ಇನ್ಸುಲಿನ್ ಇಂಜೆಕ್ಷನ್ ಬಗ್ಗೆ ಭಯ ಬೇಡ....ಕಾರಣಗಳಿಲ್ಲಿವೆ

Update: 2017-12-17 10:47 GMT

ಮನುಷ್ಯನಿಗೆ ಒಮ್ಮೆ ಮಧುಮೇಹ ಕಾಯಿಲೆ ಬಂದರೆ ಅದು ಆತ ಸಾಯುವವರೆಗೆ ಸಂಗಾತಿಯಾಗಿರುತ್ತದೆ. ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚಿದರೆ ಮಧುಮೇಹ ಅಮರಿಕೊಳ್ಳುತ್ತದೆ. ಇದಕ್ಕೆ ನಮ್ಮ ಶರೀರದಲ್ಲಿ ಇನ್ಸುಲಿನ್ ಉತ್ಪಾದನೆ ಕಡಿಮೆಯಾಗುವುದು ಮುಖ್ಯ ಕಾರಣವಾಗಿದೆ. ಸೂಕ್ತ ಔಷಧಿಗಳನ್ನು ತೆಗೆದುಕೊಂಡು ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಬದುಕು ಭಾರವಲ್ಲ, ಎಲ್ಲರಂತೆ ಮಾಮೂಲು ಜೀವನವನ್ನು ನಡೆಸಬಹುದು. ಔಷಧಿಗಳ ಸೇವನೆಯಿಂದ ಮಧುಮೇಹ ನಿಯಂತ್ರಣಕ್ಕೆ ಬಾರದಿದ್ದರೆ ಇನ್ಸುಲಿನ್ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ. ದಿನವೂ ಇನ್ಸುಲಿನ್ ಇಂಜೆಕ್ಷನ್‌ನಿಂದ ಪಾರಾಗುವ ಅವಕಾಶವೇ ಇರುವುದಿಲ್ಲ. ಆದರೆ ದಿನವೂ ಸೂಜಿ ಚುಚ್ಚಿಸಿಕೊಳ್ಳಬೇಕೆಂಬ ಅಳುಕು ಮಧುಮೇಹಿಗಳನ್ನು ಕಾಡುವುದು ಸಹಜವೇ ಆಗಿದೆ. ಇನ್ಸುಲಿನ್ ಚಿಕಿತ್ಸೆಯ ಬಗ್ಗೆ ಮಧುಮೇಹಿಗಳು ಸಾಮಾನ್ಯವಾಗಿ ಕೇಳುವ ಕೆಲವು ಪ್ರಶ್ನೆಗಳು ಮತ್ತು ಅವುಗಳಿಗೆ ಉತ್ತರಗಳು ಇಲ್ಲಿವೆ......

► ಇನ್ಸುಲಿನ್ ತೆಗೆದುಕೊಳ್ಳುವಂತೆ ನನ್ನ ವೈದ್ಯರೇಕೆ ಹೇಳುತ್ತಿದ್ದಾರೆ? ಇನ್ಸುಲಿನ್ ತೆಗೆದುಕೊಳ್ಳುವುದು ಅನಿವಾರ್ಯವೇ?

 ಇನ್ಸುಲಿನ್ ತೆಗೆದುಕೊಳ್ಳುವುದು ಕಡ್ಡಾಯವೇನಲ್ಲ. ಆದರೆ ನೀವು ಯಾವ ವಿಧದ ಮಧುಮೇಹದಿಂದ ಬಳಲುತ್ತಿದ್ದೀರಿ ಮತ್ತು ನಿಮ್ಮ ರಕ್ತದಲ್ಲಿ ಸಕ್ಕರೆಯ ಮಟ್ಟ ಎಷ್ಟಿದೆ ಎನ್ನುವುದರ ಆಧಾರದಲ್ಲಿ ನಿಮ್ಮ ವೈದ್ಯರು ಇನ್ಸುಲಿನ್ ತೆಗೆದುಕೊಳ್ಳುವಂತೆ ಶಿಫಾರಸು ಮಾಡಿರುತ್ತಾರೆ.

ಟೈಪ್-1 ಮಧುಮೇಹದಿಂದ ಬಳಲುತ್ತಿರುವರಿಗೆ ಇನ್ಸುಲಿನ್ ತೆಗೆದುಕೊಳ್ಳುವುದು ಏಕಮೇವ ಚಿಕಿತ್ಸೆಯಾಗಿದೆ.

ಟೈಪ್-2 ಮಧುಮೇಹಿಗಳಲ್ಲಿ ಸಮಯಕ್ಕೆ ಸರಿಯಾಗಿ ಔಷಧಿಗಳನ್ನು ಸೇವಿಸಿದರೂ ಮತ್ತು ಜೀವನ ಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಂಡರೂ ರಕ್ತದಲ್ಲಿಯ ಸಕ್ಕರೆಯ ಮಟ್ಟ ನಿಯಂತ್ರಣಕ್ಕೆ ಬಾರದಿದ್ದ ಸಂದರ್ಭಗಳಲ್ಲಿ ಇನ್ಸುಲಿನ್‌ನ್ನು ವೈದ್ಯರು ಶಿಫಾರಸು ಮಾಡುತ್ತಾರೆ.

► ಇನ್ಸುಲಿನ್‌ನ ನಿರಂತರ ಬಳಕೆಯು ಅಂಧತ್ವ, ಮೂತ್ರಪಿಂಡಗಳಿಗೆ ಹಾನಿ ಮತ್ತು ನರಗಳಿಗೆ ಹಾನಿ(ಮಧುಮೇಹಿ ಪಾದ)ಯಂತಹ ಇನ್ನಷ್ಟು ಸಮಸ್ಯೆಗಳಿಗೆ ಕಾರಣವಾಗು ತ್ತದೆಯೇ?

ಇದು ಮಧುಮೇಹ ಕುರಿತು ಅತ್ಯಂತ ಸಾಮಾನ್ಯ ಮಿಥ್ಯೆಗಳಲ್ಲೊಂದಾಗಿದೆ. ಇನ್ಸುಲಿನ್ ಚಿಕಿತ್ಸೆಯು ಈ ಯಾವುದೇ ಸಮಸ್ಯೆಗಳಿಗೆ ಕಾರಣವಾಗುವುದಿಲ್ಲ ಮತ್ತು ಅಂತಹ ಸಮಸ್ಯೆ ಯಿದ್ದರೂ ಅದನ್ನು ಉಲ್ಬಣಗೊಳಿಸುವುದಿಲ್ಲ. ಅದು ರಕ್ತದಲ್ಲಿಯ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವ ಅತ್ಯುತ್ತಮ ಔಷಧಿಯಾಗಿರುವುದರಿಂದ ವಾಸ್ತವದಲ್ಲಿ ಮಧುಮೇಹದಿಂದ ಉಂಟಾಗುವ ಸಮಸ್ಯೆಗಳನ್ನು ತಡೆಯುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ನಿಯಂತ್ರಿತ ಮಧುಮೇಹವು ಗ್ಲಾಕೋಮಾ, ಅಂಧತ್ವ, ನರಗಳ ದೌರ್ಬಲ್ಯ, ಚರ್ಮದ ಮೆಲೆ ದುಷ್ಪರಿಣಾಮ, ಅನಿಯಂತ್ರಿತ ಮೂತ್ರ ವಿಸರ್ಜನೆ, ಮೂತ್ರಪಿಂಡಗಳಿಗೆ ಹಾನಿಯಂತಹ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ.

► ನಾನು ಇನ್ಸುಲಿನ್ ಚಿಕಿತ್ಸೆ ಆರಂಭಿಸಿದರೆ ಜೀವನ ಮೊದಲಿನಂತಿರುವುದಿಲ್ಲ?

 ಹೆಚ್ಚಿನ ಪ್ರಕರಣಗಳಲ್ಲಿ ಮಧುಮೇಹವನ್ನು ನಿಯಂತ್ರಿಸುವಲ್ಲಿ ತಮ್ಮ ವೈಯಕ್ತಿಕ ವೈಫಲ್ಯದಿಂದಾಗಿಯೇ ಮಧುಮೇಹಿಗಳಿಗೆ ಇನ್ಸುಲಿನ್ ಚಿಕಿತ್ಸೆ ಅನಿವಾರ್ಯವಾಗುತ್ತದೆ. ಇನ್ಸುಲಿನ್ ಅನ್ನು ಇಂತಹ ವೈಫಲ್ಯಕ್ಕೆ ‘ದಂಡನೆ’ ಅಥವಾ ‘ಜೀವನ ಬದಲಾವಣೆಯ ಚಿಕಿತ್ಸೆ’ ಎಂದು ಪರಿಗಣಿಸಬಹುದು. ವಾಸ್ತವದಲ್ಲಿ ಇನ್ಸುಲಿನ್ ಜೊತೆ ಬದುಕು ಒಂದು ಕಷ್ಟವೇ ಅಲ್ಲ. ಅಂತಹವರು ಇತರರಂತೆ ಸಾಮಾನ್ಯ, ಸುಖದ ಬದುಕನ್ನು ಅನುಭವಿಸ ಬಹುದು. ಆಹಾರದಲ್ಲಿ ಪಥ್ಯ, ನಿಯಮಿತ ವ್ಯಾಯಾಮ ಮತ್ತು ಸಕಾಲದಲ್ಲಿ ಔಷಧಿ ಇವುಗಳಿಂದ ಯಾವುದೇ ಸಮಸ್ಯೆಯನ್ನು ದೂರವಿರಿಸಬಹುದು.

► ಇನ್ಸುಲಿನ್ ಇಂಜೆಕ್ಷನ್ ನೋವನ್ನುಂಟು ಮಾಡುತ್ತದೆಯೇ? ಚರ್ಮದಲ್ಲಿ ಕಲೆಗಳಾಗುತ್ತವೆಯೇ?

 ಇಂಜೆಕ್ಷನ್‌ಗಳು ನೋವನ್ನುಂಟುಮಾಡುವ ದಿನಗಳು ಎಂದೋ ಕಳೆದುಹೋಗಿವೆ. ಇನ್ಸುಲಿನ್ ಇಂಜೆಕ್ಷನ್‌ನಿಂದ ಆಗುವ ಅತ್ಯಲ್ಪ ನೋವಿನಿಂದ ಮಧುಮೇಹಿಗಳೇ ಅಚ್ಚರಿ ಪಟ್ಟುಕೊಂಡಿದ್ದಾರೆ. ವೈದ್ಯಕೀಯ ತಂತ್ರಜ್ಞಾನದಲ್ಲಿ ದಿನೇದಿನೇ ಸುಧಾರಣೆಗಳಾಗುತ್ತಿದ್ದು ಈಗ 6 ಎಂಎಂ ಮತ್ತು 4 ಎಂಎಂ ಗಾತ್ರದ ಸೂಕ್ಸ್ಮ ಸೂಜಿಗಳು ಲಭ್ಯವಿವೆ. ಇವು ನೋವಿನ ಅನುಭವವನ್ನೇ ನೀಡುವುದಿಲ್ಲ ಎಂದು ಹೇಳಬಹುದು. ಇನ್ಸುಲಿನ್ ಇಂಜೆಕ್ಷನ್‌ನ್ನು ಚರ್ಮದ ಕೆಳಗಿರುವ ದಪ್ಪನೆಯ ಪದರಕ್ಕೆ ಚುಚ್ಚಲಾಗುತ್ತದೆ ಮತ್ತು ಅದು ಸ್ನಾಯುಗಳಿಗೆ ಇಂಜೆಕ್ಷನ್ ನೀಡಿದಾಗಿನ ನೋವಿನಂತಿರುವುದಿಲ್ಲ. ಸಾಮಾನ್ಯವಾಗಿ ತೊಡೆ, ಹೊಟ್ಟೆಯ ಕೆಳಗೆ ಮತ್ತು ಪ್ರಷ್ಠಗಳಿಗೆ ಇನ್ಸುಲಿನ್ ಇಂಜೆಕ್ಷನ್ ನೀಡಲಾಗುತ್ತದೆ. ಒಂದೇ ಜಾಗದಲ್ಲಿ ಪದೇಪದೇ ಸೂಜಿಯನ್ನು ಚುಚ್ಚುವದು ಕಲೆಯನ್ನುಂಟು ಮಾಡಬಹುದು, ಹೀಗಾಗಿ ಈ ಜಾಗಗಳನ್ನು ಬದಲಾಯಿಸುತ್ತಿರಬೇಕು. ಇದಕ್ಕಾಗಿ ವೈದ್ಯರ ಸಲಹೆಯನ್ನು ಪಡೆದುಕೊಳ್ಳುವುದು ಒಳ್ಳೆಯದು.

► ಇನ್ಸುಲಿನ್ ಚಿಕಿತ್ಸೆಯಿಂದಾಗಿ ನಾನು ಹೈಪೊಗ್ಲೈಸಿಮಿಯಾ ಬಗ್ಗೆ ಸದಾ ಎಚ್ಚರಿಕೆ ವಹಿಸಬೇಕೇ?

ರಕ್ತದಲ್ಲಿಯ ಗ್ಲುಕೋಸ್ ಮಟ್ಟವು ದಿಢೀರ್‌ನೆ 70 ಎಂಜಿ/ಡಿಎಲ್ ಅಥವಾ ಅದಕ್ಕೂ ಕಡಿಮೆ ಮಟ್ಟಕ್ಕೆ ಕುಸಿದರೆ ಅಂತಹ ಸ್ಥಿತಿಯನ್ನು ಹೈಪೊಗ್ಲೈಸಿಮಿಯಾ ಎಂದು ಕರೆಯಲಾಗುತ್ತದೆ. ಇದು ತಲೆ ಸುತ್ತುವಿಕೆ, ನಡುಕ ಮತ್ತು ಮಸುಕು ದೃಷ್ಟಿಯಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೈಪೊಗ್ಲೈಸಿಮಿಯಾ ಬಾಯಿ ಮೂಲಕ ಔಷಧಿ ಸೇವನೆಯಿಂದಲೂ ಉಂಟಾಗಬಹುದು, ಆದರೆ ಇನ್ಸುಲಿನ್ ಚಿಕಿತ್ಸೆಯ ಪ್ರಾರಂಭದಲ್ಲಿ ರಕ್ತದಲ್ಲಿ ಸಕ್ಕರೆಯ ಮಟ್ಟ ಕುಸಿಯುವ ಸಾಧ್ಯತೆಯಿರುತ್ತದೆ. ಇನ್ಸುಲಿನ್ ಅನ್ನು ಸರಿಯಾದ ರೀತಿಯಲ್ಲಿ ತೆಗೆದುಕೊಂಡರೆ ಮತ್ತು ರಕ್ತದಲ್ಲಿ ಸಕ್ಕರೆಯ ಮಟ್ಟದ ಮೇಲೆ ನಿಯಮಿತ ನಿಗಾ ಇರಿಸಿದರೆ ಇದನ್ನು ಸುಲಭವಾಗಿ ನಿರ್ವಹಿಸಹುದು.

 ಹೈಪೊಗೈಸಿಮಿಯಾದ ಅಲ್ಪ ಲಕ್ಷಣ ಕಂಡು ಬಂದರೂ ಗ್ಲುಕೊಮೀಟರ್ ಮೂಲಕ ಸಕ್ಕರೆಯ ಮಟ್ಟವನ್ನು ಪರೀಕ್ಷಿಸಿಕೊಳ್ಳಬೆಕು. ಇನ್ಸುಲಿನ್ ತೆಗೆದುಕೊಳ್ಳುವವರು ಕ್ಯಾಂಡಿ, ಚಾಕಲೇಟ್, ಜೇನು ಅಥವಾ ಹಣ್ಣಿನ ರಸದಂತಹ ಕೆಲವು ಸಿಹಿವಸ್ತುಗಳನ್ನು ಸದಾ ಜೊತೆಯಲ್ಲಿ ಇಟ್ಟುಕೊಂಡಿರಬೇಕು. ಇವು ಹೈಪೊಗ್ಲೈಸಿಮಿಯಾವನ್ನು ಎದುರಿಸಲು ನೆರವಾಗುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News