ರಖೈನ್ ರಾಜ್ಯದ ಅಭಿವೃದ್ಧಿ : ಭಾರತ- ಮ್ಯಾನ್ಮಾರ್ ಮಧ್ಯೆ ಒಪ್ಪಂದಕ್ಕೆ ಸಹಿ
ಹೊಸದಿಲ್ಲಿ, ಡಿ.20: ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ಸುದೀರ್ಘಾವಧಿಯ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಕುರಿತಂತೆ ಭಾರತ ಮತ್ತು ಮ್ಯಾನ್ಮಾರ್ ನಡುವೆ ತಿಳುವಳಿಕಾ ಪತ್ರ(ಮೆಮೊರ್ಯಾಂಡಮ್ ಆಫ್ ಅಂಡರ್‌ಸ್ಟಾಂಡಿಂಗ್)ಕ್ಕೆ ಸಹಿ ಹಾಕಲಾಗಿದೆ.
ವಿದೇಶ ವ್ಯವಹಾರ ಇಲಾಖೆಯ ಕಾರ್ಯದರ್ಶಿ ಎಸ್.ಜೈಶಂಕರ್ ಭಾರತದ ಪರ ಸಹಿ ಹಾಕಿದ್ದು ಈ ಸಂದರ್ಭ ಮ್ಯಾನ್ಮಾರ್‌ನ ಸಮಾಜ ಕಲ್ಯಾಣ ಸಚಿವ ವಿನ್ ಮ್ಯಾಟ್ ಅಯ್ ಉಪಸ್ಥಿತರಿದ್ದರು ಎಂದು ಮ್ಯಾನ್ಮಾರ್‌ಗೆ ಭಾರತದ ರಾಯಭಾರಿ ವಿಕ್ರಮ್ ಮಿಸ್ರಿ ಟ್ವೀಟ್ ಮಾಡಿದ್ದಾರೆ.
ಒಪ್ಪಂದದ ತಿಳುವಳಿಕಾ ಪತ್ರಕ್ಕೆ ಸಹಿ ಹಾಕಿದ ಬಳಿಕ ಜೈಶಂಕರ್ ಅವರು ಮ್ಯಾನ್ಮಾರ್ ಸರಕಾರದ ಸಲಹೆಗಾರರಾದ ಆಂಗ್ ಸಾನ್ ಸೂಕಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಸೆಪ್ಟೆಂಬರ್‌ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮ್ಯಾನ್ಮಾರ್‌ಗೆ ಭೇಟಿ ನೀಡಿದ್ದ ವೇಳೆ ಮೋದಿ ಹಾಗೂ ಸೂಕಿ ನಡುವೆ ನಡೆದ ದ್ವಿಪಕ್ಷೀಯ ಶೃಂಗಸಭೆಯಲ್ಲಿ ರಖೈನ್ ಅಭಿವೃದ್ಧಿಗೆ ಪ್ಯಾಕೇಜ್ ಸೇರಿದಂತೆ ಹಲವು ಪ್ರಸ್ತಾವ ಮಾಡಲಾಗಿದ್ದು , ಈ ಬದ್ಧತೆಗಳನ್ನು ಈಡೇರಿಸುವ ಕುರಿತು ಜೈಶಂಕರ್ ಮತ್ತು ಸೂಕಿ ಮಾತುಕತೆ ನಡೆಸಿದರು ಎಂದು ಮಿಸ್ರಿ ತಿಳಿಸಿದ್ದಾರೆ. ಇದಕ್ಕೂ ಮುನ್ನ ಜೈಶಂಕರ್ ಮ್ಯಾನ್ಮಾರ್‌ನ ಭದ್ರತಾ ಪಡೆಗಳ ಮುಖ್ಯ ಕಮಾಂಡರ್ ಮಿನ್ ಔಂಗ್ ಲಿಯಂಗ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ರಖೈನ್‌ನಲ್ಲಿ ಕಳೆದ ಆಗಸ್ಟ್‌ನಲ್ಲಿ ಹಿಂಸಾಚಾರ ಭುಗಿಲೆದ್ದ ಬಳಿಕ 6,50,000ಕ್ಕೂ ಹೆಚ್ಚು ರೊಹಿಂಗ್ಯಗಳು ನೆರೆಯ ಬಾಂಗ್ಲಾದೇಶಕ್ಕೆ ವಲಸೆ ಹೋಗಿರುವ ಹಿನ್ನೆಲೆಯಲ್ಲಿ, ಜೈಶಂಕರ್ ಅವರು ಮ್ಯಾನ್ಮಾರ್‌ಗೆ ನೀಡಿದ ಭೇಟಿಗೆ ಹೆಚ್ಚಿನ ಮಹತ್ವವಿದೆ. ಮ್ಯಾನ್ಮಾರ್‌ನ ಸೇನೆಯು ರೊಹಿಂಗ್ಯಾರ ವಿರುದ್ಧ ದೌರ್ಜನ್ಯ ನಡೆಸುತ್ತಿದೆ ಎಂದು ಮಾನವ ಹಕ್ಕುಗಳ ವೀಕ್ಷಕರು ಆರೋಪಿಸಿದ್ದರು. ರೊಹಿಂಗ್ಯಾ ಪ್ರಕರಣವನ್ನು ಮಾನವೀಯ ರೀತಿಯಲ್ಲಿ ನಿಭಾಯಿಸಬೇಕು ಎಂದು ಭಾರತ ಅಭಿಪ್ರಾಯಪಟ್ಟಿದ್ದು ರಖೈನ್‌ನಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡು, ರೊಹಿಂಗ್ಯ ವಲಸಿಗರ ಸುರಕ್ಷಿತ ವಾಪಸಾತಿಗೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದೆ. ಅಲ್ಲದೆ ರಖೈನ್ ಮತ್ತು ಬಾಂಗ್ಲಾದೇಶದಲ್ಲಿರುವ ರೊಹಿಂಗ್ಯ ನಿರಾಶ್ರಿತರಿಗೆ ಪರಿಹಾರ ಸಾಮಾಗಿಗಳನ್ನು ರವಾನಿಸಿದೆ.