ಬಂಗಾಳಿ ಚಿತ್ರದ ಪಾತ್ರಗಳ ರಾಮ, ಸೀತಾ ಹೆಸರಿಗೆ ವಿರೋಧ
ಹೊಸದಿಲ್ಲಿ, ಡಿ.22: ಬಂಗಾಳಿ ಚಿತ್ರವೊಂದರಲ್ಲಿರುವ ರಾಮ ಹಾಗು ಸೀತಾ ಎಂಬ ಪಾತ್ರಗಳ ಹೆಸರನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿರುವ ಹಿಂದೂ ಜಾಗರಣ್ ಮಂಚ್, ಇಲ್ಲದಿದ್ದರೆ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಬೆದರಿಕೆಯೊಡ್ಡಿದೆ.
“ರೋಂಗ್ ಬೆರೋಂಗರ್ ಕೋರಿ’ ಎನ್ನುವ ಬಂಗಾಳಿ ಚಿತ್ರದಲ್ಲಿ ಎರಡು ಪಾತ್ರಗಳ ಹೆಸರು ರಾಮ ಮತ್ತು ಸೀತಾ ಎಂದಾಗಿದೆ. ಈ ಹೆಸರುಗಳನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿದ ಹಿಂದೂ ಜಾಗರಣ್ ಮಂಚ್ ಸ್ಥಳೀಯ ಸಿಬಿಎಫ್ ಸಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿತು.
ಆದರೆ ಹೆಸರು ಬದಲಾವಣೆಗೆ ನಿರ್ದೇಶಕ ನಿರಾಕರಿಸಿದ್ದು, ಪ್ರತಿಭಟನೆಯು ತನ್ನ ಸೃಜನಶೀಲ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ ಎಂದಿದ್ದಾರೆ.
ಚಿತ್ರದಲ್ಲಿ ನಾಲ್ಕು ಕಥೆಗಳಿವೆ ಹಾಗು ಇದಕ್ಕೆ ಯಾವುದೇ ಪೌರಾಣಿಕ ಹಿನ್ನೆಲೆಯಿಲ್ಲ. ಒಂದು ಕಥೆಯ ಪಾತ್ರಗಳಿಗೆ ರಾಮ ಹಾಗು ಸೀತಾ ಎಂದು ಹೆಸರಿಡಲಾಗಿದೆ ಎಂದವರು ಹೇಳಿದ್ದಾರೆ.
“ರಾಮ, ಲಕ್ಷ್ಮಣ, ಸೀತಾ, ಕಾರ್ತಿಕ್, ಸರಸ್ವತಿ ಎಂಬ ಹೆಸರುಗಳಿರುವ ಜನರನ್ನು ನಾವು ಪ್ರತಿನಿತ್ಯ ನೋಡುವುದಿಲ್ಲವೇ?, ಮಕ್ಕಳಿಗೂ ನಾವು ಇಂತಹ ಹೆಸರುಗಳನ್ನಿಡುತ್ತೇವೆ. ಈ ಹೆಸರುಗಳನ್ನೂ ಬದಲಾಯಿಸಲು ಅವರು ಬಯಸಿದ್ದಾರೆಯೇ” ಎಂದವರು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಹಿಂದೂ ಜಾಗರಣ್ ಮಂಚ್ ಪಶ್ಚಿಮ ಬಂಗಾಳ ಘಟಕದ ವಕ್ತಾರ ವಿವೇಕ್ ಸಿಂಗ್ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರಿಗೆ ಪತ್ರ ಬರೆದಿದ್ದು, ಚಿತ್ರದಲ್ಲಿರುವ ರಾಮ ಸೀತಾ ಹೆಸರುಗಳು ಹಿಂದೂಗಳ ಭಾವನೆಗೆ ಧಕ್ಕೆ ತರುತ್ತದೆ ಎಂದಿದ್ದಾರೆ.