'ಡಾಕೂ' ಆಗಲಿರುವ ರಣದೀಪ್

Update: 2017-12-22 13:32 GMT

‘ಮೆಔರ್ ಚಾರ್ಲ್ಸ್’ ಹಾಗೂ ‘ಸರಬ್‌ಜಿತ್’ ಚಿತ್ರದಲ್ಲಿ ರಿಯಲ್‌ಲೈಫ್ ಪಾತ್ರಗಳನ್ನು ನಿರ್ವಹಿಸಿದ್ದ ನಟ ರಣದೀಪ್ ಹೂಡಾ, ಮಧುರೀತಾ ಆನಂದ್ ನಿರ್ದೇಶನದ ಇನ್ನೊಂದು ಬಯೋಪಿಕ್ ಚಿತ್ರ ‘ಸುಲ್ತಾನಾ ಡಾಕೂ’ವಿಗಾಗಿ ಬಣ್ಣ ಹಚ್ಚಲು ಸಿದ್ಧರಾಗುತ್ತಿದ್ದಾರೆ.

2018ರ ಎಪ್ರಿಲ್‌ನಲ್ಲಿ ಸೆಟ್ಟೇರಲಿರುವ ಈ ಚಿತ್ರ ಸುಜಿತ್ ಸರಾಫ್‌ರ ‘ದಿ ಕನ್‌ಫೆಶನ್ಸ್ ಆಫ್ ಸುಲ್ತಾನಾ ಡಾಕೂ’ಆಂಗ್ಲ ಕಾದಂಬರಿಯನ್ನು ಆಧರಿಸಿದೆ. 1920ರ ದಶಕದಲ್ಲಿ ಈಗಿನ ಉತ್ತರಪ್ರದೇಶ ಹಾಗೂ ಉತ್ತರಾಖಂಡದ ಭಾಗಗಳ ಜನರನ್ನು ಬೆಚ್ಚಿಬೀಳಿಸಿದ್ದ ಡಕಾಯಿತನಾದ ಸುಲ್ತಾನಾ ಹಾಗೂ ಆತನ ಜೀವದ ಗೆಳೆಯನಂತಿದ್ದ ‘ಮಿಂಚಿನವೇಗದ’ ಕುದುರೆ ಚೇತಕ್‌ನ ಕುರಿತಾದ ಕಥಾವಸ್ತುವುಳ್ಳದ್ದಾಗಿದೆ. ಜಮೀನುದಾರರು, ಶ್ರೀಮಂತರಿಂದ ದೋಚುತ್ತಿದ್ದ ಸಂಪತ್ತಿನ ಒಂದು ಭಾಗವನ್ನು ಸುಲ್ತಾನಾ ಬಡವರಿಗೆ ಹಂಚುತ್ತಿದ್ದನೆಂಬ ದಂತಕತೆಗಳನ್ನು ಆಧರಿಸಿ ಈ ಚಿತ್ರ ನಿರ್ಮಾಣವಾಗಿದೆ.

ಉತ್ತರಪ್ರದೇಶದ ತೆರಾಯಿ ಪ್ರಾಂತದಲ್ಲಿ ಚಿತ್ರದ ಬಹುತೇಕ ಭಾಗ ಚಿತ್ರೀಕರಣಗೊಳ್ಳಲಿದೆ. ಕುದುರೆಸವಾರಿಯಲ್ಲಿ ನಿಷ್ಣಾತನಾಗಿರುವ ರಣದೀಪ್ ಹೂಡಾ, ಆ್ಯಕ್ಷನ್ ದೃಶ್ಯಗಳನ್ನು ಡಮ್ಮಿ ಬಳಸದೆಯೇ ನಿರ್ವಹಿಸಲಿದ್ದಾರಂತೆ. ‘ಸುಲ್ತಾನಾ ಡಾಕೂ’ವಿನ ಕೆಲವು ಮಹತ್ವದ ಆ್ಯಕ್ಷನ್ ಹಾಗೂ ಕುದುರೆ ರೇಸಿಂಗ್ ಸನ್ನಿವೇಶಗಳು ಕಝಕಿಸ್ತಾನದಲ್ಲಿ ಚಿತ್ರೀಕರಣಗೊಳ್ಳಲಿದೆ. ರಣದೀಪ್ ಹೂಡಾ ಈ ಮೊದಲು ರಾಜಾ ರವಿವರ್ಮಾ, ಚಾರ್ಲ್ಸ್ ಶೋಭರಾಜ್, ಸರಬ್‌ಜಿತ್‌ನಂತಹ ರಿಯಲ್‌ಲೈಫ್ ಪಾತ್ರಗಳನ್ನು ಅದ್ಭುತವಾಗಿ ನಿರ್ವಹಿಸಿ ಸೈ ಅನಿಸಿಕೊಂಡಿದ್ದರು. ದೀಪಾ ಮೆಹ್ತಾ ನಿರ್ದೇಶನದ ಆಂಗ್ಲ-ಪಂಜಾಬಿ ಚಿತ್ರ ಬಿಬಾಬಾಯ್ಸಾನಲ್ಲೂ ಅವರು, ಕೆನಡದ ಕುಖ್ಯಾತ ಗ್ಯಾಂಗ್‌ಸ್ಟರ್ ಜೀತ್‌ಜೋಹರ್‌ನ ಪಾತ್ರ ನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News