ಇವಿಎಂನಿಂದಾಗಿ ಬಿಜೆಪಿಗೆ ಜಯ: ಕಾಂಗ್ರೆಸ್ ವರಿಷ್ಠ ಸಂಜಯ್ ನಿರುಪಮ್ ಆರೋಪ
ಹೊಸದಿಲ್ಲಿ, ಡಿ. 18: ಗುಜರಾತ್‌ನಲ್ಲಿ ಬಿಜೆಪಿ ಜನತೆಯ ಮತದಿಂದ ಜಯ ಗಳಿಸಿಲ್ಲ. ಬದಲಾಗಿ ವಿದ್ಯುನ್ಮಾನ ಮತದಾನ ಯಂತ್ರ (ಇವಿಎಂ)ದ ಕಾರಣದಿಂದ ಜಯ ಗಳಿಸಿದೆ ಎಂದು ಕಾಂಗ್ರೆಸ್ ವರಿಷ್ಠ ಸಂಜಯ್ ನಿರುಪಮ್ ಸೋಮವಾರ ಹೇಳಿದ್ದಾರೆ. ವಿದ್ಯುನ್ಮಾನ ಮತಯಂತ್ರ ಭಾರತದ ಪ್ರಜಾಪ್ರಭುತ್ವಕ್ಕೆ ಅತಿ ದೊಡ್ಡ ಬೆದರಿಕೆ ಎಂದು ಅವರು ಹೇಳಿದ್ದಾರೆ.
ಗುಜರಾತ್ ಸಂಪೂರ್ಣ ಬಿಜೆಪಿಯ ವಿರುದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣೆ ರ್ಯಾಲಿ ಸಂದರ್ಭ ಖುರ್ಚಿಗಳೆಲ್ಲ ಖಾಲಿ ಇದ್ದುವು. ಬಿಜೆಪಿ ಜಯ ಗಳಿಸಿರುವುದು ಗುಜರಾತ್‌ನ ಜನರಿಂದಾಗಿ ಅಲ್ಲ. ಬದಲಾಗಿ ವಿದ್ಯುನ್ಮಾನ ಮತಯಂತ್ರದಿಂದ ಎಂದು ಅವರು ಹೇಳಿದ್ದಾರೆ. ತಾನು ಆರಂಭದಿಂದಲೇ ಈ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದೆ. ಭಾರತಕ್ಕೆ ಎದುರಾದ ಈ ಅತೀ ದೊಡ್ಡ ಬೆದರಿಕೆ ಬಗ್ಗೆ ಎಲ್ಲರೂ ಎಚ್ಚರಗೊಳ್ಳಬೇಕು ಎಂದು ಅವರು ಟ್ವೀಟ್ ಮಾಡಿದ್ದಾರೆ.
ತಾನು ಅಕ್ಟೋಬರ್ 24ರಂದು ಟ್ವೀಟ್ ಮಾಡಿರುವುದನ್ನು ನೆನಪಿಸಿಕೊಂಡ ಸಂಜಯ್ ನಿರುಪಮ್, ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಕಾಂಗ್ರೆಸ್‌ಗೆ 125ರಿಂದ 140 ಸ್ಥಾನ ಹಾಗೂ ಬಿಜೆಪಿ ಕೇವಲ 40ರಿಂದ 50 ಸ್ಥಾನಗಳನ್ನು ಪಡೆಯಬಹುದು ಎಂದು ನಾನು ಹೇಳಿದ್ದೆ. ತಾನು ಈ ಟ್ವೀಟ್‌ಗೆ ಬದ್ಧನಾಗಿದ್ದೇನೆ. ವಿದ್ಯುನ್ಮಾನ ಮತಯಂತ್ರವನ್ನು ತಿರುಚದೇ ಇದ್ದಿದ್ದರೆ ಇದೇ ಫಲಿತಾಂಶ ಬರುತ್ತಿತ್ತು ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.