನಿರ್ವಹಣೆಯನ್ನು ಪ್ರದರ್ಶಿಸಿದರೆ, ಪಕ್ಷದಲ್ಲಿ ಅವರ ಮಾತಿಗೆ ಮತ್ತೊಮ್ಮೆ ಬೆಲೆ ಬರಬಹುದಾಗಿದೆ. ಆದರೆ, ಪಕ್ಷವು ಭಾರೀ ಸೋಲು ಕಂಡರೆ ಹಾಗೂ ಪ್ರಧಾನಿ ವಿರುದ್ಧ ಅವರ ‘ನೀಚ್’ ಟೀಕೆಯೇ, ಅದಕ್ಕೆ ಕಾರಣವೆಂದು ಯಾರಾದರೂ ಹೇಳಿದರೆ, ಪಕ್ಷದವರಿಗೆ ದೊಡ್ಡ ಸಂದೇಶವೊಂದನ್ನು ನೀಡುವುಕ್ಕಾಗಿ ಅವರನ್ನು ಪಕ್ಷದಿಂದ ಉಚ್ಚಾಟಿಸಬಹುದಾಗಿದೆ.


ಶತ್ರುವಿನ ನಡೆ ಎತ್ತ?
ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ, ತನ್ನ ಪಕ್ಷದ ಜೊತೆ ವೈಮನಸ್ಸು ಕಟ್ಟಿಕೊಂಡಿದ್ದಾರೆ. ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಒಂದು ವೇಳೆ ಬಿಜೆಪಿ ದಯನೀಯ ಸೋಲು ಕಂಡಲ್ಲಿ, ‘ಏಕವ್ಯಕ್ತಿ ಪ್ರದರ್ಶನ, ಇಬ್ಬರು ಸೈನಿಕರ ಸೇನೆ’ ಎಂದು ತಾನು ಟೀಕಿಸಿರುವ ಪಕ್ಷದ ನಾಯಕತ್ವವನ್ನು ಅದಕ್ಕೆ ಹೊಣೆಯಾಗಿಸಬೇಕು ಎಂದವರು ಇತ್ತೀಚೆಗೆ ಹೇಳಿಕೊಂಡಿದ್ದರು. ಅವರು ಹೇಳಿರುವ ಏಕವ್ಯಕ್ತಿಯೆಂದರೆ ಮೋದಿ, ಇಬ್ಬರು ಯೋಧರ ಸೇನೆ ಎಂದರೆ ಶಾ ಹಾಗೂ ಅರುಣ್ ಜೇಟ್ಲಿ ಎಂಬುದು ಹೆಚ್ಚಿನವರಿಗೆ ತಿಳಿದಿದೆ.

ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿರಲೂ ಬಹುದು. ಆದರೆ ಸಿನ್ಹಾ ಅವರು ಪಕ್ಷದ ನಾಯಕತ್ವದ ಮೇಲೆ ಯಾಕೆ ನಿರಂತರವಾಗಿ ವಾಗ್ಬಾಣಗಳನ್ನು ಎಸೆಯುತ್ತಿದ್ದಾರೆಂಬುದು ಇನ್ನೂ ನಿಗೂಢವಾಗಿದೆ. ತಮ್ಮ ಸಮುದಾಯವನ್ನು ಪ್ರತಿನಿಧಿಸುವಂತಹ ಯಶವಂತ ಸಿನ್ಹಾ ಹಾಗೂ ಶತ್ರುಘ್ನ ಸಿನ್ಹಾರಂತಹವರನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆಯೆಂದು ಬಿಹಾರದ ಕಾಯಸ್ಥ ಜಾತಿ ಲಾಬಿ ಅಸಮಾಧಾನಗೊಂಡಿರವುದು ಬಿಜೆಪಿಗೆ ಅರಿವಾಗಿದೆ. ಆದರೆ ಕೆಲವರು ಹೇಳುವ ಪ್ರಕಾರ ಈ ಇಬ್ಬರೂ ಸಿನ್ಹಾಗಳ ವಿರುದ್ಧ ದಾಳಿ ನಡೆಸಲು ಮೋದಿ ತಕ್ಕ ಸಮಯಕ್ಕಾಗಿ ಕಾಯುತ್ತಿದ್ದಾರೆ ಹಾಗೂ ಇವೆಲ್ಲವನ್ನೂ ಗಮನಿಸುತ್ತಿದ್ದಾರೆ.


ಕಾಂಗ್ರೆಸ್‌ಗೆ ಪವಾರ್ ಸಿಗ್ನಲ್
ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ವಿರುದ್ಧ ನರೇಂದ್ರ ಮೋದಿಯವರ ನಿಂದನಾತ್ಮಕ ಹೇಳಿಕೆಗಳನ್ನು ಖಂಡಿಸಿದ್ದ ಎನ್‌ಸಿಪಿ ನಾಯಕ ಶರದ್‌ಪವಾರ್, ‘ನಿಮಗೆ ನಾಚಿಕೆಯಾಗಬೇಕು (ಶೇಮ್ ಆನ್ ಯು)’ ಎಂದು ಮೂದಲಿಸಿದ್ದರು. ನಿವೃತ್ತ ಸೇನಾ ವರಿಷ್ಠ ಹಾಗೂ ಹಲವಾರು ಮಾಜಿ ಸೇನಾಧಿಕಾರಿಗಳು ಸೇರಿದಂತೆ ಪಾಕಿಸ್ತಾನಿ ಹಾಗೂ ಭಾರತೀಯ ಸ್ನೇಹಿತರಿಗಾಗಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಭೋಜನಕೂಟದ ಬಗ್ಗೆ ಮೋದಿ ದುರುದ್ದೇಶದಿಂದ ತಪ್ಪು ಭಾವನೆ ಮೂಡಿಸುತ್ತಿದ್ದಾರೆಂದು ಪವಾರ್ ಆಪಾದಿಸಿದ್ದರು. ಪವಾರ್ ಮಹಾರಾಷ್ಟ್ರದಲ್ಲಿ ಬಿಜೆಪಿ ಜೊತೆ ಸಲಿಗೆಯಲ್ಲಿರುವ ಜೊತೆ ಜೊತೆಗೆ ತನ್ನೊಂದಿಗೆ ಮಧುರ ಬಾಂಧವ್ಯವನ್ನು ಬೆಳೆಸಲು ಯತ್ನಿಸುತ್ತಿರುವುದು ಕಾಂಗ್ರೆಸ್‌ಗೆ ಈಗ ಅರಿವಾಗಿದೆ. ಕಾಂಗ್ರೆಸ್ ಹಾಗೂ ಎನ್‌ಸಿಪಿ ಲೋಕಸಭೆ ಹಾಗೂ ಕೆಲವು ವಿಧಾನಸಭಾ ಚುನಾವಣೆಗಳಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಈಗ ಮತ್ತೆ ಒಟ್ಟಾಗಲು ಪವಾರ್ ಅವರು ರಾಹುಲ್ ಗಾಂಧಿ ಜೊತೆ ಒಡಂಬಡಿಕೆ ಮಾಡಿಕೊಳ್ಳಲೂಬಹುದು. ಕನಿಷ್ಠ ಪಕ್ಷ ಹೊಸದಿಲ್ಲಿಯಲ್ಲಿರುವ ಕಾಂಗ್ರೆಸ್ ಮುಖ್ಯಕಾರ್ಯಾಲಯದಲ್ಲಾದರೂ ಆ ನಿರೀಕ್ಷೆಯಲ್ಲಿದೆ.


ಅಂತಿಮ ರಹಸ್ಯ
ಗುಜರಾತ್‌ನಲ್ಲಿ ಮುಖ್ಯಮಂತ್ರಿಯ ಹುದ್ದೆಗೆ ಕಾಂಗ್ರೆಸ್ ಈತನಕ ಯಾವುದೇ ಅಭ್ಯರ್ಥಿಯ ಹೆಸರನ್ನು ಬಿಂಬಿಸಿಲ್ಲ. ಆದರೆ ಆ ಪಕ್ಷದ ಮೂವರು ನಾಯಕರಾದ ಭರತ್‌ಸಿನ್ಹಾ ಸೋಲಂಕಿ, ಶಕ್ತಿಸಿನ್ಹಾ ಗೋಹಿಲ್ ಹಾಗೂ ಅರ್ಜುನ್ ಮೊಧ್ವಾಡಿಯಾ ಅವರು, ಮುಖ್ಯಮಂತ್ರಿಯಾಗಲು ತಮಗೆ ಉತ್ತಮ ಅವಕಾಶಗಳಿವೆಯೆಂಬ ಭ್ರಮೆಯಲ್ಲಿ ತೇಲಾಡುತ್ತಿದ್ದರು. ಆದರೆ ಸೋನಿಯಾಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರ ಹೆಸರನ್ನೊಳಗೊಂಡ ಪೋಸ್ಟರ್‌ಗಳನ್ನು ಗುಜರಾತ್‌ನಾದ್ಯಂತ ಕಂಡ ಬಳಿಕ ಅವರು ಅಚ್ಚರಿಪಟ್ಟುಕೊಂಡಿದ್ದಾರೆ. ಸ್ವತಃ ಅಹ್ಮದ್ ಪಟೇಲ್ ಅವರೇ ಇದೊಂದು ಮೋಸದಾಟವೆಂದು ಬಣ್ಣಿಸಿದ್ದು, ಬಿಜೆಪಿಯು ತನ್ನ ವಿರುದ್ಧ ಸಂಚು ನಡೆಸಿದೆಯೆಂದು ಹೇಳಿಕೊಂಡಿದ್ದಾರೆ.

ಕಾಂಗ್ರೆಸ್ ಪಕ್ಷವು ಗುಜರಾತ್‌ನಲ್ಲಿ ‘ಮುಸ್ಲಿಂ ಮುಖ’ವೊಂದನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತರಲಿದೆಯೆಂದು ಮತದಾರರಿಗೆ ತಿಳಿಸಲು ಯತ್ನಿಸಿರುವುದೇ ಈ ಪೋಸ್ಟರ್ ಅಭಿಯಾನದ ಹಿಂದಿರುವ ದುರುದ್ದೇಶವೆಂದು ಅವರು ಭಾವಿಸಿದ್ದಾರೆ. ಅತ್ಯಂತ ಕೋಮುಧ್ರುವೀಕರಣಗೊಂಡಿರುವ ಸಮಾಜವಾಗಿರುವ ಗುಜರಾತ್‌ನಲ್ಲಿ ಒಂದು ಸಮುದಾಯದಲ್ಲಿ ಇನ್ನೊಂದು ಸಮುದಾಯದ ಬಗ್ಗೆ ಭೀತಿ ಮೂಡಿಸುವುದು ಸುಲಭವಾಗಿದೆ. ಅಹ್ಮದ್ ಪಟೇಲ್ ಆಕ್ರೋಶಗೊಂಡಿದ್ದಾರೆ. ಆದರೆ ಮೋದಿ-ಶಾ ಜೋಡಿ, ಚುನಾವಣೆಯಲ್ಲಿ ಗೆಲ್ಲಲು ಎಲ್ಲಾ ರೀತಿಯ ತಂತ್ರಗಳನ್ನು ಪ್ರಯೋಗಿಸಿದೆಯೆಂಬುದು ಕೂಡಾ ಅವರಿಗೆ ಅರಿವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News