×
Ad

ತ್ರಿವಳಿ ತಲಾಖ್ ಮಸೂದೆ ಕುರಿತು ಮುಸ್ಲಿಂ ಸಂಸ್ಥೆಗಳೊಂದಿಗೆ ಸಮಾಲೋಚಿಸಿರಲಿಲ್ಲ: ಕೇಂದ್ರ

Update: 2017-12-20 19:11 IST

ಹೊಸದಿಲ್ಲಿ,ಡಿ.20: ತ್ರಿವಳಿ ತಲಾಖ್ ಪದ್ಧತಿಯನ್ನು ಅಪರಾಧವಾಗಿಸಲು ಕರಡು ಮಸೂದೆಯನ್ನು ರೂಪಿಸುವ ಮುನ್ನ ಸರಕಾರವು ಮುಸ್ಲಿಂ ಸಂಸ್ಥೆಗಳೊಂದಿಗೆ ಸಮಾಲೋಚಿಸಿರಲಿಲ್ಲ ಎಂದು ಸರಕಾರವು ಬುಧವಾರ ಲೋಕಸಭೆಯಲ್ಲಿ ತಿಳಿಸಿದೆ.

ಲಿಂಗ ನ್ಯಾಯ, ಲಿಂಗ ಸಮಾನತೆ ಮತ್ತು ಮಹಿಳೆಯ ಘನತೆಯನ್ನು ಖಚಿತಪಡಿಸುವಲ್ಲಿ ಪ್ರಸ್ತಾಪಿತ ಮಸೂದೆಯು ನೆರವಾಗಲಿದೆ ಎಂದು ಸರಕಾರವು ವಿಶ್ವಾಸ ಹೊಂದಿದೆ ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದರು.

ಕರಡು ಮಸೂದೆಯನ್ನು ರೂಪಿಸುವ ಮುನ್ನ ಸರಕಾರವು ಮುಸ್ಲಿಂ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಿತ್ತೇ ಎಂಬ ಪ್ರಶ್ನೆಗೆ ಸಹಾಯಕ ಕಾನೂನು ಸಚಿವ ಪಿ.ಪಿ.ಚೌಧರಿ ಅವರು ನಕಾರಾತ್ಮಕವಾಗಿ ಉತ್ತರಿಸಿದರು.

ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಪ್ರಸಾದ್, ಇದು ಲಿಂಗ ನ್ಯಾಯ, ಲಿಂಗ ಸಮಾನ ಮತ್ತು ಮಹಿಳೆಯ ಘನತೆಗೆ ಸಂಬಂಧಿಸಿದ ಮಾನವೀಯ ಪರಿಕಲ್ಪನೆಯಾಗಿದೆಯೇ ಹೊರತು ಯಾವುದೇ ಪಂಥ ಅಥವಾ ಧರ್ಮಕ್ಕೆ ಸಂಬಂಧಿಸಿಲ್ಲ ಎಂದರು.

ದಿಢೀರ್ ತ್ರಿವಳಿ ತಲಾಖ್ ಪದ್ಧತಿಯನ್ನು ಸರ್ವೋಚ್ಚ ನ್ಯಾಯಾಲಯವು ರದ್ದುಗೊಳಿಸಿದ ಬಳಿಕವೂ ಇಂತಹ ಸುಮಾರು 66 ಪ್ರಕರಣಗಳು ವರದಿಯಾಗಿವೆ ಎಂದು ಅವರು ತಿಳಿಸಿದರು.

ಕೇಂದ್ರ ಸಂಪುಟವು ಡಿ.12ರಂದು ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣೆ ಮಸೂದೆಗೆ ತನ್ನ ಒಪ್ಪಿಗೆಯನ್ನು ನೀಡಿದ್ದು, ಅದು ತ್ರಿವಳಿ ತಲಾಖ್‌ನ್ನು ಅಕ್ರಮ ಮತ್ತು ಅಸಿಂಧು ಎಂದು ಘೋಷಿಸುವ ಜೊತೆಗೆ, ಪತಿಗೆ ಜೈಲುಶಿಕ್ಷೆ ಮತ್ತು ದಂಡವನ್ನು ವಿಧಿಸುವ ಅವಕಾಶವನ್ನು ಕಲ್ಪಿಸುತ್ತದೆ.

ಪ್ರಸ್ತಾಪಿತ ಕಾನೂನು ತ್ರಿವಳಿ ತಲಾಖ್ ಅಥವಾ ತಲಾಖೆ ಬಿದ್‌ಅತ್‌ಗೆ ಮಾತ್ರ ಅನ್ವಯಿಸುತ್ತಿದ್ದು, ಈ ಪದ್ಧತಿಯಡಿ ಪತಿಯಿಂದ ವಿಚ್ಛೇದನ ಪಡೆದ ಮಹಿಳೆ ತನಗೆ ಮತ್ತು ತನ್ನ ಅಪ್ರಾಪ್ತ ಮಕ್ಕಳಿಗೆ ಜೀವನಾಂಶ ಕೋರಿ ನ್ಯಾಯಾಲಯದ ಮೊರೆ ಹೋಗಬಹು ದಾಗಿದೆ. ಅಲ್ಲದೇ ಅಪ್ರಾಪ್ತ ವಯಸ್ಕ ಮಕ್ಕಳನ್ನು ತನ್ನ ವಶಕ್ಕೆ ನೀಡುವಂತೆಯೂ ಕೋರಿಕೊಳ್ಳಬಹುದಾಗಿದೆ.

 ಕರಡು ಮಸೂದೆಯಡಿ ಮಾತಿನಲ್ಲಿ, ಬರವಣಿಗೆಯಲ್ಲಿ ಮತ್ತು ಇ-ಮೇಲ್, ಎಸ್‌ಎಂಎಸ್ ಹಾಗೂ ವಾಟ್ಸ್ಯಾಪ್‌ನಂತಹ ವಿದ್ಯುನ್ಮಾನ ವಿಧಾನಗಳು, ಹೀಗೆ ಯಾವುದೇ ರೂಪದಲ್ಲಿ ತ್ರಿವಳಿ ತಲಾಖ್ ಹೇಳಿದರೂ ಅದು ಅಕ್ರಮ ಮತ್ತು ಅಸಿಂಧುವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News