ಜಯಲಲಿತಾ ವಿಡಿಯೋ ಬಿಡುಗಡೆ ಒಂದು ಪಿತೂರಿ: ಎಐಎಡಿಎಂಕೆ
ಚೆನ್ನೈ, ಡಿ.20: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಆಸ್ಪತ್ರೆಯಲ್ಲಿದ್ದ ವೇಳೆ ಚಿತ್ರೀಕರಣ ಮಾಡಲಾದ ವಿಡಿಯೋವೊಂದನ್ನು ಈಗ ಬಿಡುಗಡೆ ಮಾಡಿರುವ ವಿಕೆ ಶಶಿಕಲಾ ಕುಟುಂಬವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಆಡಳಿತಾರೂಢ ಎಐಎಡಿಎಂಕೆ ಡಿಸೆಂಬರ್ 21ರಂದು ನಡೆಯಲಿರುವ ಆರ್‌ಕೆ ನಗರ ಉಪಚುನಾವಣೆಯನ್ನು ಗಮನದಲ್ಲಿಟ್ಟು ಮಾಡಿದಂಥ ಪಿತೂರಿಯಾಗಿದೆ ಎಂದು ಆರೋಪಿಸಿದೆ.
ಈ ವಿಡಿಯೋವನ್ನು ಬಿಡುಗಡೆ ಮಾಡುವ ಮೂಲಕ ಶಶಿಕಲಾ ಕುಟುಂಬ ಜಯಲಲಿತಾ ಅವರ ವರ್ಚಸ್ಸು ಮತ್ತು ಅವರು ಗಳಿಸಿದ್ದ ಖ್ಯಾತಿಗೆ ಮಸಿಬಳಿಯಲು ಪ್ರಯತ್ನಿಸುತ್ತಿದೆ ಎಂದು ಎಐಎಡಿಎಂಕೆಯ ಹಿರಿಯ ನಾಯಕ ಮತ್ತು ಮೀನುಗಾರಿಕಾ ಸಚಿವ ಡಿ ಜಯಕುಮಾರ್ ಆರೋಪಿಸಿದ್ದಾರೆ. ಎಐಎಡಿಎಂಕೆ ಬೆಂಬಲಿಗರು ಮತ್ತು ಜನರು ಇದನ್ನು ಒಪ್ಪುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ. ಈ ದೃಶ್ಯ ತುಣುಕುಗಳನ್ನು ಬಿಡುಗಡೆ ಮಾಡಿದ ಟಿಟಿವಿ ದಿನಕರನ್ ಗುಂಪು, ಜಯಲಲಿತಾ ಅವರ ಸಾವಿನ ತನಿಖೆಯನ್ನು ನಡೆಸಲು ರಾಜ್ಯ ಸರಕಾರ ರಚಿಸಿರುವ ಮಂಡಳಿಗೆ ಈ ದೃಶ್ಯತುಣುಕುಗಳನ್ನು ಯಾಕೆ ತೋರಿಸಿಲ್ಲ ಎಂದು ಸಚಿವರು ಪ್ರಶ್ನಿಸಿದ್ದಾರೆ. ಜಯಲಲಿತಾ ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗಿನಿಂದ ಡಿಸೆಂಬರ್ 5ರಂದು ಅವರು ಮೃತರೆಂದು ಘೋಷಿಸುವವರೆಗೆ ಅವರಿಗೆ ನೀಡಲಾದ ವೈದ್ಯಕೀಯ ಚಿಕಿತ್ಸೆಗಳ ಬಗ್ಗೆ ನ್ಯಾಯಾಧೀಶರಾದ ಎ ಆರುಮುಘಸ್ವಾಮಿ ಅವರನ್ನೊಳಗೊಂಡ ಏಕಸದಸ್ಯ ಮಂಡಳಿ ತನಿಖೆ ನಡೆಸುತ್ತಿದೆ.
ಜಯಲಲಿತಾ ಅವರ ಸಾವಿನಿಂದಾಗಿ ತೆರವಾಗಿರುವ ಆರ್‌ಕೆ ನಗರ ಸ್ಥಾನಕ್ಕೆ ಎಐಎಡಿಎಂಕೆ ಅಭ್ಯರ್ಥಿ ಇ ಮಧುಸೂಧನ್ ವಿರುದ್ಧ ಪಕ್ಷದಿಂದ ಉಚ್ಛಾಟಿತ ನಾಯಕ ದಿನಕರನ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ದಿನಕರನ್ ಸದ್ಯ ಬೆಂಗಳೂರಿನ ಕಾರಾಗೃಹದಲ್ಲಿ ಬಂಧಿಯಾಗಿರುವ ಶಶಿಕಲಾ ಅವರ ಅಳಿಯನಾಗಿದ್ದಾರೆ.
ಈಗ ಬಿಡುಗಡೆ ಮಾಡಲಾಗಿರುವ ದೃಶ್ಯತುಣುಕನ್ನು ಯಾರು ಚಿತ್ರೀಕರಣ ಮಾಡಿದರು ಎಂದು ಪ್ರಶ್ನಿಸಿರುವ ಜಯಕುಮಾರ್ ಝಡ್ ಪ್ಲಸ್ ಭದ್ರತೆ ಹೊಂದಿದ್ದ ಜಯಲಲಿತಾ ಅವರ ಭದ್ರತಾ ವ್ಯವಸ್ಥೆಯನ್ನು ಮುರಿಯಲಾಗಿತ್ತೇ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ರೀತಿ ವಿಡಿಯೊ ಬಿಡುಗಡೆ ಮಾಡಿರುವುದು ಚುನಾವಣಾ ನೀತಿಸಂಹಿತೆಯ ಉಲ್ಲಂಘನೆಯಾಗಿದ್ದು ದಿನಕರನ್ ವಿರುದ್ಧ ಕಾನೂನಾತ್ಮಕ ಕ್ರಮಕೈಗೊಳ್ಳುವಂತೆ ಜಯಕುಮಾರ್ ಆಗ್ರಹಿಸಿದ್ದಾರೆ.