ಕೋಮುಗಲಭೆ ಪ್ರಕರಣ: ಉತ್ತರಪ್ರದೇಶ ಪ್ರಥಮ, ಕರ್ನಾಟಕ ದ್ವಿತೀಯ
ಹೊಸದಿಲ್ಲಿ, ಡಿ. 20: ಕೋಮು ಹಿಂಸಾಚಾರ ಪ್ರಕರಣಗಳಲ್ಲಿ ಕರ್ನಾಟಕ ಎರಡನೇ ಸ್ಥಾನ ಪಡೆದಿದೆ. ಉತ್ತರಪ್ರದೇಶ ಪ್ರಥಮ ಸ್ಥಾನ ಪಡೆದಿದ್ದು, ಮಹಾರಾಷ್ಟ್ರ ಮೂರನೆ ಸ್ಥಾನ ಹೊಂದಿದೆ ಎಂದು ಸರಕಾರ ಬುಧವಾರ ರಾಜ್ಯ ಸಭೆಯಲ್ಲಿ ಮಾಹಿತಿ ನೀಡಿತು.
2014-16ರಲ್ಲಿ ದೇಶಾದ್ಯಂತ ದಾಖಲಾದ ಒಟ್ಟು ಕೋಮುಗಲಭೆ ಪ್ರಕರಣಗಳಲ್ಲಿ ಉತ್ತರಪ್ರದೇಶದಲ್ಲಿ ಅತ್ಯಧಿಕ 450 ಕೋಮುಗಲಭೆ ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿ ಹಾಗೂ ಮಹಾರಾಷ್ಟ್ರದಲ್ಲಿ ಅನುಕ್ರಮವಾಗಿ 279 ಹಾಗೂ 270 ಕೋಮುಗಲಭೆ ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಲಾಯಿತು.ಬಿಜೆಪಿ ಆಡಳಿತವಿರುವ ರಾಜ್ಯಗಳಾದ ಮಧ್ಯಪ್ರದೇಶ 205 ಕೋಮು ಗಲಭೆ ಪ್ರಕರಣಗಳು ದಾಖಲಾಗುವ ಮೂಲಕ 4ನೇ ಸ್ಥಾನ ಹಾಗೂ ರಾಜಸ್ಥಾನ 200 ಪ್ರಕರಣಗಳು ದಾಖಲಾಗುವ ಮೂಲಕ 5ನೇ ಸ್ಥಾನ ಪಡೆದುಕೊಂಡಿದೆ.
ಬಿಹಾರ್ 6ನೇ ಸ್ಥಾನ ಹಾಗೂ ಗುಜರಾತ್ 7ನೇ ಸ್ಥಾನ ಪಡೆದುಕೊಂಡಿದೆ. ಇಲ್ಲಿ ಕ್ರಮವಾಗಿ 197 ಹಾಗೂ 182 ಕೋಮು ಗಲಭೆ ಪ್ರಕರಣಗಳು ದಾಖಲಾಗಿವೆ ಎಂದು ರಾಜ್ಯಸಭೆಯಲ್ಲಿ ಮಾಹಿತಿ ನೀಡಲಾಯಿತು.