×
Ad

ಸ್ವಚ್ಛ ಭಾರತ ಅಭಿಯಾನಕ್ಕೆ 666 ಕೋಟಿ ರೂ. ದೇಣಿಗೆ ಸಂಗ್ರಹ

Update: 2017-12-21 21:05 IST

ಹೊಸದಿಲ್ಲಿ, ಡಿ.21: 2014ರಿಂದ ಕಾರ್ಪೊರೇಟ್ ಕ್ಷೇತ್ರದಿಂದ ಹಾಗೂ ವೈಯಕ್ತಿಕವಾಗಿ ಒಟ್ಟು 666 ಕೋಟಿ ರೂ. ದೇಣಿಗೆಯನ್ನು ಸ್ವಚ್ಛ ಭಾರತ್ ಕೋಶ(ಎಸ್‌ಬಿಕೆ)ಕ್ಕೆ ಪಡೆಯಲಾಗಿದೆ ಎಂದು ಸರಕಾರ ತಿಳಿಸಿದೆ.

ಸ್ವಚ್ಛ ಭಾರತ ಅಭಿಯಾನದ ಗುರಿ ಸಾಧನೆಗಾಗಿ ಸರಕಾರ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ನಿಧಿಯಡಿ ಸಂಗ್ರಹಿಸಿರುವ ಮೊತ್ತದ ಕುರಿತು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಸಚಿವ ರಮೇಶ್ ಜಿಗಜಿಣಗಿ ಲೋಕಸಭೆಯಲ್ಲಿ ವಿವರಿಸಿದರು.

  2014-15ರಲ್ಲಿ 15,961.19 ಲಕ್ಷ ರೂ., 2015-16ರಲ್ಲಿ 25,324.64 ಲಕ್ಷ ರೂ., 2016-17ರಲ್ಲಿ 24,504.86 ಲಕ್ಷ ರೂ. ಹಾಗೂ 2017-18ರಲ್ಲಿ ಇದುವರೆಗೆ 877.01 ಲಕ್ಷ ರೂ. ದೇಣಿಗೆ ಪಡೆಯಲಾಗಿದೆ ಎಂದು ಸಚಿವರು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದರು.

 ಇದರಲ್ಲಿ 633.98 ಕೋಟಿ ರೂ. ಮೊತ್ತವನ್ನು ಸ್ವಚ್ಛಭಾರತ ಮಿಷನ್(ಎಸ್‌ಬಿಎಂ)ಗೆ ವಿನಿಯೋಗಿಸಲಾಗಿದೆ. ಸಂಸ್ಥೆಗಳು ಹಾಗೂ ವೈಯಕ್ತಿಕವಾಗಿ ಸ್ವಚ್ಛ ಭಾರತ ಕಾರ್ಯಕ್ರಮ ಅನುಷ್ಠಾನಗೊಳಿಸಲು ಎಸ್‌ಬಿಎಂ ಮಾರ್ಗದರ್ಶಿ ಸೂತ್ರದಲ್ಲಿ ಅವಕಾಶ ನೀಡಲಾಗಿದೆ ಎಂದು ಸಚಿವರು ತಿಳಿಸಿದರು. ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ನಿಧಿಯಡಿ ಸ್ವಚ್ಚ ಭಾರತ ಕೋಶಕ್ಕೆ ದೇಣಿಗೆ ನೀಡುವಂತೆ ಕಾರ್ಪೊರೇಟ್ ಕ್ಷೇತ್ರವನ್ನು ವಿನಂತಿಸಲಾಗಿದೆ. ದೇಶದಾದ್ಯಂತ ಚಾರಿತ್ರಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವದ ಪ್ರದೇಶಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವ ಕಾರ್ಯವನ್ನು ‘ಪ್ರತಿಷ್ಟಿತ ಪ್ರದೇಶಗಳನ್ನು ಸ್ವಚ್ಛಗೊಳಿಸುವ ಯೋಜನೆ’ಯಡಿ ಕೈಗೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News