ಅಯ್ಯರ್ ಮಾತ್ರ ಅಪರಾಧಿಯೇ?

Update: 2017-12-17 18:32 GMT

ಮಾನ್ಯರೇ,

ಪ್ರಧಾನಿ ಮೋದಿಯವರಿಗೆ ‘ನೀಚ’ ಎಂದು ಹೇಳಿದ ಅಯ್ಯರ್ ವಿರುದ್ಧ ಕಾಂಗ್ರೆಸ್ ತಕ್ಷಣ ಕ್ರಮ ಕೈಗೊಂಡು ಅವರನ್ನು ಪಕ್ಷದ ಸದಸ್ಯತ್ವದಿಂದಲೇ ಅಮಾನತು ಮಾಡಿದೆ. ಆದರೆ ಸಿದ್ದರಾಮಯ್ಯನವರ ಬಗ್ಗೆ ಅನಂತಕುಮಾರ್ ಹೆಗಡೆ ಬಳಸಿದ ಭಾಷೆ ಅದಕ್ಕಿಂತ ಹೆಚ್ಚು ಹೀನಾಯವಾಗಿತ್ತು. ಕರ್ನಾಟಕದಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ‘ಪಾಪದ ಪಿಂಡ’ ಎಂದು ಕರೆದು ಅವರ ತಾಯಿಯ ಶೀಲವನ್ನೇ ಅವಮಾನಿಸಿದರೂ ಬಿಜೆಪಿಯವರು ಹೆಗಡೆ ವಿರುದ್ಧ ಯಾವುದೇ ಶಿಸ್ತು ಕ್ರಮ ತೆಗೆದುಕೊಂಡಿಲ್ಲ ಯಾಕೆ? ಮಣಿಶಂಕರ್ ಅಯ್ಯರ್ ‘ನೀಚ’ ಶಬ್ದ ಉಪಯೋಗಿಸಿದ್ದನ್ನೇ ಮೋದಿಯವರು ತಿರುಚಿ ತನ್ನ ಇಡೀ ಜಾತಿಗೇ ಅಯ್ಯರ್ ಅವಮಾನಿಸಿದ್ದಾರೆ ಎಂದು ಹುಯಿಲೆಬ್ಬಿಸಿ ಗುಜರಾತಿ ಮತದಾರರ ಸಹಾನುಭೂತಿ ಗಳಿಸಲು ಭಾರೀ ಪ್ರಯತ್ನ ಮಾಡಿದರು. ಅಯ್ಯರ್ ‘ನೀಚ’ ಎಂದು ಹೇಳಿದ್ದು ವೈಯಕ್ತಿಕವಾಗಿತ್ತೇ ಹೊರತು ಅದು ಮೋದಿ ಯವರ ಇಡೀ ಜಾತಿಗೆ ಸಂಬಂಧಿಸಿದ್ದು ಅಲ್ಲ. ಮೋದಿ ಮಾತ್ರ ತನ್ನ ಇಡೀ ಜಾತಿಗೇ ಅಯ್ಯರ್ ಬೈದರು ಎಂದು ಹೇಳಿದ್ದು ನಿಜಕ್ಕೂ ಅವರ ಬಾಲಿಶ ಬುದ್ಧಿ ತೋರಿಸುತ್ತದೆ ಅಷ್ಟೇ. ಇದರಿಂದ ನಿಜವಾಗಿ ಯಾರು ‘ಪಪ್ಪು’ ಎಂಬುವುದು ಸ್ಪಷ್ಟವಾಗುತ್ತದೆ. ಕರ್ನಾಟಕದ ಕೆಲವು ಮಂತ್ರಿಗಳು ಗುಜರಾತ್‌ಗೆ ಹೋಗಿ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿ ಬಂದರು. ಆದರೆ ಈ ಕರ್ನಾಟಕದ ಕಾಂಗ್ರೆಸ್ ಸಚಿವರು ಗುಜರಾತ್‌ನಲ್ಲಿಯ ತಮ್ಮ ಪ್ರಚಾರ ಭಾಷಣದಲ್ಲಿ ಸಿದ್ದರಾಮಯ್ಯನವರಿಗೆ ಬಿಜೆಪಿಯ ಅನಂತಕುಮಾರ್ ಹೆಗಡೆ ಮಾಡಿದ ಘೋರ ಅವಮಾನದ ಬಗ್ಗೆ ಅಲ್ಲಿಯ ಮತದಾರರಿಗೆ ಹೇಳಿ ಕಾಂಗ್ರೆಸ್‌ನಂತೆ ಬಿಜೆಪಿಯವರೂ ತಮ್ಮ ಪಕ್ಷದ ಮಂತ್ರಿಯ ಮೇಲೆ ಅವರ ಕೊಳಕು ಭಾಷೆಗಾಗಿ ಶಿಸ್ತು ಕ್ರಮ ಯಾಕೆ ಕೈಗೊಂಡಿಲ್ಲ ಎಂದು ಕೇಳಬೇಕಿತ್ತು. ಇದರಿಂದ ಗುಜರಾತ್‌ನ ಮತದಾರರಿಗೆ ಬಿಜೆಪಿಯಲ್ಲಿ ಎಂತೆಂಥ ಕೊಳಕು ಮನಸ್ಥಿತಿಯ ಕೇಂದ್ರ ಸಚಿವರಿದ್ದಾರೆ ಎಂದು ಗೊತ್ತಾಗುತ್ತಿತ್ತು. ಅಯ್ಯರ್ ‘ನೀಚ’ ಎಂದು ಹೇಳಿದ್ದು ಮೋದಿಗೆ ಜಾತಿ ನಿಂದನೆ ಆಗಲಿಕ್ಕೆ ಸಾಧ್ಯವೇ ಇಲ್ಲ. ಯಾಕೆಂದರೆ ಮೋದಿಯವರು ಬನಿಯಾ (ವೈಶ್ಯ) ಜಾತಿಯಲ್ಲಿಯೇ ತುಪ್ಪ ಮಾರುವ ಕುಲಕಸುಬು ಮಾಡುವ ‘‘ಮೋದ ಗಾಂಚಿ’’ ಎಂಬ ಉಪ ಜಾತಿಗೆ ಸೇರಿದವರು. ಇದು ನಿಜವಾಗಿ ಮೇಲ್ಜಾತಿ. ಆದರೂ 2002ರಲ್ಲಿ ಮೋದಿ ಮುಖ್ಯಮಂತ್ರಿ ಆದಾಗ ಕೇವಲ ತನ್ನ ಉಪಜಾತಿಯನ್ನು ಮಾತ್ರ ಒಬಿಸಿ ವರ್ಗದಡಿ ತಂದರು. ಆದರೆ ಇಂದಿಗೂ ಗುಜರಾತ್‌ನಲ್ಲಿ ಮೋದಗಾಂಚಿ ಎಂಬುದು ಮೇಲ್ಜಾತಿ ಎಂದೇ ಪರಿಗಣಿತವಾಗಿದೆ ಹಾಗೂ ಬನಿಯಾ ಮತ್ತು ಮೋಧಗಾಂಚಿಗಳಲ್ಲಿ ಮದುವೆ ಸಂಬಂಧ ಅಧಿಕೃತವಾಗೇ ಆಗುತ್ತದೆ. ಗುಜರಾತ್‌ನಲ್ಲಿ ಎಣ್ಣೆ ತಯಾರಿಸುವ ನೈಜ ಗಾಣಿಗ ಜಾತಿಯವರಿಗೆ ತೇಲಿಗಾಂಚಿ ಎನ್ನುತ್ತಾರೆ. ವಾಸ್ತವವಾಗಿ ಹಿಂದುಳಿದ ತೇಲಿಗಾಂಚಿ ಮತ್ತು ಮುಂದುವರಿದ ಮೋದಗಾಂಚಿ ನಡುವೆ ಮದುವೆ ಸಂಬಂಧವೂ ನಿಷಿದ್ಧ್ದ. ಆದರೂ ಮೋದಿ ತನ್ನದು ಕೆಳ ಜಾತಿ ಆಗಿದ್ದರಿಂದ ಬ್ರಾಹ್ಮಣ ಅಯ್ಯರ್ ತನ್ನ ಜಾತಿಗೆ ಅವಮಾನ ಮಾಡಿದರು ಎಂದು ಹುಯಿಲೆಬ್ಬಿಸಿ ಗುಜರಾತಿ ಮತದಾರರ ಸಹಾನುಭೂತಿ ಗಳಿಸುವಲ್ಲಿ ಯಶಸ್ವಿಯಾದರು. ಕೇವಲ ಕರ್ನಾಟಕದ ಕಾಂಗ್ರೆಸ್‌ನವರ ನಿಷ್ಕ್ರಿಯತೆಯಿಂದಾಗಿ ಇದು ಮೋದಿಗೆ ಸಾಧ್ಯವಾಗಿದ್ದು.

Writer - ಆರ್.ಬಿ. ಶೇಣವ, ಮಂಗಳೂರು

contributor

Editor - ಆರ್.ಬಿ. ಶೇಣವ, ಮಂಗಳೂರು

contributor

Similar News