ಕೇರಳ ಜೆಡಿಯು ನಾಯಕ ವೀರೇಂದ್ರ ಕುಮಾರ್ ರಾಜೀನಾಮೆ
Update: 2017-12-20 20:31 IST
ಹೊಸದಿಲ್ಲಿ, ಡಿ. 20: ಮೇಲ್ಮನೆಯಿಂದ ಜೆಡಿಯುನ ಬಂಡಾಯ ನಾಯಕರಾದ ಶರದ್ ಯಾದವ್ ಹಾಗೂ ಅಲಿ ಅನ್ವರ್ ಅವರನ್ನು ಅನರ್ಹಗೊಳಿಸಿದ ಕೆಲವು ದಿನಗಳ ಬಳಿಕ, ಅಸಂತುಷ್ಟ ಜೆಡಿಯು ನಾಯಕ ಎಂ.ಪಿ. ವೀರೇಂದ್ರ ಕುಮಾರ್ ರಾಜ್ಯಸಭಾ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ.
80ರ ಹರೆಯದ ಪತ್ರಿಕೋದ್ಯಮಿ ಎಂ.ಪಿ. ವೀರೇಂದ್ರ ಕುಮಾರ್ ತನ್ನ ರಾಜೀನಾಮೆಯನ್ನು ರಾಜ್ಯಸಭೆ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಅವರಿಗೆ ಬುಧವಾರ ಸಲ್ಲಿಸಿದರು ಎಂದು ಜೆಡಿಯುನ ಬಂಡಾಯ ನಾಯಕ ಅರುಣ್ ಕುಮಾರ್ ಶ್ರೀವಾತ್ಸವ ತಿಳಿಸಿದ್ದಾರೆ.
ಕಳೆದ ವರ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಬೆಂಬಲದಿಂದ ಕೇರಳ ಸರಕಾರದ ಮೇಲ್ಮನೆಗೆ ಆಯ್ಕೆಯಾಗಿದ್ದ ವಿರೇಂದ್ರ ಕುಮಾರ್ ರಾಜೀನಾಮೆ ನೀಡಿದ್ದಾರೆ. ಅವರು ನಿತೀಶ್ ಕುಮಾರ್ ಅವರೊಂದಿಗೆ ಕೈಜೋಡಿಸುತ್ತಿರುವುದರಿಂದ ಯಾರೊಬ್ಬರೂ ಅವರ ನಿಷ್ಠತೆ ಬಗ್ಗೆ ಪ್ರಶ್ನಿಸಲಾರರು ಎಂದು ಶ್ರೀವಾತ್ಸವ ಹೇಳಿದ್ದಾರೆ.ವೀರೇಂದ್ರ ಕುಮಾರ್ ಜೆಡಿಯುನ ಕೇರಳ ಘಟಕದ ಅಧ್ಯಕ್ಷರಾಗಿದ್ದರು.