ದಿಲ್ಲಿ ಮಾಲಿನ್ಯ: ಮಂಜುಹೊಗೆ ನಿಯಂತ್ರಣ ಗನ್‌ಗಳ ಪರೀಕ್ಷಾರ್ಥ ಪ್ರಯೋಗ
ಹೊಸದಿಲ್ಲಿ, ಡಿ.20: ದೇಶದ ರಾಜಧಾನಿಯಲ್ಲಿ ವಾಯುಮಾಲಿನ್ಯ ಮಿತಿಮೀರಿರುವ ಹಿನ್ನೆಲೆಯಲ್ಲಿ ಮಂಜುಹೊಗೆಯ ತೊಂದರೆಯನ್ನು ಕಡಿಮೆ ಮಾಡುವ ಸಲುವಾಗಿ ಮಂಗಳವಾರ ಬೆಳಗ್ಗೆ ಇಲ್ಲಿನ ಆನಂದ್ ವಿಹಾರ್ ಬಸ್ ಟರ್ಮಿನಲ್‌ನಲ್ಲಿ ಮಂಜುಹೊಗೆ ನಿಯಂತ್ರಣ ಗನ್‌ಗಳ ಪರೀಕ್ಷಾರ್ಥ ಪ್ರಯೋಗ ನಡೆಸಲಾಯಿತು.
ಈ ನೂತನ ಯಂತ್ರ ಮಾಲಿನ್ಯ ಮಟ್ಟವನ್ನು ಕಡಿಮೆ ಮಾಡಬಲ್ಲುದೇ ಎಂಬುದನ್ನು ತಿಳಿಯುವ ಸಲುವಾಗಿ ದಿಲ್ಲಿಯ ಅತ್ಯಂತ ಮಾಲಿನ್ಯಪೀಡಿತ ಪ್ರದೇಶಗಳಲ್ಲಿ ಒಂದಾಗಿರುವ ಆನಂದ್ ವಿಹಾರ್ ಅನ್ನು ಆಯ್ಕೆ ಮಾಡಲಾಗಿತ್ತು. ಈ ಪ್ರದೇಶದಲ್ಲಿ ದಿನವಿಡೀ ಮಂಜುಹೊಗೆ ನಿಯಂತ್ರಣ ಗನ್ ಪ್ರಯೋಗ ಮಾಡಲಾಗಿದ್ದು ಇದರಿಂದ ಮಾಲಿನ್ಯದಲ್ಲಿ ಇಳಿಕೆಯಾದರೆ ಶೀಘ್ರದಲ್ಲೇ ಈ ಗನ್‌ಗಳನ್ನು ಇತರ ಪ್ರದೇಶಗಳಲ್ಲೂ ಬಳಸಲಾಗುವುದು ಎಂದು ದಿಲ್ಲಿಯ ಪರಿಸರ ಸಚಿವ ಇಮ್ರಾನ್ ಹುಸೈನ್ ತಿಳಿಸಿದ್ದಾರೆ. ಈ ಯಂತ್ರವನ್ನು ಮೊದಲ ಬಾರಿ ಚೀನಾದಲ್ಲಿ 2015ರಲ್ಲಿ ಬಳಸಲಾಗಿತ್ತು. ಅಲ್ಲಿ ಕಟ್ಟಡ ನಿರ್ಮಾಣ ಕಾರ್ಯಗಳ ವೇಳೆ ಏಳುವ ಧೂಳನ್ನು ನಿಯಂತ್ರಿಸುವುದಕ್ಕಾಗಿ ಈ ಯಂತ್ರವನ್ನು ಬಳಸಲಾಗುತ್ತಿತ್ತು ಎಂದು ಸಚಿವರು ತಿಳಿಸಿದ್ದಾರೆ.
ಈ ಯಂತ್ರವನ್ನು ನಿರ್ಮಿಸಿರುವ ಕ್ಲೌಡ್ ಟೆಕ್ ಸಂಸ್ಥೆಯ ಪ್ರತಿನಿಧಿ ತಿಳಿಸುವಂತೆ, ಈ ಯಂತ್ರವು ಮಳೆಯಂಥ ಸ್ಥಿತಿಯನ್ನು ನಿರ್ಮಾಣ ಮಾಡುತ್ತದೆ. ನೀರಿನ ಸಣ್ಣ ಹನಿಗಳನ್ನು ಆಕಾಶದತ್ತ ಹಾರಿಸುವ ಈ ಯಂತ್ರ ನೀರಿನ ಹನಿ ವಾತಾವರಣದಲ್ಲಿರುವ ಧೂಳಿನೊಂದಿಗೆ ಸೇರಿ ಭೂಮಿಯ ಮೇಲೆ ಬೀಳುವಂತೆ ಮಾಡುತ್ತದೆ. ಈ ಯಂತ್ರದ ಗಾತ್ರ ಮತ್ತು ನೀರಿನ ಟ್ಯಾಂಕ್‌ಗೆ ಅನುಗುಣವಾಗಿ ಇದರಿಂದ 30 ಮೀಟರ್‌ನಿಂದ 100 ಮೀಟರ್ ದೂರದವರೆಗೆ ನೀರನ್ನು ಗಾಳಿಯಲ್ಲಿ ಹಾರಿಸಬಹುದು. ಹಾಗಾಗಿ ಈ ಯಂತ್ರಕ್ಕೆ ಅತ್ಯಧಿಕ ನೀರಿನ ಅಗತ್ಯವಿದ್ದು ಮೂವತ್ತು ಮೀಟರ್ ದೂರಕ್ಕೆ ಚಿಮ್ಮಲು ಒಂದು ನಿಮಿಷಕ್ಕೆ ಮೂವತ್ತು ಲೀಟರ್ ನೀರಿನ ಅಗತ್ಯವಿದೆ.