×
Ad

ತನ್ನ ಲಕ್ನೋ ನಿವಾಸದ ಸಮೀಪ ಸೆಲ್ಫಿ ನಿಷೇಧಿಸಿದ ಆದಿತ್ಯನಾಥ್

Update: 2017-12-21 18:24 IST

ಲಕ್ನೋ, ಡಿ.21: ಲಕ್ನೋದ ಕಾಳಿದಾಸ್ ಮಾರ್ಗದಲ್ಲಿರುವ ತಮ್ಮ ಅಧಿಕೃತ ನಿವಾಸದ ರಸ್ತೆಯಲ್ಲಿ ಸೆಲ್ಫಿ ಕ್ಲಿಕ್ಕಿಸುವುದನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ನಿಷೇಧಿಸಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ರಸ್ತೆಯ ಆರಂಭದಲ್ಲಿ ಸೆಲ್ಫಿ ತೆಗೆಯುವುದರ ವಿರುದ್ಧ ರಾಜ್ಯ ಪೊಲೀಸ್ ಇಲಾಖೆ ಹಾಕಿದ್ದ ಎಚ್ಚರಿಕೆಯ ಫಲಕವನ್ನು ತೆಗೆದುಹಾಕಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ವಿಐಪಿ ಪ್ರದೇಶಗಳಲ್ಲಿ ಸೆಲ್ಫಿ ತೆಗೆಯುವುದು ಅಪರಾಧ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಈ ಫಲಕದಲ್ಲಿ ಎಚ್ಚರಿಸಲಾಗಿತ್ತು. ಈ ಬಗ್ಗೆ ಮೊಟ್ಟಮೊದಲು ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಇದನ್ನು ಸರಕಾರದಿಂದ ಉತ್ತರ ಪ್ರದೇಶದ ಜನರಿಗೆ ಹೊಸವರ್ಷದ ಉಡುಗೊರೆ ಎಂದು ವ್ಯಂಗ್ಯವಾಡಿದ್ದಾರೆ. ಜೊತೆಗೆ ಈ ನಿಷೇಧವನ್ನು ಉತ್ತರ ಪ್ರದೇಶದಲ್ಲಿ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಯುಪಿಕೊಕಾ ಕಾಯ್ದೆ ಜೊತೆ ಜೋಡಿಸಿದ್ದಾರೆ.

ಬಿಜೆಪಿ ಸರಕಾರವು ಕಳೆದ ವಾರ ವಿಧಾನಸಭೆಯಲ್ಲಿ ಮಂಡಿಸಿರುವ ಉತ್ತರ ಪ್ರದೇಶ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಯುಪಿಕೊಕಾ) ಯು ರಾಜಕೀಯ ವೈರಿಗಳನ್ನು ಸದೆಬಡಿಯುವ ಉದ್ದೇಶವನ್ನು ಹೊಂದಿದೆ ಎಂದು ವಿಪಕ್ಷಗಳು ಆರೋಪಿಸಿವೆ.

ಸರಕಾರವು ಮಹಾರಾಷ್ಟ್ರದಲ್ಲಿರುವ ಸಂಘಟಿತ ಅಪರಾಧದ ವಿರುದ್ಧವಿರುವ ಕಾನೂನನ್ನು ಕೂಲಂಕುಷವಾಗಿ ಅಧ್ಯಯನ ಮಾಡಿದ್ದು ಪ್ರಸ್ತಾಪಿತ ಯುಪಿಕೊಕಾ ಕಾಯ್ದೆಯಿಂದ ಮಾತ್ರ ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯ ಎಂದು ಆದಿತ್ಯನಾಥ್ ಸರಕಾರ ತಿಳಿಸಿದೆ.

ತಮ್ಮ ಆಡಳಿತಾವಧಿಯಲ್ಲಿ ರಾಜ್ಯದಲ್ಲಿ ನಡೆಯುವ ಅಪರಾಧ ಕೃತ್ಯಗಳನ್ನು ತಡೆಯುವಲ್ಲಿ ವಿಫಲವಾಗಿರುವ ಅಖಿಲೇಶ್ ಯಾದವ್, ಸದ್ಯ ಪ್ರಸ್ತಾಪಿಸಲಾಗಿರುವ ಕಾನೂನು ಜನರನ್ನು ವಂಚಿಸಲು ರೂಪಿಸಲಾಗಿದ್ದು ಇದರಿಂದ ಕಾನೂನು ಸುವ್ಯವಸ್ಥೆ ಸರಿಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News