176 ನಿಷ್ಕ್ರಿಯ ಅಧಿಕಾರಿಗಳ ನಿವೃತ್ತಿ: ಸರಕಾರ
ಹೊಸದಿಲ್ಲಿ, ಡಿ.20: ಕಾರ್ಯ ನಿರ್ವಹಿಸದ 176 ಸರಕಾರಿ ಅಧಿಕಾರಿಗಳನ್ನು ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ ನಿವೃತ್ತಿಯಾಗುವಂತೆ ತಿಳಿಸಲಾಗಿದೆ ಎಂದು ಲೋಕಸಭೆಯಲ್ಲಿ ಸರಕಾರ ತಿಳಿಸಿದೆ.
ಆರ್ಥಿಕ ನಿಯಮ 56(ಜೆ) ಮತ್ತು ಸೇವಾ ಕಾಯ್ದೆಯಡಿಯ ನಿಯಮದಡಿ, 2014 ಜುಲೈ 1ರಿಂದ 2017ರ ಅಕ್ಟೋಬರ್ 31ರವರೆಗಿನ ಅವಧಿಯಲ್ಲಿ 53 ಗ್ರೂಪ್ ಎ ಅಧಿಕಾರಿಗಳು ಹಾಗೂ 123 ಗ್ರೂಪ್ ಬಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಸಾರ್ವಜನಿಕ ವ್ಯವಹಾರ ಮತ್ತು ಸಿಬ್ಬಂದಿ ಸಚಿವಾಲಯದ ಸಹಾಯಕ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಸರಕಾರದ ಉದ್ಯೋಗಿಗಳ ಕರ್ತವ್ಯದ ಪರಿಶೀಲನೆ ನಡೆಸಲು ಆರ್ಥಿಕ ನಿಯಮ 56(ಜೆ)ಯಲ್ಲಿ ಅವಕಾಶವಿದೆ. ಉದ್ಯೋಗಕ್ಕೆ ಸೇರಿದ 15 ವರ್ಷಗಳ ಬಳಿಕ ಹಾಗೂ 25 ವರ್ಷ ಕರ್ತವ್ಯ ನಿರ್ವಹಿಸಿದ ಬಳಿಕ- ಹೀಗೆ ಎರಡು ಬಾರಿ ವಿಮರ್ಶೆ ನಡೆಸಬಹುದಾಗಿದೆ. ಐಎಎಸ್, ಐಪಿಎಸ್ ಸೇರಿದಂತೆ 11,828 ಗ್ರೂಫ್ ಎ ಅಧಿಕಾರಿಗಳು ಹಾಗೂ 19,714 ಗ್ರೂಪ್ ಬಿ ಅಧಿಕಾರಿಗಳ ಸೇವಾದಾಖಲೆಯನ್ನು ಪರಿಶೀಲಿಸಲಾಗಿದೆ ಎಂದು ಸರಕಾರ ತಿಳಿಸಿದೆ.