ಪ್ರಧಾನಿ ಹೇಳಿಕೆ ವಿರುದ್ಧ ಮುಂದುವರಿದ ಪ್ರತಿಭಟನೆ
ಹೊಸದಿಲ್ಲಿ, ಡಿ.22: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆಯನ್ನು ವಿರೋಧಿಸಿ ಲೋಕಸಭೆಯಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ ಐದನೇ ದಿನವೂ ಮುಂದುವರಿದಿದೆ. ಇದರ ಜೊತೆಗೆ, 2 ಜಿ ಹಗರಣದಲ್ಲಿ ಕಾಂಗ್ರೆಸ್ ವಿರುದ್ಧ ಮಾಡಿರುವ ಆರೋಪದ ಬಗ್ಗೆ ಬಿಜೆಪಿ ಕ್ಷಮೆ ಕೋರಬೇಕೆಂದೂ ಲೋಕಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಆಗ್ರಹಿಸಿದರು.
ಶುಕ್ರವಾರ ಸದನ ಸಮಾವೇಶಗೊಂಡು ಪ್ರಶ್ನೋತ್ತರ ಅವಧಿಯನ್ನು ಕೈಗೆತ್ತಿಕೊಳ್ಳುತ್ತಿರುವಂತೆಯೇ ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ನುಗ್ಗಿ, ಮೋದಿ ಕ್ಷಮೆಗೆ ಪಟ್ಟು ಹಿಡಿದರು. ಇದರ ಜೊತೆಗೆ, ಯುಪಿಎ ಆಡಳಿತಾವಧಿಯಲ್ಲಿ 2 ಜಿ ಹಗರಣ ನಡೆದಿದೆ ಎಂದು ಬಿಜೆಪಿ ಮಿಥ್ಯಾರೋಪ ಮಾಡಿದ್ದು ಈ ಬಗ್ಗೆ ಪಕ್ಷ ಕ್ಷಮೆ ಯಾಚಿಸಬೇಕೆಂದೂ ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು. ಕಾಂಗ್ರೆಸ್ ಸದಸ್ಯರ ಘೋಷಣೆಗಳ ಮಧ್ಯೆಯೇ ಸ್ಪೀಕರ್ ಸುಮಿತ್ರಾ ಮಹಾಜನ್ ಪ್ರಶ್ನೋತ್ತರ ಅವಧಿಯ ಕಲಾಪ ಮುಂದುವರಿಸಿದರು. ಈ ಹಂತದಲ್ಲಿ , ಕಳೆದ ಐದು ದಿನದಿಂದ ಒತ್ತಾಯಿಸುತ್ತಾ ಬಂದಿದ್ದರೂ ತಮಗೆ ವಿಷಯವನ್ನು ಪ್ರಸ್ತಾವಿಸಲು ಅವಕಾಶ ನೀಡಲಾಗುತ್ತಿಲ್ಲ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕಳವಳ ವ್ಯಕ್ತಪಡಿಸಿದರು. ಶೂನ್ಯ ವೇಳೆಯ ಕಲಾಪ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ನಡೆಸಿದರು.
ಐದನೇ ದಿನದ ಕಲಾಪದಲ್ಲಿ ಸದಸ್ಯರ ಹಾಜರಾತಿ ಕಡಿಮೆಯಿತ್ತು. ಪ್ರಧಾನಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರೂ ಹಾಜರಿರಲಿಲ್ಲ.