ಕ್ರಿಸ್‌ಮಸ್ ಆಚರಿಸುವಂತೆ ಹಿಂದೂ ವಿದ್ಯಾರ್ಥಿಗಳನ್ನು ಒತ್ತಾಯಿಸಬೇಡಿ
ಲಕ್ನೊ, ಡಿ.21: ಆಗ್ರಾದಲ್ಲಿರುವ ಕ್ರಿಶ್ಚಿಯನ್ ಮಿಷನರಿ ಶಾಲೆಗಳಲ್ಲಿ ಕಲಿಯುತ್ತಿರುವ ಹಿಂದೂ ವಿದ್ಯಾರ್ಥಿಗಳಿಗೆ ಕ್ರಿಸ್‌ಮಸ್ ಹಬ್ಬ ಆಚರಣೆಯಲ್ಲಿ ಪಾಲ್ಗೊಳ್ಳುವಂತೆ ಬಲವಂತಪಡಿಸಕೂಡದು ಎಂದು ಹಿಂದೂ ಜಾಗರಣ್ ಮಂಚ್ ಎಚ್ಚರಿಕೆ ನೀಡಿದೆ.
ತಮ್ಮ ಸಲಹೆಯನ್ನು ಪರಿಗಣಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಹಿಂದೂ ಜಾಗರಣ್ ಮಂಚ್(ಎಚ್‌ಜೆಎಂ)ನ ಜಿಲ್ಲಾ ಘಟಕದ ಮುಖಂಡರು ಶಾಲೆಯ ಪ್ರಾಂಶುಪಾಲರಿಗೆ ಪತ್ರ ಬರೆದಿದ್ದಾರೆ ಎಂದು ಎಚ್‌ಜೆಎಂನ ಆಗ್ರಾ ಘಟಕಾಧ್ಯಕ್ಷ ಅಮಿತ್ ಚೌಧರಿ ತಿಳಿಸಿದ್ದಾರೆ.
ಸಂತಾಕ್ಲಾಸ್‌ನಂತೆ ಬಟ್ಟೆ ಧರಿಸಿ ಶಾಲೆಗಳಲ್ಲಿ ನಡೆಯುವ ಕ್ರಿಸ್‌ಮಸ್ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಶಾಲಾ ಮುಖ್ಯಸ್ಥರು ಸೂಚಿಸಿರುವುದಾಗಿ ಮಿಷನರಿ ಶಾಲೆಗಳಲ್ಲಿ ಕಲಿಯುತ್ತಿರುವ ಹಿಂದೂ ವಿದ್ಯಾರ್ಥಿಗಳ ಪೋಷಕರು ದೂರು ನೀಡಿದ್ದಾರೆ . ಈ ಹಿನ್ನೆಲೆಯಲ್ಲಿ ಆಗ್ರಾದಲ್ಲಿರುವ ಸುಮಾರು 12ಕ್ಕೂ ಹೆಚ್ಚು ಮಿಷನರಿ ಶಾಲೆಗಳಿಗೆ ಪತ್ರ ಬರೆದಿದ್ದೇವೆ. ತಮ್ಮ ಪತ್ರವನ್ನು ಪರಿಗಣಿಸದಿದ್ದರೆ ಬೀದಿಗಿಳಿದು ಹೋರಾಡಿ, ಕ್ರೈಸ್ತ ಧರ್ಮ ಪ್ರಸಾರ ಮಾಡುವ ಶಾಲೆಗಳನ್ನು ಮುಚ್ಚಬೇಕೆಂದು ಪ್ರತಿಭಟನೆ ನಡೆಸುತ್ತೇವೆ ಎಂದು ಚೌಧರಿ ತಿಳಿಸಿದರು.
ಶಾಲೆಗಳು ಶಿಕ್ಷಣದ ಕುರಿತು ಮಾತ್ರ ಗಮನ ನೀಡಬೇಕು. ನಾವು ಯಾವುದೇ ಧರ್ಮ ಅಥವಾ ಹಬ್ಬದ ಆಚರಣೆಯನ್ನು ವಿರೋಧಿಸುತ್ತಿಲ್ಲ. ಆದರೆ ಕ್ರಿಶ್ಚಿಯನ್ ಧರ್ಮ ಪ್ರಸಾರದ ಮೂಲಕ ಮತಾಂತರಗೊಳಿಸುವ ಹುನ್ನಾರಕ್ಕೆ ನಮ್ಮ ವಿರೋಧವಿದೆ . ಇದರ ಬದಲು ಹಿಂದೂಗಳ ಹಬ್ಬದಂತೆ, ಕ್ರಿಸ್‌ಮಸ್ ದಿನದಂದು ರಜೆ ಘೋಷಿಸಲಿ ಎಂದು ಚೌಧರಿ ಹೇಳಿದರು.
ಆದರೆ ಈ ಆರೋಪಗಳನ್ನು ತಳ್ಳಿ ಹಾಕಿರುವ ಸೈಂಟ್ ಲಾರೆನ್ಸ್ ಸೆಮಿನರಿಯ ಧಾರ್ಮಿಕ ನಿರ್ದೇಶಕ ಫಾದರ್ ಮೋನ್ ಲಾಝರಸ್, ಕ್ರಿಶ್ಚಿಯನ್ ಆಡಳಿತದ ಶಾಲೆಗಳು ಕಾನೂನಿಗೆ ಒಳಪಟ್ಟು ಕಾರ್ಯನಿರ್ವಹಿಸುತ್ತವೆ. ಶಿಕ್ಷಣವನ್ನು ಒಂದು ಪವಿತ್ರಕಾರ್ಯದಂತೆ ಪರಿಗಣಿಸುವ ಸಮುದಾಯದ ವಿರುದ್ಧ ಆಧಾರರಹಿತ ಆರೋಪ ಹೊರಿಸಿ, ಬೆದರಿಕೆಯ ಪತ್ರ ಬರೆಯಲು ಇವರಿಗೆ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದ್ದಾರೆ.
ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶವಿಲ್ಲ. ಈ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ನಮಗೆ ಇದುವರೆಗೆ ಯಾವುದೇ ದೂರು ಸಲ್ಲಿಕೆಯಾಗಿಲ್ಲ. ಆದರೆ ಈ ಕುರಿತ ಸುದ್ದಿ ತಿಳಿದುಬಂದ ಕಾರಣ ಇದರ ಬಗ್ಗೆ ಗಮನ ಹರಿಸಲಾಗುವುದು. ಕ್ರಿಸ್‌ಮಸ್ ಹಬ್ಬ ಶಾಂತಿಯುತವಾಗಿ ಆಚರಿಸುವಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆಗ್ರಾದ ಪೊಲೀಸ್ ಮಹಾನಿರ್ದೇಶಕ ಕನ್ವರ್ ಅನುಪಮ್ ಸಿಂಗ್ ಹೇಳಿದ್ದಾರೆ.