×
Ad

ಜಾಧವ್ ತಾಯಿ, ಪತ್ನಿಗೆ ವೀಸಾ ನೀಡಿದ ಪಾಕಿಸ್ತಾನ

Update: 2017-12-20 20:50 IST

ಹೊಸದಿಲ್ಲಿ, ಡಿ.20: ಪಾಕಿಸ್ತಾನದಲ್ಲಿ ಮರಣ ದಂಡನೆ ಶಿಕ್ಷೆಗೆ ಒಳಗಾಗಿ ಜೈಲಿನಲ್ಲಿ ಬಂಧಿಯಾಗಿರುವ ಭಾರತೀಯ ಕುಲಭೂಷಣ್ ಜಾಧವ್‌ರನ್ನು ಭೇಟಿ ಮಾಡಲು ಅನುಮತಿ ಪಡೆದಿರುವ ಅವರ ತಾಯಿ ಮತ್ತು ಪತ್ನಿಗೆ ಹೊಸದಿಲ್ಲಿಯಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿ ವೀಸಾ ಜಾರಿ ಮಾಡಿದ್ದು ಡಿಸೆಂಬರ್ 25ರಂದು ಜಾದವ್ ತಾಯಿ ಮತ್ತು ಪತ್ನಿ ಇಸ್ಲಾಮಾಬಾದ್‌ನಲ್ಲಿ ಜಾಧವ್‌ರನ್ನು ಭೇಟಿಯಾಗಲಿದ್ದಾರೆ.

ವೀಸಾ ಜಾರಿಯಾಗಿರುವ ಬಗ್ಗೆ ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರರಾದ ಮುಹಮ್ಮದ್ ಫೈಸಲ್ ಟ್ವಿಟ್ಟರ್ ಮೂಲಕ ದೃಢಪಡಿಸಿದ್ದಾರೆ. ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಯಾಗಿರುವ ಕುಲ್‌ಭೂಷಣ್ ಜಾಧವ್‌ರನ್ನು ಬೇಹುಗಾರಿಕೆ ಆರೋಪದಲ್ಲಿ ಪಾಕಿಸ್ತಾನದಲ್ಲಿ ಬಂಧಿಸಲಾಗಿತ್ತು. ಕಳೆದ ವರ್ಷ ಮಾರ್ಚ್ 3ರಂದು ಜಾಧವ್ ಇರಾನ್ ಮೂಲಕ ಪಾಕಿಸ್ತಾನ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾಗ ಬಲೂಚಿಸ್ತಾನದ ಬಳಿ ಅವರನ್ನು ಭದ್ರತಾ ಪಡೆಗಳು ಬಂಧಿಸಿದ್ದವು ಎಂದು ಪಾಕಿಸ್ತಾನ ತಿಳಿಸಿದ್ದರೆ ನೌಕಾಪಡೆಯಿಂದ ನಿವೃತ್ತಿ ಹೊಂದಿದ ಬಳಿಕ ಜಾಧವ್ ಇರಾನ್‌ನಲ್ಲಿ ವ್ಯವಹಾರ ನಡೆಸುತ್ತಿದ್ದರು ಅಲ್ಲಿಂದಲೇ ಅವರನ್ನು ಅಪಹರಣ ಮಾಡಲಾಗಿದೆ ಎಂದು ಭಾರತ ಹೇಳಿಕೆ ನೀಡಿದೆ.

ಪಾಕಿಸ್ತಾನವು ಜಾಧವ್‌ಗೆ ಮರಣ ದಂಡನೆ ವಿಧಿಸಿದ್ದರೂ ಭಾರತದ ಮನವಿಯನ್ನು ಪುರಸ್ಕರಿಸಿರುವ ಅಂತಾರಾಷ್ಟ್ರೀಯ ನ್ಯಾಯಾಲಯ ಈ ತೀರ್ಪನ್ನು ತಡೆಹಿಡಿದಿದೆ.

 ಜಾಧವ್ ಬಳಿಯಿದ್ದ ಮಾಹಿತಿಗಳನ್ನು ತಿಳಿಯುವ ಅವಕಾಶ ನೀಡಬೇಕೆಂಬ ಭಾರತದ ಕೋರಿಕೆಯನ್ನು ಪಾಕಿಸ್ತಾನ ನಿರಂತರವಾಗಿ ತಳ್ಳಿಹಾಕುತ್ತಲೇ ಬಂದಿದ್ದರೂ ಅವರ ತಾಯಿ ಮತ್ತು ಪತ್ನಿಗೆ ಜಾಧವ್‌ರನ್ನು ಭೇಟಿಯಾಗಲು ಮಾನವೀಯ ನೆಲೆಯಲ್ಲಿ ಅನುಮತಿ ನೀಡಿತ್ತು. ಡಿಸೆಂಬರ್ 25ರಂದು ಜಾಧವ್ ತಾಯಿ ಮತ್ತು ಪತ್ನಿ ಇಸ್ಲಾಮಾಬಾದ್‌ಗೆ ತೆರಳುತ್ತಿದ್ದು, ಈ ವೇಳೆ ಭಾರತೀಯ ಪ್ರತಿನಿಧಿಯೊಬ್ಬರು ಅವರ ಜೊತೆ ತೆರಳಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News