'ಪುಲಿಮುರುಗನ್' ಹಾಡುಗಳು ಆಸ್ಕರ್ ಸ್ಪರ್ಧೆಗೆ

Update: 2017-12-22 12:42 GMT

ಮೋಹನ್‌ಲಾಲ್ ಅಭಿಮಾನಿಗಳಿಗೊಂದು ಸಂತಸದ ಸುದ್ದಿ. ಮಲಯಾಳಂನ ಈ ಖ್ಯಾತ ನಟ ನಟಿಸಿದ್ದ ಸೂಪರ್‌ಡ್ಯೂಪರ್ ಹಿಟ್ ಚಿತ್ರ ಪುಲಿಮುರುಗನ್‌ನ ಎರಡು ಹಾಡುಗಳು ಆಸ್ಕರ್ ಪ್ರಶಸ್ತಿಗೆ ನಾಮಕರಣಗೊಂಡಿವೆ. ‘ಒರಿಜಿನಲ್ ಸಾಂಗ್ಸ್’ ವಿಭಾಗದಲ್ಲಿ ಈ ಎರಡು ಹಾಡುಗಳು ಸ್ಪರ್ಧೆಗೆ ಆಯ್ಕೆಯಾಗಿವೆ. ‘ಕಾಡಾನಾಯುಂ ಕಾಲ್‌ಚಿಲಂಬೆ’ ಹಾಗೂ ‘ಮಾನತ್ತೆ ಮಾರಿಕುರುಂಬೆ’ ಎಂಬ ಸಾಲಿನೊಂದಿಗೆ ಆರಂಭವಾಗುವ ಈ ಹಾಡುಗಳು ಆಸ್ಕರ್‌ಗೆ ನಾಮಕರಣಗೊಂಡಿರುವುದು, ಇಡೀ ಭಾರತೀಯ ಚಿತ್ರರಂಗವೇ ಮಲಯಾಳಂ ಚಿತ್ರಗಳತ್ತ ತಿರುಗಿನೋಡುವಂತೆ ಮಾಡಿದೆ. ಈ ಸಲದ ಆಸ್ಕರ್ ಸ್ಪರ್ಧೆಗೆ ಒಟ್ಟು 70 ಹಾಡುಗಳು ನಾಮಕರಣ ಗೊಂಡಿವೆ.

‘ಉಸ್ತಾದ್ ಹೊಟೇಲ್’, ‘ಬೆಂಗಳೂರು ಡೇಸ್’, ‘ಚಾರ್ಲಿ’, ‘ರಂಡುಪೇರ್’ ನಂತಹ ಜನಪ್ರಿಯ ಮಲಯಾಳಂ ಚಿತ್ರಗಳಿಗೆ ಟ್ಯೂನ್ಸ್ ನೀಡಿರುವ ಗೋಪಿ ಸುಂದರ್, ‘ಪುಲಿಮುರುಗನ್’ಗೆ ಸಂಗೀತ ಸಂಯೋಜಿಸಿದ್ದರು. ಈ ಹಿಂದೆ ಗೋಪಿಸುಂದರ್ ಉಸ್ತಾದ್ ಹೊಟೇಲ್, ಬೆಂಗಳೂರು ಡೇಸ್ ಹಾಗೂ ಚಾರ್ಲಿ ಚಿತ್ರದ ಸಂಗೀತಕ್ಕಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು.

ತಾನು ಟ್ಯೂನ್ಸ್ ನೀಡಿರುವ ಹಾಡುಗಳು ಆಸ್ಕರ್ ಸ್ಪರ್ಧೆಗೆ ಆಯ್ಕೆಯಾಗಿರುವುದು ಗೋಪಿಸುಂದರ್‌ಗೆ ಇನ್ನಿಲ್ಲದ ಖುಷಿ ತಂದಿದೆ. ತನಗಾಗಿರುವ ಸಂತಸವನ್ನು ವ್ಯಕ್ತಪಡಿಸಲು ಪದಗಳೇ ಇಲ್ಲವೆಂದು ಹೇಳುವ ಅವರು, ದೇವರ ದಯೆಯಿಂದ ಇದು ಸಾಧ್ಯವಾಗಿದೆ ಎಂದಿದ್ದಾರೆ. 2016ರ ಆಕ್ಟೋಬರ್‌ನಲ್ಲಿ ಬಿಡುಗಡೆಯಾದ ‘ಪುಲಿಮುರುಗನ್’ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿತ್ತು 100 ಕೋಟಿ ರೂ. ಗಳಿಸಿದ ಮೊದಲ ಮಲಯಾಳಂ ಚಿತ್ರವೆಂಬ ದಾಖಲೆಯನ್ನು ಅದು ಬರೆದಿದೆ. ಮೋಹನ್‌ಲಾಲ್ ನಾಯಕನಾಗಿರುವ ಈ ಚಿತ್ರದಲ್ಲಿ ಕಮಲಿನಿ ಮುಖರ್ಜಿ ಹಾಗೂ ಜಗಪತಿ ಬಾಬು ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News