×
Ad

ಸಿಎಟಿ ತಡೆಯಾಜ್ಞೆ ತೆರವು ಕೋರಿ ಅರ್ಜಿ : ಹರ್ಯಾಣ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2017-12-23 20:21 IST

ಚಂಡೀಗಢ, ಡಿ.23: ಸರಕಾರೇತರ ನಾಗರಿಕ ಸೇವಾ ಅಧಿಕಾರಿಗಳ ನಾಮನಿರ್ದೇಶನ ಪ್ರಕ್ರಿಯೆಗೆ ಕೇಂದ್ರ ಆಡಳಿತಾತ್ಮಕ ಮಂಡಳಿ(ಸಿಎಟಿ) ನೀಡಿರುವ ತಡೆಯಾಜ್ಞೆ ತೆರವುಗೊಳಿಸಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯ ಹಿನ್ನೆಲೆಯಲ್ಲಿ ಹರ್ಯಾಣ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಲಾಗಿದೆ.

ಸಿಎಟಿ ಆದೇಶಕ್ಕೆ ತಡೆಯಾಜ್ಞೆ ಯಾಕೆ ನೀಡಬಾರದು ಎಂದು ತಿಳಿಸುವಂತೆ ನ್ಯಾಯಮೂರ್ತಿಗಳಾದ ಎ.ಕೆ.ಮಿತ್ತಲ್ ಹಾಗೂ ಅಮಿತ್ ರಾವಲ್ ಅವರನ್ನೊಳಗೊಂಡಿರುವ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನ ನ್ಯಾಯಪೀಠವು ಹರ್ಯಾಣ ಸರಕಾರಕ್ಕೆ ತಿಳಿಸಿದೆ. ಅಲ್ಲದೆ ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ) ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳೂ ಈ ನ್ಯಾಯಾಲಯ ಜಾರಿಗೊಳಿಸಲಿರುವ ಮುಂದಿನ ಆದೇಶಗಳಿಗೆ ಅಧೀನವಾಗಿರುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.

  ತಡೆಯಾಜ್ಞೆಯಿಂದ ನಾಮನಿರ್ದೇಶನ ಪ್ರಕ್ರಿಯೆಗೆ ತೊಂದರೆಯಾಗಿದೆ. ಪ್ರಕ್ರಿಯೆಯನ್ನು 2017ರ ಡಿ.31ಕ್ಕೆ ಮೊದಲು ಮುಗಿಸಬೇಕಿರುವ ಕಾರಣ ತಡೆಯಾಜ್ಞೆ ತೆರವುಗೊಳಿಸಬೇಕು ಎಂದು ಜಿಲ್ಲಾ ಯೋಜನಾಧಿಕಾರಿ ವಿಜೇಂದರ್ ಸಿಂಗ್ ಸಲ್ಲಿಸಿದ ಅರ್ಜಿಯಲ್ಲಿ ಕೋರಲಾಗಿದೆ.

 ಸರಕಾರೇತರ ನಾಗರಿಕ ಸೇವಾ ಅಧಿಕಾರಿಗಳ ಐದು ಸ್ಥಾನಗಳಲ್ಲಿ ಒಂದು ಐಎಎಸ್ ಸ್ಥಾನವನ್ನು ನಾಮನಿರ್ದೇಶನದ ಮೂಲಕ ಭರ್ತಿ ಮಾಡುವ ಸಂದರ್ಭ ಹರ್ಯಾಣ ಸರಕಾರವು ರಾಜ್ಯ ಬಿಜೆಪಿ ಮುಖಂಡರ ಸಂಬಂಧಿಕರ ಹೆಸರನ್ನು ಪ್ರಸ್ತಾವಿಸಿತ್ತು. ಹರ್ಯಾಣದ ಶಿಕ್ಷಣ ಸಚಿವ ರಾಮ್‌ವಿಲಾಸ್ ಶರ್ಮರ ಪುತ್ರಿ ಆಶಾ ಶರ್ಮರ ಹೆಸರು ಪ್ರಥಮ ಸ್ಥಾನದಲ್ಲಿದೆ. ಆದರೆ ಈ ಹುದ್ದೆಗೆ ಆಶಾ ಸಮರ್ಥ ಅಭ್ಯರ್ಥಿಯಲ್ಲ ಮತ್ತು ಹುದ್ದೆಗೆ ಅಗತ್ಯವಿರುವ ಅರ್ಹತಾ ಮಾನದಂಡವನ್ನು ಅವರು ಹೊಂದಿಲ್ಲ ಎಂದು ಹರ್ಯಾಣ ಸರಕಾರದ ಕೃಷಿ ಇಲಾಖೆಯ ಹೆಚ್ಚುವರಿ ನಿರ್ದೇಶಕ ಸುರೇಂದರ್ ಸಿಂಗ್ ದಹಿಯ ಆಕ್ಷೇಪ ಎತ್ತಿದ್ದರು. ಈ ಹಿನ್ನೆಲೆಯಲ್ಲಿ ನಾಮನಿರ್ದೇಶನ ಪ್ರಕ್ರಿಯೆಗೆ ಡಿ.4ರಂದು ಸಿಎಟಿ ತಡೆಯಾಜ್ಞೆ ನೀಡಿತ್ತು.

  ಅಲ್ಲದೆ ರಾಜ್ಯ ಸರಕಾರ ಸಲ್ಲಿಸಿದ್ದ ಪಟ್ಟಿಯಲ್ಲಿ ವಿಧಾನಸಭೆಯ ಉಪಸ್ಪೀಕರ್ ಸಂತೋಷ್ ಯಾದವ್ ಸೋದರ , 56ರ ಹರೆಯದ ಲಜ್‌ಪತ್ ರೈ ಹೆಸರು ಎರಡನೇ ಸ್ಥಾನದಲ್ಲಿದೆ. ಉಳಿದಂತೆ ದಂತ ಸೇವಾ ಇಲಾಖೆಯ ನಿರ್ದೇಶಕ ಪ್ರವೀಣ್ ಸೇಥಿ, ಹರ್ಯಾಣ ರಾಜಭವನದ ಆರೋಗ್ಯ ಸೇವಾಕಾರ್ಯದ ಉಸ್ತುವಾರಿ ಅಧಿಕಾರಿ ಡಾ ರಾಕೇಶ್ ತಲ್ವಾರ್ ಹಾಗೂ ಆ ಬಳಿಕದ ಸ್ಥಾನದಲ್ಲಿ ವಿಜೇಂದರ್ ಸಿಂಗ್ (ಅರ್ಜಿದಾರ)ಹೆಸರಿದೆ. ಈ ಪಟ್ಟಿಯನ್ನು ವಿರೋಧಿಸಿ ಪ್ರವೀಣ್ ಸೇಥಿ ಕೂಡಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News