×
Ad

ಯಾವುದೇ ಆಧಾರವಿಲ್ಲದೆ ಯುಪಿಎ ಸರಕಾರದ ವಿರುದ್ಧ 2ಜಿ ಅಪಪ್ರಚಾರ: ಮನಮೋಹನ್ ಸಿಂಗ್

Update: 2017-12-21 19:23 IST

ಹೊಸದಿಲ್ಲಿ,ಡಿ.21: 2ಜಿ ತರಂಗಗುಚ್ಛಕ್ಕೆ ಸಂಬಂಧಿಸಿದಂತೆ ಯುಪಿಎ ಸರಕಾರದ ವಿರುದ್ಧದ ಭಾರೀ ಅಪಪ್ರಚಾರಕ್ಕೆ ಯಾವುದೇ ಬುನಾದಿಯೇ ಇರಲಿಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಗುರುವಾರ ಇಲ್ಲಿ ಹೇಳಿದರು.

2ಜಿ ಪ್ರಕರಣದಲ್ಲಿ ವಿಶೇಷ ಸಿಬಿಐ ನ್ಯಾಯಾಲಯದ ತೀರ್ಪು ಹೊರಬಿದ್ದ ಬಳಿಕ ಸುದ್ದಿಗಾರರೊಡನೆ ಮಾತನಾಡಿದ ಅವರು, ‘‘ಈ ಬಗ್ಗೆ ಹೆಚ್ಚಿಗೆ ಹೇಳಿಕೊಳ್ಳಲು ನಾನು ಬಯಸುವುದಿಲ್ಲ. ನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು. ನ್ಯಾಯಾಲಯವು ಅತ್ಯಂತ ಸ್ಪಷ್ಟ ತೀರ್ಪು ನೀಡಿರುವುದು ನನಗೆ ಸಂತಸವನ್ನುಂಟು ಮಾಡಿದೆ. ಯುಪಿಎ ಸರಕಾರದ ವಿರುದ್ಧ ಮಾಡಲಾಗುತ್ತಿದ್ದ ಭಾರೀ ಅಪಪ್ರಚಾರಕ್ಕೆ ಆಧಾರವೇ ಇರಲಿಲ್ಲ. ನ್ಯಾಯಾಲಯದ ತೀರ್ಪೇ ಎಲ್ಲವನ್ನೂ ಹೇಳುತ್ತಿದೆ ’’ಎಂದರು.

ನ್ಯಾಯವಿನ್ನೂ ಉಳಿದಿದೆ:ಕನಿಮೋಳಿ

 ಗುರುವಾರ ವಿಶೇಷ ನ್ಯಾಯಾಲಯವು ನೀಡಿದ ತೀರ್ಪನ್ನು ಸ್ವಾಗತಿಸಿದ 2ಜಿ ಪ್ರಕರಣದ ಆರೋಪಿಗಳಲ್ಲಿ ಓರ್ವರಾಗಿದ್ದ ಡಿಎಂಕೆ ರಾಜ್ಯಸಭಾ ಸದಸ್ಯೆ ಕನಿಮೋಳಿ ಅವರು, ಈ ತೀರ್ಪು ತನ್ನ ವಿರುದ್ಧ ಮಾಡಲಾಗಿದ್ದ ಎಲ್ಲ ಆರೋಪಗಳಿಗೆ ಉತ್ತರವಾಗಿದೆ ಎಂದು ಹೇಳಿದರು.

‘‘‘ನ್ಯಾಯವಿನ್ನೂ ಉಳಿದುಕೊಂಡಿರುವುದು ನಮಗೆ ತುಂಬ ಆನಂದವನ್ನು ತಂದಿದೆ. ಇಂದು ಡಿಎಂಕೆ ಮತ್ತು ನಮ್ಮ ಕುಟುಂಬಕ್ಕೂ ಅತ್ಯಂತ ಮುಖ್ಯ ದಿನವಾಗಿದೆ. ತೀರ್ಪು ನಮ್ಮ ಮೇಲಿನ ಎಲ್ಲ ಆರೋಪಗಳು ಮತ್ತು ನಾವು ಎದುರಿಸುತ್ತಿದ್ದ ಸಮಸ್ಯೆಗಳಿಗೆ ಉತ್ತರವಾಗಿದೆ ’’ ಎಂದರು.

ತೀರ್ಪಿನಿಂದ ಸಂತುಷ್ಟ:ಎ.ರಾಜಾ

2ಜಿ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪನ್ನು ಶ್ಲಾಘಿಸಿದ ಮಾಜಿ ದೂರಸಂಪರ್ಕ ಸಚಿವ ಹಾಗೂ ಡಿಎಂಕೆ ನಾಯಕ ಎ.ರಾಜಾ ಅವರು, ಈ ತೀರ್ಪು ತನಗೆ ಸಂತಸವನ್ನುಂಟು ಮಾಡಿದೆ ಎಂದು ಹೇಳಿದರು.

 ಪ್ರಕರಣದ ಆರೋಪಿಗಳಲ್ಲೋರ್ವರಾಗಿದ್ದ ರಾಜಾ ತೀರ್ಪು ಪ್ರಕಟಗೊಂಡ ನಂತರ ನ್ಯಾಯಾಲಯದಿಂದ ಹೊರಬರುತ್ತಿದ್ದಂತೆ ತನ್ನನ್ನು ಮುತ್ತಿಕೊಂಡ ಸುದ್ದಿಗಾರರಿಗೆ, ‘‘ತೀರ್ಪನ್ನು ಓದಿ ನಂತರ ಮಾತನಾಡುತ್ತೇನೆ. ಎಲ್ಲರೂ ಸಂತೋಷದಲ್ಲಿರುವುದನ್ನು ನೀವೇ ನೋಡುತ್ತಿದ್ದೀರಿ ’’ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News