'ಓ ಪ್ರೇಮವೇ' ಧ್ವನಿ ಸಾಂದ್ರಿಕೆ ಬಿಡುಗಡೆ

Update: 2017-12-20 06:29 GMT

ಬೆಂಗಳೂರು, ಡಿ.20: "ಮನೋಜ್ ನನಗೆ ಬಹಳ ವರ್ಷಗಳಿಂದ ಗೊತ್ತು. ಈಗ ಅವರು ಒಬ್ಬ ಬಹುಮುಖ ಪ್ರತಿಭೆಯಾಗಿ ಹೊಮ್ಮುತ್ತಿರುವುದು ಖುಷಿಯಿದೆ. ಚಿತ್ರದ ಹಾಡುಗಳನ್ನು ನೋಡಿದೆ. ಇಷ್ಟವಾಯಿತು. ಅವರಿಗೆ ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಭವಿಷ್ಯ ಸಿಗಲಿ ಎಂದು ಹಾರೈಸುತ್ತೇನೆ" ಎಂದರು ಪವರ್ ಸ್ಟಾರ್ ಪುನೀತ್ ರಾಜಕುಮಾರ್. ಅವರು 'ಓ ಪ್ರೇಮವೇ' ಚಿತ್ರದ ಧ್ವನಿ ಸಾಂದ್ರಿಕೆ ಬಿಡುಗಡೆಗೊಳಿಸಿ‌ ಮಾತನಾಡುತ್ತಿದ್ದರು.

ಲಲಿತ್ ಅಶೋಕ್ ನಲ್ಲಿ‌ ನಡೆದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಸಿನಿಮಾ ತಂಡದ ಜತೆಗೆ ರಾಜಕಾರಣಿಗಳು ಕೂಡ ನೆರೆದಿದ್ದರು. ಅದಕ್ಕೆ ಕಾರಣ ಚಿತ್ರದ ನಾಯಕ, ನಿರ್ದೇಶಕ ಮತ್ತು ಎಲ್ಲವೂ ಆಗಿರುವ ಮನೋಜ್ ಕೂಡ ರಾಜಕೀಯದ ಹಿನ್ನೆಲೆಯಿರುವ ಕುಟುಂಬದಿಂದಲೇ ಬಂದವರು. 'ಮೊಗ್ಗಿನ ಮನಸು' ಸಿನಿಮಾದ ಮೂಲಕ‌ ಚಿತ್ರರಂಗ ಪ್ರವೇಶಿಸಿದ ತಾವು ನಿರ್ದೇಶಕರಾದ ಗಿರಿರಾಜ್ ಮತ್ತು ಶಶಾಂಕ್ ಅವರಿಂದ ಟ್ರೈನಿಂಗ್ ಪಡೆದುಕೊಂಡಿರುವುದಾಗಿ ಮನೋಜ್ ತಿಳಿಸಿದರು.

ಅಂಥದೊಂದು ಅನುಭವ ಮತ್ತು ಹನ್ನೆರಡು ಮಂದಿಯಿರುವ ತಂಡದ ಸಹಾಯ ಪಡೆದುಕೊಂಡು ‌ಚಿತ್ರಪೂರ್ತಿ ಮಾಡಿದ್ದೇನೆ. ಹಾಗಾಗಿ ಇಲ್ಲಿರುವುದು ಪ್ರತಿಯೊಂದು ಕೂಡ ಟೀಮ್ ವರ್ಕ್. ಅದರಿಂದಲೇ ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದು ಧೈರ್ಯದಿಂದ ಹೇಳುವುದಾಗಿ ಮನೋಜ್ ತಿಳಿಸಿದರು. ಅವರು ಚಿತ್ರಕ್ಕೆ ಕತೆ, ಸಂಭಾಷಣೆ ಬರೆಯುವುದರೊಂದಿಗೆ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಇದೇ ಸಂದರ್ಭದಲ್ಲಿ ಕಿರಣ್ ಹಂಪಾಪುರ್ ಅವರ ಛಾಯಾಗ್ರಹಣದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ ಮನೋಜ್, ಬೆಂಗಳೂರು, ಮೈಸೂರು, ಸ್ವಿಝರ್ಲ್ಯಾಂಡ್ ನಲ್ಲಿ ‌ಸಿನಿಮಾದ ಅಗತ್ಯಕ್ಕನುಗುಣವಾಗಿ ಚಿತ್ರೀಕರಣ ನಡೆಸಲಾಗಿದೆ ಎಂದರು. ತಾನೋರ್ವ ರವಿಚಂದ್ರನ್ ಅಭಿಮಾನಿಯಾಗಿದ್ದು, ಅದೇ ಕಾರಣಕ್ಕೆ ಅವರ ಚಿತ್ರದ ಶೀರ್ಷಿಕೆಯನ್ನೇ ತಮ್ಮ ಚಿತ್ರಕ್ಕೆ ಇರಿಸಿರುವುದಾಗಿಯೂ ಮನೋಜ್ ತಿಳಿಸಿದರು. 

ಆನಂದ್ ಮತ್ತು ರಾಹುಲ್ ಎಂಬ ನವಜೋಡಿ ಸಂಗೀತ ನಿರ್ದೇಶಕರು ಚಿತ್ರದ ಮೂಲಕ ತಮ್ಮ ರಾಗ ಸಂಯೋಜನೆಯ ರಸದೂಟ ನೀಡಿದ್ದಾರೆ. ಕನ್ನಡದ ಪ್ರತಿಭೆ ಆನಂದ್ ಜತೆಗೆ ಮುಂಬೈಯ ರಾಹುಲ್ ಕೈ ಜೋಡಿಸಿರುವುದು ವಿಶೇಷ.

ಅಂಜನಾ ಸೆಲ್ವ ಕುಮಾರ್ ಎನ್ನುವ ಪ್ರತಿಭೆಗೆ ಗಾಯಕಿಯಾಗಿ ಪ್ರಥಮ‌ ಅವಕಾಶವನ್ನು ಚಿತ್ರದ ಮೂಲಕ‌ ನೀಡಿರುವುದಾಗಿ ತಿಳಿಸಿದರು. "ಸೋನು ನಿಗಮ್ ಮತ್ತು ಶ್ರೇಯಾ ಹಾಡಿರುವ 'ಗರಿಗೆದರಿ' ಎಂಬ ಒಂದು ಹಾಡು ಕೇಳಿಯೇ ಹಕ್ಕು ತೆಗೆದುಕೊಳ್ಳುವ ನಿರ್ಧಾರ ಮಾಡಿದೆವು ಎನ್ನುತ್ತಾರೆ ಆನಂದ್ ಆಡಿಯೋ ಆನಂದ್. 

ಚಿತ್ರದ ನಿರ್ಮಾಪಕಿ ಹಾಗೂ ಮನೋಜ್ ತಾಯಿ ಸಿ.ಟಿ.ಚಂಚಲಕುಮಾರಿ ಮಾತನಾಡಿ, ವೇದಿಕೆಯಲ್ಲಿ ಪವರ್ ಮತ್ತು ಪ್ರಜ್ವಲ್ ಜೋಡಿಯಾಗಿದ್ದಾರೆ. ಚಿತ್ರವು ಕೂಡ ಪವರ್ ಫುಲ್ ಆಗಿ ಪ್ರಜ್ವಲಿಸುವುದೆಂದು ನಿರೀಕ್ಷಿಸುವುದಾಗಿ ಹೇಳಿದರು.

ಮೊಗ್ಗಿನ ಮನಸು ಚಿತ್ರದಲ್ಲಿ ಸಣ್ಣದೊಂದು ಪಾತ್ರ ಮಾಡಿದ್ದ ನನ್ನ ಮಗ ಒಂಬತ್ತು ವರ್ಷಗಳಿಂದ ಸುಮ್ಮನಿದ್ದ.‌ಆದರೆ ಅವಕಾಶ ಸಿಗದಿರುವ ಬಗ್ಗೆ ನಮ್ಮಲ್ಲಿ ಹೇಳಿಕೊಂಡಿಲ್ಲ.‌ ಆದರೆ ಇತರ ನಿರ್ದೇಶಕರನ್ನು ನಂಬಿ‌ ದಿನ ಕಾಯುವ ಬದಲು ಖುದ್ದಾಗಿ ನಿರ್ದೇಶನಕ್ಕೆ ಇಳಿದಿದ್ದಾನೆ. ಅವನಿಗೆ ಚಿತ್ರವನ್ನು ನಿರ್ಮಾಣ ಮಾಡಿ ಬೆಂಬಲ ಮಾಡುವ ನಿರ್ಧಾರ ಮಾಡಿದೆವು ಎಂದರು.

ಸಕಲೇಶಪುರ ಎಂಎಲ್ ಎ ಕುಮಾರ ಸ್ವಾಮಿ ಮಾತನಾಡಿ, ಸಿನಿಮಾರಂಗ ರಾಜಕೀಯ ಕ್ಷೇತ್ರ ಕಷ್ಟ ಎಂಬ ಅರಿವು ನನ್ನದು. ಅದಕ್ಕೆ ಕಾರಣ ನಾನು ಕಂಡ ಹಾಗೆ ನನ್ನ ಮಗ ಕಷ್ಟಪಟ್ಟು ಚಿತ್ರಕ್ಕೆ ತಯಾರಾದ ರೀತಿ ಎಂದರು.

ಕರಿಸುಬ್ಬು ಈ ಹಿಂದೆ 'ಪರವಶನಾದೆನು' ಎಂದು ಹೆಸರಿಟ್ಟು ಚಿತ್ರ ಶುರು ಮಾಡಿದ್ದರು. ಈಗ ಹೆಸರು ಬದಲಾಯಿಸಿದ್ದಾರೆ ಎಂದರು. ನಟ ಪ್ರಶಾಂತ್ ಸಿದ್ದಿ "ಮನೋಜ್ ಮೊದಲನೆಯದಾಗಿ ಒಬ್ಬ ಒಳ್ಳೆಯ ಮನುಷ್ಯ. ಅವರು ತಮ್ಮ ಅಭಿಪ್ರಾಯಗಳನ್ನು ನೇರವಾಗಿ ಹಂಚಿಕೊಂಡು ಚಿತ್ರ ಮಾಡಿದ್ದಾರೆ" ಎಂದರು.

ಭವಾನಿ ರೇವಣ್ಣ , ಪ್ರಜ್ವಲ್ ರೇವಣ್ಣ , ಉದ್ಯಮಿ‌ ಭಾಸ್ಕರ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News