ಜಮೀನು ಅತಿಕ್ರಮಣ ವಿರೋಧಿಸಿದ ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿ ಥಳಿಸಿದರು

Update: 2017-12-20 15:35 GMT

ಹೈದರಾಬಾದ್, ಡಿ.20: ಮಾನವೀಯತೆಯೇ ನಾಚಿ ತಲೆತಗ್ಗಿಸುವಂತಹ ಹೇಯ ಘಟನೆ ಮಂಗಳವಾರ ಸಂಜೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ. ಎನ್‌ಟಿಆರ್ ಗೃಹ ಕಲ್ಪ ಯೋಜನೆಯಡಿ ವಸತಿ ಸಂಕೀರ್ಣದ ಹೆಸರಿನಲ್ಲಿ ಜಮೀನು ಅತಿಕ್ರಮಣವನ್ನು ವಿರೋಧಿಸಿದ್ದಕ್ಕಾಗಿ ದಲಿತ ಮಹಿಳೆಯೊಬ್ಬರನ್ನು ರಾಜಕಾರಣಿಗಳ ಗೂಂಡಾಗಳು ವಿವಸ್ತ್ರಗೊಳಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಪೆಂದುರ್ತಿ ಪೊಲೀಸ್ ಠಾಣಾ ವ್ಯಾಪ್ತಿಯ ಜೆರಿಪೋತುಪಾಳೆಂ ಎಂಬಲ್ಲಿ ನಡೆದ ಈ ಘಟನೆಯು ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದ್ದು, ಸ್ಥಳೀಯ ದಲಿತ ಸಂಘಟನೆಗಳು ಮತ್ತು ಎಡಪಕ್ಷಗಳ ನಾಯಕರು ಪೊಲೀಸ್ ದೂರನ್ನು ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆಯನ್ನೂ ನಡೆಸಿದರು.

ಘಟನೆಗೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಸೇರಿದಂತೆ ಆರು ಜನರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಇವರೆಲ್ಲ ಆಡಳಿತ ಟಿಡಿಪಿಗೆ ಸೇರಿದವರು ಎನ್ನಲಾಗಿದೆ. ಸಂತ್ರಸ್ತ ಮಹಿಳೆಯನ್ನು ಕಿಂಗ್ ಜಾರ್ಜ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳೀಯರು ಹೇಳುವಂತೆ ವಿವಾದಿತ ಜಮೀನು ಮೊದಲು ಕೆಲವು ದಲಿತ ಕುಟುಂಬಗಳಿಗೆ ಮಂಜೂರಾಗಿದ್ದು, ಅಲ್ಲಿ ಅವರು ಕೃಷಿ ಮಾಡಿಕೊಂಡಿದ್ದರು. ಕೆಲವರು ಮನೆಗಳನ್ನೂ ನಿರ್ಮಿಸಿಕೊಂಡಿದ್ದರು. ಆದರೆ ನಂತರದ ವರ್ಷಗಳಲ್ಲಿ ಸ್ಥಳೀಯ ಕಂದಾಯ ಅಧಿಕಾರಿಗಳು ಭಾಗಶಃ ಜಮೀನನ್ನು ಎಪಿ ಬಿವರೇಜಿಸ್‌ನ ಬಾಟ್ಲಿಂಗ್ ಸ್ಥಾವರಕ್ಕೆ ಮರು ಹಂಚಿಕೆ ಮಾಡಿದ್ದು, ದಲಿತರ ಪಾಲಿಗೆ ಕೇವಲ 88 ಸೆಂಟ್ಸ್ ಜಮೀನು ಮಾತ್ರ ಉಳಿದುಕೊಂಡಿತ್ತು.

ಈ 88 ಸೆಂಟ್ಸ್ ಜಮೀನನ್ನೂ ಬಳಿಕ ಸ್ಥಳೀಯ ಟಿಡಿಪಿ ಕಾರ್ಯಕರ್ತರಿಗೆ ಹಂಚಿಕೆ ಮಾಡಲಾಗಿದ್ದು, ದಲಿತ ಕುಟುಂಬಗಳು ಇದರ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿವೆ. ಅದಿನ್ನೂ ವಿಚಾರಣೆಗೆ ಬಾಕಿಯಿದೆ.

ತನ್ಮಧ್ಯೆ ಮಂಗಳವಾರ ಸಂಜೆ ತಮ್ಮ ಗೂಂಡಾಗಳೊಂದಿಗೆ ಬಂದಿದ್ದ ಟಿಡಿಪಿ ನಾಯಕರು ಬುಲ್‌ಡೋಝರ್ ನೆರವಿನಿಂದ ಮನೆಗಳನ್ನು ಕೆಡವಲು ಮುಂದಾಗಿದ್ದು, ದಲಿತ ಮಹಿಳೆ ಅದನ್ನು ಆಕ್ಷೇಪಿಸಿದ್ದರು. ಆಕೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಅವರು ಆಕೆ ನೆರವಿಗಾಗಿ ಕೂಗಿಕೊಳ್ಳುತ್ತಿದ್ದರೂ ಲೆಕ್ಕಿಸದೆ ವಿವಸ್ತ್ರಗೊಳಿಸಿ ಥಳಿಸಿದ್ದಾರೆ.

ಬುಧವಾರ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಕಾಂಗ್ರೆಸ್ ಸಂಸದ ಹಾಗೂ ದಲಿತ ನಾಯಕ ಹರ್ಷ ಕುಮಾರ್ ಅವರು, ದಲಿತರ ಭೂಮಿಯ ಕಬಳಿಸುವಿಕೆಯ ಹಿಂದೆ ಟಿಡಿಪಿ ಶಾಸಕ ಬಂಡಾರು ಸತ್ಯನಾರಾಯಣ ಅವರ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

ಬುಧವಾರವೂ ದಲಿತ ಕುಟುಂಬಗಳನ್ನು ಒಕ್ಕಲೆಬ್ಬಿಸಲು ಗುಂಪು ಪ್ರಯತ್ನಿಸಿದ್ದು, ಉಭಯ ಗುಂಪುಗಳ ನಡುವೆ ಘರ್ಷಣೆಗಳು ನಡೆದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News