ಉಗಾಂಡದಲ್ಲಿ ಸಿಲುಕಿದ ಪಾಕ್ ಕ್ರಿಕೆಟಿಗರು
ಕರಾಚಿ, ಡಿ.22: ಪಾಕಿಸ್ತಾನದ ಖ್ಯಾತ ಕ್ರಿಕೆಟಿಗರಾದ ಸಯೀದ್ ಅಜ್ಮಲ್, ಯಾಸೀರ್ ಹಮೀದ್ ಮತ್ತು ಇಮ್ರನ್ ಫರ್ಹಾತ್ ಸೇರಿದಂತೆ 20 ಮಂದಿ ಪಾಕಿಸ್ತಾನದ ಕ್ರಿಕೆಟ್ ಆಟಗಾರರು ಟ್ವೆಂಟಿ-20 ಕ್ರಿಕೆಟ್ ಆಡಲು ಉಗಾಂಡಕ್ಕೆ ತೆರಳಿದವರು ವೇತನ ವಿವಾದದಿಂದಾಗಿ ಉಗಾಂಡದಲ್ಲಿ ಸಿಲುಕಿಕೊಂಡ ಘಟನೆ ವರದಿಯಾಗಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಅನುಮತಿ ಪಡೆದು ಉಗಾಂಡದ ಕಂಪಾಲಕ್ಕೆ ತೆರಳಿದ್ದರು. ಆದರೆ ಅಲ್ಲಿ ತಲುಪಿದಾಗ ಟ್ವೆಂಟಿ-20 ಲೀಗ್ ವೇತನ ವಿವಾದದಿಂದಾಗಿ ರದ್ದಾಗಿರುವ ವಿಚಾರ ಗೊತ್ತಾಯಿತು.
ಎರಡು ದಿನಗಳ ಆಟ ಮಳೆಯಿಂದಾಗಿ ರದ್ದಾದಾಗ ಪಾಕ್ ಕ್ರಿಕೆಟಿಗರು ಒಪ್ಪಂದದ ಮೊತ್ತದಲ್ಲಿ ಅರ್ಧದಷ್ಟನ್ನು ಪಾವತಿಸುವಂತೆ ಉಗಾಂಡ ಕ್ರಿಕೆಟ್ ಸಂಸ್ಥೆಯನ್ನು ಒತ್ತಾಯಿಸಿದರು ಎನ್ನಲಾಗಿದೆ.
ಟ್ವೆಂಟಿ-20 ಲೀಗ್‌ನ ಪ್ರಾಯೋಜಕರು ಪ್ರಾಯೋಜಕತ್ವವನ್ನು ಹಿಂಪಡೆದಿರುವ ಹಿನ್ನೆಲೆಯಲ್ಲಿ ಹಣ ನೀಡಲು ಸಾಧ್ಯವಿಲ್ಲ. ಸಂಸ್ಥೆಯ ಬಳಿ ಹಣವಿಲ್ಲ ಎಂದು ಉಗಾಂಡ ಕ್ರಿಕೆಟ್ ಸಂಸ್ಥೆ ಪಾಕ್ ಕ್ರಿಕೆಟಿಗರಿಗೆ ತಿಳಿಸಿತೆನ್ನಲಾಗಿದೆ.
ಪಾಕ್ ಕ್ರಿಕೆಟಿಗರು ಬೇರೆ ದಾರಿ ಕಾಣದೆ ತವರಿಗೆ ಮರಳಲು ವಿಮಾನ ನಿಲ್ದಾಣಕ್ಕೆ ಬಂದಾಗ ಅಲ್ಲಿ ಅವರಿಗೆ ಇನ್ನೊಂದು ಆಘಾತ ಕಾದಿತ್ತು. ಟ್ರಾವೆಲ್ ಏಜೆನ್ಸಿಗೆ ಸಂಘಟಕರು ಟಿಕೆಟ್‌ನ ಹಣ ಪಾವತಿಸಿರಲಿಲ್ಲ. ಇದರಿಂದಾಗಿ ಕಾಯ್ದಿರಿಸಲಾದ ಟಿಕೆಟ್‌ಗಳು ರದ್ದಾಗಿತ್ತು.
ಪಾಕ್ ಕ್ರಿಕೆಟಿಗರು ಮತ್ತೆ ಹೋಟೆಲ್‌ಗೆ ಮರಳಿದರು. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ನಡೆದಿರುವ ಘಟನೆಯ ಬಗ್ಗೆ ಮಾಹಿತಿ ನೀಡಿದರು ಎನ್ನಲಾಗಿದೆ. ಉಗಾಂಡದಲ್ಲಿ ಸಿಲುಕಿಕೊಂಡಿರುವ ಪಾಕ್‌ನ ಕ್ರಿಕೆಟಿಗರಿಗೆ ತವರಿಗೆ ವಾಪಸಾಗುವ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಇದೀಗ ಪಿಸಿಬಿ ತಯಾರಿ ನಡೆಸಿದೆ ಎಂದು ತಿಳಿದು ಬಂದಿದೆ. ಶನಿವಾರ ಪಾಕ್ ಕ್ರಿಕೆಟಿಗರು ತವರಿಗೆ ಬರುವ ನಿರೀಕ್ಷೆ ಇದೆ.