ಇಂಗ್ಲೆಂಡ್ ವಿರುದ್ದ ಭರ್ಜರಿ ಜಯ: ಆಸ್ಟ್ರೇಲಿಯಕ್ಕೆ ಆ್ಯಶಸ್ ಸರಣಿ

Update: 2017-12-18 08:49 GMT

ಪರ್ತ್, ಡಿ.18: ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಇನಿಂಗ್ಸ್ ಹಾಗೂ 41 ರನ್‌ಗಳ ಅಂತರದಿಂದ ಮಣಿಸಿರುವ ಆಸ್ಟ್ರೇಲಿಯ ತಂಡ ಇನ್ನು ಎರಡು ಪಂದ್ಯಗಳು ಬಾಕಿ ಇರುವಾಗಲೇ ಆ್ಯಶಸ್ ಟೆಸ್ಟ್ ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡಿದೆ.

ಐದನೇ ದಿನದಾಟವಾದ ಸೋಮವಾರ ಟೀ ವಿರಾಮಕ್ಕೆ ಮೊದಲೇ ಆಸೀಸ್ ವೇಗದ ಬೌಲರ್ ಜೋಶ್ ಹೇಝಲ್‌ವುಡ್ ಐದು ವಿಕೆಟ್ ಗೊಂಚಲು ಪಡೆಯುವ ಮೂಲಕ ಇಂಗ್ಲೆಂಡ್ ತಂಡವನ್ನು 218 ರನ್‌ಗೆ ಆಲೌಟ್ ಮಾಡಿದರು. ನಾಲ್ಕು ವರ್ಷಗಳ ಹಿಂದೆ ಅಲಿಸ್ಟರ್ ಕುಕ್ ನೇತೃತ್ವದ ಇಂಗ್ಲೆಂಡ್ ವಾಕಾ ಸ್ಟೇಡಿಯಂನಲ್ಲೇ 3-0 ಅಂತರದಿಂದ ಸರಣಿ ಸೋತಿತ್ತು.

ಒದ್ದೆ ಪಿಚ್‌ನಿಂದ ಇಂದು ಪಂದ್ಯ ಮೂರು ಗಂಟೆ ವಿಳಂಬವಾಗಿ ಆರಂಭವಾಯಿತು. 4 ವಿಕೆಟ್‌ಗಳ ನಷ್ಟಕ್ಕೆ 132 ರನ್‌ನಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ ಕೊನೆಯ 6 ವಿಕೆಟ್‌ಗಳನ್ನು 85 ರನ್ ಗಳಿಸುವಷ್ಟರಲ್ಲಿ ಕಳೆದುಕೊಂಡಿತು. ಜಾನಿ ಬೈರ್‌ಸ್ಟೊವ್ ನಿನ್ನೆಯ ಸ್ಕೋರ್‌ಗೆ ಒಂದೂ ರನ್ ಗಳಿಸದೇ ಔಟಾದರು. ಮೊದಲ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ಡೇವಿಡ್ ಮಲಾನ್ ನಾಲ್ಕನೇ ಅರ್ಧಶತಕ ಪೂರೈಸಿದರು. ಆದರೆ, 54 ರನ್‌ಗೆ ಹೇಝಲ್‌ವುಡ್‌ಗೆ ವಿಕೆಟ್ ಒಪ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News