ಗುಜರಾತ್ ವಿಜಯಕ್ಕಾಗಿ ಬಿಜೆಪಿ ಮೋದಿ ಜೊತೆಗೆ ಇವಿಎಂಗಳಿಗೂ ಹಾರ ತೊಡಿಸಲಿ: ಶಿವಸೇನೆ
ಮುಂಬೈ,ಡಿ.20: ಬಿಜೆಪಿ ವಿರುದ್ಧ ತನ್ನ ದಾಳಿಯನ್ನು ಬುಧವಾರವೂ ಮುಂದುವರಿಸಿದ ಮಿತ್ರಪಕ್ಷ ಶಿವಸೇನೆಯು, ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳಲ್ಲಿ ಹಸ್ತಕ್ಷೇಪ ನಡೆಯುತ್ತಿರುವ ಶಂಕೆಯನ್ನು ವ್ಯಕ್ತಪಡಿಸಿದೆ.
ಪಾಟಿದಾರ್ ಮೀಸಲಾತಿ ಹೋರಾಟದ ನಾಯಕ ಹಾರ್ದಿಕ್ ಪಟೇಲ್ ಹೇಳುತ್ತಿರುವುದು ನಿಜವಾಗಿದ್ದರೆ ಗುಜರಾತ್ ವಿಜಯಕ್ಕಾಗಿ ಬಿಜೆಪಿಯು ಮೋದಿಯವರ ಜೊತೆಗೆ ಇವಿಎಂಗಳಿಗೂ ಹಾರವನ್ನು ತೊಡಿಸಬೇಕು ಎಂದು ಅದು ಹೇಳಿದೆ.
ಸೋಮವಾರ ಚುನಾವಣಾ ಫಲಿತಾಂಶಗಳು ಹೊರಬಿದ್ದ ನಂತರ ಮುಂಬೈಯಲ್ಲಿ ಬಿಜೆಪಿ ಕಾರ್ಯಕರ್ತರ ವಿಜಯೋತ್ಸವವನ್ನು ಪ್ರಸ್ತಾಪಿಸಿದ ಶಿವಸೇನೆಯು, ಪಕ್ಷವು ಗುಜರಾತ್‌ನಲ್ಲಿ 100ರ ಗಡಿ ದಾಟದಿದ್ದರೂ ಇಲ್ಲಿ ಕೆಲವರು ವಿಜಯೋತ್ಸವ ಆಚರಿಸುತ್ತಿದ್ದಾರೆ, ಅವರು ಈ ವಿಜಯದ ನಿಜವಾದ ಅರ್ಥವನ್ನು ತಿಳಿದುಕೊಂಡಿಲ್ಲ ಎಂದಿದೆ. ಚುನಾವಣೆಗಳನ್ನು ಗೆಲ್ಲಲು ಬಿಜೆಪಿಯು ಯಾವುದೇ ಮಟ್ಟಕ್ಕೂ ಇಳಿಯುತ್ತದೆ ಎನ್ನುವುದನ್ನು ಗುಜರಾತ್ ಚುನಾವಣೆಯು ತೋರಿಸಿದೆ ಎಂದು ಕುಟುಕಿದೆ.
150ಕ್ಕೂ ಅಧಿಕ ಸ್ಥಾನಗಳನ್ನು ಪಡೆಯುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದರು. ಆದರೆ ಗುಜರಾತಿನ ಜನತೆ ಅವರಿಗೆ 100 ಸ್ಥಾನಗಳನ್ನೂ ನೀಡಿಲ್ಲ ಎಂದು ಅದು ಹೇಳಿದೆ.
ನಗರ ಪ್ರದೇಶಗಳ ಜನರು ಬಿಜೆಪಿಯತ್ತ ಒಲವು ತೋರಿಸಿದ್ದಾರೆ. ಆದರೆ ‘ನಿಜವಾದ ಹಿಂದೂಸ್ಥಾನ’ವು ರೈತರು ಮತ್ತು ಕಾರ್ಮಿಕರ ಸಮಸ್ಯೆಗಳು ಇನ್ನೂ ಹಾಗೆಯೇ ಉಳಿದುಕೊಂಡಿರುವ ಗ್ರಾಮಗಳಲ್ಲಿದೆ ಎಂದು ಅದು ಹೇಳಿದೆ.
ಮಂಗಳವಾರವೂ ಬಿಜೆಪಿ ವಿರುದ್ಧ ದಾಳಿ ನಡೆಸಿದ್ದ ಶಿವಸೇನೆಯು, ಗುಜರಾತ್ ಚುನಾವಣಾ ಫಲಿತಾಂಶವು ನಿರಂಕುಶ ಆಡಳಿತದಲ್ಲಿ ನಂಬಿಕೆ ಹೊಂದಿದವರಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಹೇಳಿತ್ತು.