ರೋಹಿಣಿ ಆಶ್ರಮದಲ್ಲಿ ಅಕ್ರಮ ಬಂಧನದಲ್ಲಿದ್ದ 40ಕ್ಕೂ ಹೆಚ್ಚು ಬಾಲಕಿಯರ ರಕ್ಷಣೆ

Update: 2017-12-22 13:09 GMT

ಹೊಸದಿಲ್ಲಿ, ಡಿ.22: ದಿಲ್ಲಿ ಮಹಿಳಾ ಆಯೋಗ, ಶಿಶು ಕಲ್ಯಾಣ ಸಮಿತಿ ಮತ್ತು ದಿಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ರೋಹಿಣಿ ಪ್ರದೇಶದಲ್ಲಿರುವ ಆಧ್ಯಾತ್ಮಿಕ ವಿಶ್ವವಿದ್ಯಾಲಯ ಎಂಬ ಹೆಸರಿನ ಆಶ್ರಮದಿಂದ 40ಕ್ಕೂ ಹೆಚ್ಚು ಬಾಲಕಿಯರನ್ನು ರಕ್ಷಿಸಲಾಗಿದೆ.

  ವೀರೇಂದರ್ ದೀಕ್ಷಿತ್ ಮಾಲಕತ್ವದ ಸಂಸ್ಥೆಯಲ್ಲಿ ಯುವತಿಯರು ಹಾಗೂ ಬಾಲಕಿಯರನ್ನು ಅಕ್ರಮವಾಗಿ ಕೂಡಿ ಹಾಕಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ, ಸಂಸ್ಥೆಯ ಕಟ್ಟಡವನ್ನು ಶೋಧಿಸಲು ಸಮಿತಿಯೊಂದನ್ನು ರಚಿಸಿದ ಬಳಿಕ ಈ ಕಾರ್ಯಾಚರಣೆ ನಡೆದಿದೆ. ದಿಲ್ಲಿ ಹೈಕೋರ್ಟ್‌ನ ಸೂಚನೆ ಮೇರೆಗೆ ರಚಿಸಲಾಗಿರುವ ಸಮಿತಿಯು ದಿಲ್ಲಿ ಮಹಿಳಾ ಆಯೋಗ(ಡಿಸಿಡಬ್ಲೂ)ದ ಮುಖ್ಯಸ್ಥರು ಹಾಗೂ ವಕೀಲರನ್ನು ಒಳಗೊಂಡಿದೆ.

   ತನ್ನ ಮೇಲೆ ವೀರೇಂದರ್ ದೀಕ್ಷಿತ್ ಅತ್ಯಾಚಾರ ನಡೆಸಿರುವುದಾಗಿ 13ರ ಹರೆಯದ ಬಾಲಕಿ ದೂರು ನೀಡಿದ್ದು ಇಂತಹ ಬಾಬಾಗಳ ವಿರುದ್ಧ ಕ್ರಮ ಕೈಗೊಳ್ಳಲು ಇದು ಸಕಾಲವಾಗಿದೆ. ಸಂತ್ರಸ್ತರ ರಕ್ಷಣೆಗಾಗಿ ತೆರಳಿದ ತಮ್ಮನ್ನೂ ಕೆಲ ಹೊತ್ತು ದಿಗ್ಭಂಧನದಲ್ಲಿರಿಸಲಾಗಿದೆ . ಆದರೂ ನಾವು ಅಲ್ಲಿದ್ದ ಬಾಲಕಿಯರನ್ನು ರಕ್ಷಿಸಲು ಸಾಧ್ಯವಾಗಿದೆ ಎಂದು ಡಿಸಿಡಬ್ಲ್ಯೂ ಮುಖ್ಯಸ್ಥೆ ಸ್ವಾತಿ ಮಳಿವಾಳ್ ತಿಳಿಸಿದ್ದಾರೆ.

  ಅಲ್ಲಿ ಔಷಧಿ ಹಾಗೂ ಸಿರಿಂಜ್‌ಗಳ ದಾಸ್ತಾನು ಕಂಡುಬಂದಿದ್ದು ಬಾಲಕಿಯರಿಗೆ ಮತ್ತು ಬರಿಸುವ ಔಷಧ ನೀಡುತ್ತಿದ್ದ ಬಗ್ಗೆ ಸಂಶಯವಿದೆ ಎಂದೂ ಅವರು ತಿಳಿಸಿದ್ದಾರೆ.

 ಸಿಡಬ್ಯ್ಲೂಸಿ ಮತ್ತು ದಿಲ್ಲಿ ಪೊಲೀಸರ ನೆರವಿನಿಂದ , ವೀರೇಂದರ್ ದೀಕ್ಷಿತ್ ವೀರೇಂದರ್ ದೀಕ್ಷಿತ್ ಆಶ್ರಮದಲ್ಲಿದ್ದ 41 ಅಪ್ರಾಪ್ತ ಬಾಲಕಿಯರನ್ನು 3 ದಿನಗಳ ಭಾರೀ ಕಾರ್ಯಾಚರಣೆ ಬಳಿಕ ಸುರಕ್ಷಿತವಾಗಿ ಹೊರತರಲಾಗಿದೆ. ಈ ಬಾಲಕಿಯರನ್ನು ಆಪ್ತ ಸಮಾಲೋಚನೆಗೊಳಪಡಿಸಲಾಗುವುದು ಹಾಗೂ ಅವರ ಪೋಷಕರನ್ನು ಕರೆಸಿಕೊಂಡು ಬಾಲಕಿಯರ ಪ್ರಾಯವನ್ನು ನಿರ್ಧರಿಸಲಾಗುವುದು.ಈ ಆಶ್ರಮವನ್ನು ಮುಚ್ಚಿ ವೀರೇಂದರ್ ದೀಕ್ಷಿತ್ ನನ್ನು ಬಂಧಿಸಬೇಕು ಎಂದು ಸ್ವಾತಿ ಮಳಿವಾಳ್ ಗುರುವಾರ ಟ್ವೀಟ್ ಮಾಡಿದ್ದರು.

     ಈ ಬಾಲಕಿಯರನ್ನು ಆಶ್ರಮದೊಳಗೆ ಕೂಡಿಹಾಕಿ, ಲೈಂಗಿಕ ಕಾರ್ಯಕರ್ತೆಯರಂತೆ ಬಳಸಿಕೊಳ್ಳಲಾಗುತ್ತಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಸ್ಥಳಕ್ಕೆ ವಿಶ್ವವಿದ್ಯಾನಿಲಯ ಎಂದು ಹೆಸರಿಡಲಾಗಿದೆ. ಇಲ್ಲಿರುವ ಬಾಲಕಿಯರನ್ನು ಬಸ್‌ಗಳಲ್ಲಿ ಇತರ ಪ್ರದೇಶಗಳಿಗೆ ಸಾಗಿಸಿ ಅಲ್ಲಿ ಲೈಂಗಿಕ ಕಾರ್ಯಕರ್ತೆಯರಂತೆ ಕೆಲಸ ಮಾಡಲು ತರಬೇತಿ ನೀಡಲಾಗುತ್ತಿತ್ತು. ಇಲ್ಲಿರುವ ಬಾಲಕಿಯರು ತಮ್ಮ ಪೋಷಕರನ್ನು ಭೇಟಿಯಾಗಲೂ ಅವಕಾಶ ಇರಲಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಆಶ್ರಮದ ಕಾರ್ಯಚಟುವಟಿಕೆಯ ಬಗ್ಗೆ ತನಿಖೆ ನಡೆಸುವಂತೆ ಈಗಾಗಲೇ ದಿಲ್ಲಿ ಹೈಕೋರ್ಟ್ ಸಿಬಿಐಗೆ ನಿರ್ದೇಶಿಸಿದೆ.

ಬಾಕ್ಸ್:

ವೀರೇಂದರ್ ದೀಕ್ಷಿತ್ ನನ್ನು ಪತ್ತೆಹಚ್ಚಲು ಸಿಬಿಐಗೆ ಸೂಚನೆ

ಅಕ್ರಮವಾಗಿ ಬಾಲಕಿಯರನ್ನು ಕೂಡಿಹಾಕಲಾಗಿದೆ ಎನ್ನಲಾಗಿರುವ ಆಶ್ರಮದ ಸಂಸ್ಥಾಪಕ, ವೀರೇಂದರ್ ದೇವ್ ದೀಕ್ಷಿತ್‌ನನ್ನು ಪತ್ತೆಹಚ್ಚುವಂತೆ ದಿಲ್ಲಿ ಹೈಕೋರ್ಟ್ ಸಿಬಿಐಗೆ ಸೂಚಿಸಿದೆ.

ದೀಕ್ಷಿತ್‌ನನ್ನು ಪತ್ತೆಹಚ್ಚಿ ಜನವರಿ 4ರಂದು ತನ್ನೆದುರು ಹಾಜರು ಪಡಿಸುವಂತೆ ಪ್ರಭಾರ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಹಾಗೂ ನ್ಯಾಯಮೂರ್ತಿ ಸಿ.ಹರಿಶಂಕರ್ ಅವರನ್ನೊಳಗೊಂಡ ನ್ಯಾಯಪೀಠ ಸೂಚಿಸಿದೆ.

   ಆಶ್ರಮದ ಸಾಧ್ವಿಗಳನ್ನು ಅಕ್ರಮವಾಗಿ ಕೂಡಿ ಹಾಕಿಲ್ಲ ಎಂಬ ಆಶ್ರಮದ ಅಧಿಕಾರಿಗಳ ಹೇಳಿಕೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ ಹೈಕೋರ್ಟ್, ಹಾಗಿದ್ದರೆ ಅವರನ್ನು ಕೋಣೆಯಲ್ಲಿ ಬೀಗ ಜಡಿದು ಕೂಡಿ ಹಾಕಿದ್ದೇಕೆ , ಮತ್ತು ತಾನು ಪ್ರಾಮಾಣಿಕ ಎಂದು ಹೇಳಿಕೊಳ್ಳುತ್ತಿರುವ ಸಂಸ್ಥಾಪಕ ತಲೆಮರೆಸಿಕೊಂಡಿರುವುದೇಕೆ ಎಂದೂ ಪ್ರಶ್ನಿಸಿತು. ಆಶ್ರಮದ ಹಣಕಾಸು ವ್ಯವಹಾರದ ಬಗ್ಗೆ ಶೋಧ ನಡೆಸಿ, ಆಶ್ರಮ ನಡೆಸಲು ಎಲ್ಲಿಂದ ಆರ್ಥಿಕ ನೆರವು ಪಡೆಯಲಾಗುತ್ತಿತ್ತು ಎಂಬುದನ್ನು ತನಿಖೆ ನಡೆಸುವಂತೆ ನ್ಯಾಯಪೀಠ ತಿಳಿಸಿದೆ.

                                        

                                    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News