ಉತ್ತರ ಪ್ರದೇಶದ ಪ್ರತಿ ಜಿಲ್ಲೆಯಲ್ಲಿ ರಚನೆಯಾಗಲಿದೆ ಗೋ ಸಂರಕ್ಷಣಾ ಸಮಿತಿ
ಲಕ್ನೋ, ಡಿ.21: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಗೋ ಸಂರಕ್ಷಣಾ ಸಮಿತಿಗಳನ್ನು ರಚಿಸಲು ಉತ್ತರ ಪ್ರದೇಶ ಸರಕಾರ ಚಿಂತನೆ ನಡೆಸಿದೆ. ಈ ಗೋ ಸಂರಕ್ಷಣಾ ಸಮಿತಿಗಳ ನೇತೃತ್ವವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ವಹಿಸಲಿದ್ದು ಆಯಾ ಪ್ರದೇಶಗಳಲ್ಲಿರುವ ಗೋಶಾಲೆಗಳು ಸಮರ್ಥವಾಗಿ ಕಾರ್ಯಾಚರಿಸುತ್ತಿವೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು ಈ ಸಮಿತಿಗಳ ಕಾರ್ಯವಾಗಿರುತ್ತದೆ ಎಂದು ಸರಕಾರದ ಪ್ರತಿನಿಧಿಗಳು ತಿಳಿಸಿದ್ದಾರೆ.
ಈ ಸಮಿತಿಗಳನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಸಲುವಾಗಿ ಬಯೋಗ್ಯಾಸ್, ಗೊಬ್ಬರ, ಸಾಬೂನುಗಳು, ಅಗರಬತ್ತಿ, ಸೊಳ್ಳೆ ಪ್ರತಿರೋಧಕ ವಸ್ತುಗಳು, ಫಿನೈಲ್ ಮುಂತಾದ ಗೋವಿನ ತ್ಯಾಜ್ಯಗಳಿಂದ ತಯಾರಿಸಲಾದ ವಸ್ತುಗಳನ್ನು ತಯಾರಿಸಿ ಮಾರಲಾಗುವುದು ಎಂದು ಮುಖ್ಯ ಕಾರ್ಯದರ್ಶಿ (ಪಶುಸಂಗೋಪನಾ ಇಲಾಖೆ) ಸುಧೀರ್ ಎಂ ಬೊಬ್ಡೆ ತಿಳಿಸಿದ್ದಾರೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ಮುನ್ನಡೆಸಲಿರುವ ಈ ಸಮಿತಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲೆಯ ಮುಖ್ಯ ಅಭಿವೃದ್ಧಿ ಅಧಿಕಾರಿ ಸಹಾಯಕ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿರುವರು. ಮುಖ್ಯ ಪಶು ಅಧಿಕಾರಿ ಕಾರ್ಯದರ್ಶಿ ಸದಸ್ಯರಾಗಿರುವರು ಎಂದು ಬೊಬ್ಡೆ ತಿಳಿಸಿದ್ದಾರೆ.