''ಮೋಹನ್ ಭಾಗವತ್ ಯೋಚಿಸಿ ಹೇಳಿಕೆ ನೀಡಬೇಕು''

Update: 2017-12-19 10:10 GMT

ಆಲಿಘರ್, ಡಿ.19: ಭಾರತದಲ್ಲಿರುವ ಮುಸ್ಲಿಮರು ಕೂಡ ಹಿಂದೂಗಳು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ನೀಡಿರುವ ಹೇಳಿಕೆ ಭಾರೀ ವಿವಾದ ಸೃಷ್ಟಿಸಿದೆ. ಕೆಲ ಸಂತರು ಅವರ ಹೇಳಿಕೆಯನ್ನು ಬೆಂಬಲಿಸಿದರೂ ಇನ್ನು ಹಲವರು ಅದನ್ನು ವಿರೋಧಿಸಿದ್ದಾರೆ.

‘‘ಅವರ ಹೇಳಿಕೆ ಪ್ರಶಂಸಾರ್ಹ. ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬ ನಾಗರಿಕನೂ ಹಿಂದು ಎಂಬುದು ಒಂದು ಕಹಿ ಸತ್ಯ. ತಮ್ಮನ್ನು ಮುಸ್ಲಿಮರೆಂದು ಹೇಳಿಕೊಳ್ಳುವವರು ಮೊದಲು ತಮ್ಮ ಹಿನ್ನೆಲೆಯನ್ನು ಪರಿಶೀಲಿಸಬೇಕೆಂದು ನಾನು ಹೇಳುತ್ತೇನೆ. ಅವರ ಪೂರ್ವಜರು ಹಿಂದುಗಳಾಗಿದ್ದರು ಎಂದು ಅವರಿಗೆ ತಿಳಿಯುವುದು’’ ಎಂದು ಭಾಗವತ್ ಅವರ ಹೇಳಿಕೆಯನ್ನು ಸಮರ್ಥಿಸಿ ಮಾತನಾಡಿದ ಮಹಂತ್ ಶಕುನ್ ಪಾಂಡೆ ಹೇಳಿದ್ದಾರೆ.

ಆದರೆ ಮಹಂತ್ ಧರ್ಮದಾಸ್ ಮಹಾರಾಜ್ ಅವರು ಆರೆಸ್ಸೆಸ್ ಮುಖ್ಯಸ್ಥರ ಹೇಳಿಕೆಯನ್ನು ಖಂಡಿಸಿದ್ದಾರಲ್ಲದೆ ಅವರು ಇಂತಹ ಹೇಳಿಕೆಯಿಂದ ದೂರವಿರಬೇಕೆಂದೂ ಸಲಹೆ ನೀಡಿದ್ದಾರೆ. ‘‘ಈ ವಿಚಾರವೆತ್ತಿ ಏನೂ ಪ್ರಯೋಜನವಿಲ್ಲ. ಅವರು ಹಿಂದುಗಳಿಗೆ ಮತ್ತು ಮುಸ್ಲಿಮರಿಗೆ ಏನು ಸಂದೇಶ ನೀಡಬಯಸುತ್ತಾರೆ ? ಯೋಚಿಸಿ ಇಂತಹ ಹೇಳಿಕೆ ನೀಡಬೇಕು’’ ಎಂದು ಅವರು ಹೇಳಿದ್ದಾರೆ.

ತ್ರಿಪುರಾದಲ್ಲಿ ಸಾರ್ವಜನಿಕ ಸಭೆಯೊಂದನ್ನುದ್ದೇಶಿಸಿ ಮಾತನಾಡಿದ್ದ ಭಾಗವತ್ ‘‘ಭಾರತದಲ್ಲಿರುವ ಮುಸ್ಲಿಮರು ಕೂಡ ಹಿಂದುಗಳು. ನಮಗೆ ಯಾರ ವಿರುದ್ಧವೂ ದ್ವೇಷವಿಲ್ಲ. ನಮಗೆ ಎಲ್ಲರ ಕಲ್ಯಾಣ ಮುಖ್ಯ’’ ಎಂದು ಹೇಳಿದ್ದರು.

‘‘ಹಿಂದುತ್ವ ಮತ್ತು ಹಿಂದು ಧರ್ಮ ಭಿನ್ನ. ಇಂದು ಪಾಶ್ಚಿಮಾತ್ಯ ಲೋಕವು ಸನಾತನ ಧರ್ಮದಲ್ಲಿ ತನ್ನ ಬೇರುಗಳನ್ನು ಹೊಂದಿರುವ ಭಾರತದ ಹಿಂದು ಧರ್ಮ ಮತ್ತು ಅದರ ಸಿದ್ಧಾಂತದತ್ತ ಬಹಳ ನಿರೀಕ್ಷೆಯಿಂದ ನೋಡುತ್ತಿದೆಯಲ್ಲದೆ ಇದು ಅವರ ಸಮಾಜವನ್ನು ಉದ್ಧರಿಸುವುದೆಂದು ಅವರು ತಿಳಿದಿದ್ದಾರೆ. ಅವರ ಆಶೋತ್ತರಗಳನ್ನು ಈಡೇರಿಸಲು ಇಂದು ಹಿಂದು ಧರ್ಮವು ಹೆಚ್ಚು ಮಹತ್ವ ಪಡೆದಿದೆ’’ ಎಂದು ಸ್ವಾಮಿ ವಿವೇಕಾನಂದ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವತ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News